ದೇವನಹಳ್ಳಿ: ಪ್ರತಿ ರೈತರು ನಾಟಿ ಹಸುಗಳ ಗೊಬ್ಬರವನ್ನು ಬಳಸಿಕೊಂಡು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಾವಯುವ ಕೃಷಿ ತಜ್ಞ ಅನಂತ ಶಯನ ಸಲಹೆ ನೀಡಿದರು. ನಗರದ ತಾಲೂಕು ಸಹಾಯಕ ಕೃಷಿ ಇಲಾಖೆ ನಿರ್ದೇಶಕರ ಕಚೇರಿ ಆವರಣದಲ್ಲಿ ತಾಲೂಕು ಕೃಷಿ ಇಲಾಖೆ ಮತ್ತು ಕಸಬಾ ಹೋಬಳಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ನೂತನ ಪದ್ಧತಿ ಅಳವಡಿಸಿಕೊಳ್ಳಿ: ಹಿಂದಿನ ಕಾಲದಲ್ಲಿ 108 ವಿಧದ ನಾಟಿಗಳಿದ್ದವು. ಈಗ 36 ಪ್ರಭೇದಗಳು ಮಾತ್ರ ಉಳಿದುಕೊಂಡಿವೆ. ನಾಟಿ ಹಸುಗಳ ಗೊಬ್ಬರ ಮತ್ತು ಗಂಜಲ ಸಂಗ್ರಹಿಸಿ, ಬೆಳೆಗಳಿಗೆ ನೀಡಿದರೆ ಹೆಚ್ಚಿನ ಇಳುವರಿ ಕಾಣಬಹುದು. ನೈಸರ್ಗಿಕ ಕೃಷಿಗೆ ಬಜೆಟ್‌ನಲ್ಲಿ 50 ಕೋಟಿ ರೂ.ಮೀಸಲು ಇಡಲಾಗಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕು. ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಕಡಿಮೆಯಾಗಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ರೈತರು, ಜೀವಾಮೃತ ಮತ್ತು ಬೀಜಾಮೃತ ಪದ್ಧತಿಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಬಿತ್ತನೆ ಬೀಜದ ಲಭ್ಯವಿರಲಿ: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ತಮ್ಮ ಹಳೆಯ ಕಾಲದ ಪದ್ಧತಿ ಬಿಟ್ಟು ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡುವುದು ಅಗತ್ಯವಾಗಿದೆ. ಜೂನ್ ತಿಂಗಳ ಮುಂಗಾರು ಇರುವುದರಿಂದ ಸಕಾಲದಲ್ಲಿ ಬಿತ್ತನೆ ಬೀಜ ಸಿಗುವಂತೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಗ್ರಾಪಂ ಮಟ್ಟಕ್ಕೆ ಯೋಜನೆಗಳು ತಲುಪಲಿ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳ ಮಾತನಾಡಿ, ಇಲಾಖೆಯಲ್ಲಿನ ಎಲ್ಲಾ ಯೋಜನೆಗಳನ್ನು ಗ್ರಾಪಂ ಮಟ್ಟಕ್ಕೆ ತಲುಪಿಸಲಾಗಿದೆ. ಮುಂಗಾರು ಪೂರ್ವದಲ್ಲೇ ರೈತರಿಗೆ ಜಾಗƒತಿ ಮೂಡಿಸುತ್ತಿರುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಯಾವ ಇಲಾಖೆಯಲ್ಲಿ ಯಾವ ಸೌಲಭ್ಯಗಳು ಸಿಗುತ್ತದೆ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣವನ್ನು ಮಾಡಲಾಗಿದೆ. ಮಳೆ ನೀರು ಭೂಮಿಗೆ ಇಂಗುವಂತೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ತಾಪಂ ಉಪಾಧ್ಯಕ್ಷೆ ನಂದಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಗೋಪಾಲಸ್ವಾಮಿ, ಶೈಲಜಾ, ಚೆ„ತ್ರ, ಆರ್.ಎ. ಮುನೇಗೌಡ, ಅನ್ನಪೂರ್ಣಮ್ಮ, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಪಿ.ಮುನಿರಾಜು, ಎಚ್.ಎಂ. ರವಿಕುಮಾರ್, ಆನಂದ್, ನಾರಾಯಣಸ್ವಾಮಿ, ನಟರಾಜ್, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್, ತಾಲೂಕು ಸೊಸೆ„ಟಿ ಉಪಾಧ್ಯಕ್ಷೆ ಭಾರತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಿ.ಮಂಜುನಾಥ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿದೇವಿ, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್, ರೈತ ಮುಖಂಡರಾದ ಹರೀಶ್, ಕೃಷ್ಣಪ್ಪ, ಮುನಿನಾರಾಯಣಪ್ಪ, ಬಿದಲೂರು ರಮೇಶ್, ಚಂದ್ರಶೇಖರ್ ಇದ್ದರು.