ಬೆಂಗಳೂರು: ಶಿಗ್ಗಾವಿ ಸೇರಿ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ 2-3 ದಿನಗಳಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಉಪಚುನಾವಣೆಯಲ್ಲಿ ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಛೆಯಿಲ್ಲ. ನಾನು ಆ ಪ್ರಸ್ತಾವನೆಯನ್ನು ಮುಂದೆ ಇಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಅವರು ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ನನ್ನ ಪುತ್ರ ಎಲ್ಲಿಯೂ ಕ್ಷೇತ್ರದಲ್ಲಿ ಓಡಾಡಿಲ್ಲ. ನನ್ನ ಮಗನ ಹೆಸರನ್ನು ಬಹಳ ಜನರು ಸೂಚಿಸಿರಬಹುದು. ಆದರೆ ನಾವಂತೂ ಎಲ್ಲಿಯೂ ಹೆಸರು ಪ್ರಸ್ತಾವ ಮಾಡಿಲ್ಲ. ಅರ್ಜಿಯನ್ನೂ ಹಾಕಿಲ್ಲ ಎಂದರು. ಮಾಜಿ ಸಚಿವ ಮುರುಗೇಶ್ ನಿರಾಣಿ ಬಂದು ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕು. ಐವತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಶಿಗ್ಗಾವಿ ನಾನು ಪ್ರತಿನಿಧಿಸುವ ಕ್ಷೇತ್ರ ಆಗಿರುವುದರಿಂದ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದು ಹೇಳಿದರು.
ನಾವು ಐದಾರು ಜನ ಬಿಜೆಪಿ ಮುಖಂಡರು ಹೋಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಕೇಳಿದ್ದೇವೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿಯವರು ಸೇರಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.