ಹುಬ್ಬಳ್ಳಿ: ರಾಜ್ಯಾದ್ಯಂತ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿವಾದ ಮುಸ್ಲಿಮರ ಜಮೀನು, ಆಸ್ತಿಗೂ ತಟ್ಟಿರುವುದು ಗೊತ್ತಾಗಿದೆ. ಉತ್ತರ ಕರ್ನಾಟಕದ 6 ಜಿಲ್ಲೆಗಳ 400ರಷ್ಟು ಅಲ್ಪಸಂಖ್ಯಾಕರಿಗೂ ನೋಟಿಸ್ ಜಾರಿಯಾಗಿದ್ದು, ಕೋರ್ಟ್ಗೆ ಅಲೆದಾಡುತ್ತಿದ್ದಾರೆ.
ಬೀದರ್ ತಾಲೂಕಿನಲ್ಲಿ ವಕ್ಫ್ ಭೂ ವಿವಾದದ ಕಂಟಕ ಮುಸ್ಲಿಂ ರೈತರಿಗೂ ತಟ್ಟಿದ್ದು, 10 ವರ್ಷಗಳಿಂದ ಆಸ್ತಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಒಂದೂವರೆ ಸಾವಿರ ಎಕ್ರೆ ಕೃಷಿ ಭೂಮಿಯಲ್ಲಿ 900 ಎಕ್ರೆಗಿಂತಲೂ ಹೆಚ್ಚು ಭೂಮಿಗೆ ವಕ್ಫ್ ಆಸ್ತಿಯ ಮೊಹರು ಬಿದ್ದಿದೆ. ಇದರಲ್ಲಿ 200ಕ್ಕೂ ಹೆಚ್ಚು ಎಕ್ರೆ ಮುಸ್ಲಿಮ್ ರೈತರದು. ದಶಕಗಳಿಂದ ಇವರೂ ಹೋರಾಟ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ 2018ರಲ್ಲಿಯೇ ಸುಮಾರು 111 ರೈತರಿಗೆ ನೋಟಿಸ್ ಬಂದಿತ್ತು. ಇವರೆಲ್ಲ ಇತರ ರೈತರೊಂದಿಗೆ ವಕ್ಫ್ ಬೋರ್ಡ್ನ ನ್ಯಾಯಾಧಿಕರಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 35 ರೈತರ ಪೈಕಿ 15 ಮುಸ್ಲಿಂ ಕುಟುಂಬಸ್ಥರೂ ಸೇರಿದ್ದಾರೆ. ಧಾರವಾಡ ಜಿಲ್ಲೆಯ ಬಶೀರ್ ಎಂಬವರ 6 ಎಕ್ರೆಗೂ ಹೆಚ್ಚು ಜಮೀನಿಗೆ ವಕ್ಫ್ ಮೊಹರು ಬಿದ್ದಿದೆ. ಹಾವೇರಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ನೋಟಿಸ್ ಬಂದಿದೆ.
ವಿಜಯಪುರದಲ್ಲಿ ಹೆಚ್ಚು
ವಿವಾದದ ಕೇಂದ್ರಬಿಂದು ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಮುಸ್ಲಿಮರಿಗೆ ವಕ್ಫ್ ನೋಟಿಸ್ ಜಾರಿಯಾಗಿದೆ. ಒಂದು ತಿಂಗಳಿನಲ್ಲಿ ಜಿಲ್ಲೆಯ 433 ರೈತರಿಗೆ ನೋಟಿಸ್ ಜಾರಿ ಆಗಿತ್ತು. ಈ ಪೈಕಿ ಸುಮಾರು 300 ಜನ ಮುಸ್ಲಿಮರೇ ಇದ್ದಾರೆ.
“ವಕ್ಫ್ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಂ ಪ್ರಶ್ನೆ ಉದ್ಭವಿಸುವುದಿಲ್ಲ. ಇದರಲ್ಲಿ ಮುಸ್ಲಿಮರೇ ಹೆಚ್ಚು ಬಾಧಿತರಿದ್ದಾರೆ. ಇನಾಂ ರದ್ದು ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಯಡಿ ಹೆಚ್ಚು ಜಮೀನು ಹೋಗಿದೆ. ಇವೆಲ್ಲವೂ ಕಾಂಗ್ರೆಸ್ ಸರಕಾರಗಳ ಕಾಲದಲ್ಲೇ ನಡೆದಿವೆ. ಬಿಜೆಪಿಯವರಿಗೆ ವಕ್ಫ್ ಬಗ್ಗೆ ಸರಿಯಾಗಿ ಗೊತ್ತಿಲ್ಲ. ರಾಜಕೀಯ ಕಾರಣಕ್ಕೆ ವಕ್ಫ್ ಹೆಸರು ಬಳಕೆ ಮಾಡಲಾಗುತ್ತಿದೆ.”
-ಎಂ.ಸಿ. ಮುಲ್ಲಾ, ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಉಪಾಧ್ಯಕ್ಷ