Advertisement

ಅನ್ನ-ನೀರು-ಜ್ಞಾನದ ರೂಪದಲ್ಲಿ ಶಿವದರ್ಶನ ಪಡೆಯಿರಿ

02:28 PM Feb 25, 2017 | |

ಹುಬ್ಬಳ್ಳಿ: ಅನ್ನ, ನೀರು ಹಾಗೂ ಜ್ಞಾನದ ರೂಪದಲ್ಲಿ ಶಿವದರ್ಶನ ಪಡೆದುಕೊಳ್ಳಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಅದಮ್ಯ ಚೇತನ ಸೇವಾ ಉತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆಯ ಸಹಯೋಗದಲ್ಲಿ ದೇಶಪಾಂಡೆ ನಗರದ ಜಿಮ್‌ಖಾನಾ ಮೈದಾನದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರವಚನ ನೀಡಿದರು.

Advertisement

ದೇವರು ಅನ್ನ, ನೀರು ಹಾಗೂ ಜ್ಞಾನದ ರೂಪದಲ್ಲಿ ಬರುತ್ತಾನೆ. ಅನ್ನ, ನೀರು ಇದ್ದ ಮನೆ ಅರಮನೆ ಹಾಗೂ ವಜ್ರ-ವೈಢೂರ್ಯಗಳಿದ್ದರೂ ಅನ್ನ, ನೀರು ಇರದ ಅರಮನೆ ಬಡಮನೆ. ಯಾರ ಮನೆಯಲ್ಲಿ ಅನ್ನ, ನೀರು ಇದೆಯೋ ಅವರೆಲ್ಲರೂ ಸಿರಿವಂತರು ಎಂದರು. ಅನ್ನ, ನೀರು ಹಾಗೂ ಜ್ಞಾನ ಇವು ಅಮೂಲ್ಯವಾದವು. ಬಂಗಾರ, ಬೆಳ್ಳಿ ಇಲ್ಲದೇ ಬದುಕಬಹುದು, ಆದರೆ ಅನ್ನ, ನೀರು, ಜ್ಞಾನ ಇಲ್ಲದೇ ಬದುಕಲು ಸಾಧ್ಯವಿಲ್ಲ.

ಅನ್ನ, ನೀರು ಹಾಗೂ ಜ್ಞಾನದ ಮಹತ್ವ ತಿಳಿಯುವುದೇ ಶಿವರಾತ್ರಿ ಎಂದರು. ಹಸಿದು ಮನೆಗೆ ಬಂದಾಗ ನಮಗೆ ಸಿಗುವ ತುತ್ತು ಅನ್ನ, ಬಟ್ಟಲು ನೀರು ಶಿವನ ಪ್ರಸಾದ ಎಂದೇ ಭಾವಿಸಿ ಸೇವಿಸಬೇಕು. ಚಿನ್ನ, ಬೆಳ್ಳಿಯಿಂದ ಹೊಟ್ಟೆ ತುಂಬುವುದಿಲ್ಲ. ಹೊಟ್ಟೆ ತುಂಬಲು ಅನ್ನ, ನೀರು ಅವಶ್ಯ. ನಮ್ಮ ಹಿರಿಯರು ಅನ್ನ, ನೀರಿನ ಮಹತ್ವವೇನೆಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಅನ್ನ, ನೀರು ನೀಡಿದ್ದಕ್ಕೆ ನಾವು ಶಿವನಿಗೆ ಕೃತಜ್ಞರಾಗಿರಬೇಕು ಎಂದರು. 

ಹೊಟ್ಟೆಗೆ ಚೂರು ರೊಟ್ಟಿ, ದಾಹ ತಣಿಸಲು ನೀರು, ಬದುಕಲು ಜ್ಞಾನ ಇವು ದೊಡ್ಡ ಸಂಪತ್ತುಗಳು ಎಂದರು. ಅನ್ನ ದೇವರ ಮುಂದೆ ಇನ್ನು ದೇವರು ಇಲ್ಲ ಲೋಕಕ್ಕೆ ಅನ್ನವೇ ದೇವರು ಎಂದು ಸರ್ವಜ್ಞ ಹೇಳಿದ್ದಾನೆ. ಹಸಿದು ಬಂದವರಿಗೆ ಅನ್ನ ನೀಡುವುದು ಪುಣ್ಯ ಕಾರ್ಯ. ಅದಮ್ಯ ಚೇತನ ಸಂಸ್ಥೆ ಪ್ರತಿದಿನ ಸಹಸ್ರಾರು ಶಾಲಾ ಮಕ್ಕಳಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಮಾಡುತ್ತಿದೆ. ಇದು ಶ್ಲಾಘನೀಯ ಕಾರ್ಯ ಎಂದರು. 

ಮಣ್ಣಿನ ಮಹಿಮೆ ಅಗಾಧವಾದುದು. ಮನುಷ್ಯನ ಜೀವನಕ್ಕೆ ಅಗತ್ಯವೆನಿಸುವ ಹಣ್ಣು, ಕಾಯಿ, ಕಾಳು, ಎಲೆ, ಹೂವುಗಳು ಮಣ್ಣಿನಿಂದಲೇ ಲಭಿಸುತ್ತವೆ ಎಂದರು. ಶಿವ ಎಂದರೆ ಶಾಂತಿ, ಸಮಾಧಾನ. ಮನಸು ಶಾಂತವಾಗಿರುವುದೇ ಶಿವ. ವರ್ಷದುದ್ದಕ್ಕೂ  ಶಾಂತಿ-ಸಮಾಧಾನದಿಂದ ಬದುಕಲು ಶಿವರಾತ್ರಿಯಂದು ಪಣ ತೊಡಬೇಕು. ಅಧ್ಯಾತ್ಮದ ಮಹಿಮೆ, ಅಭಿರುಚಿ ಅನುಭವಿಸಲು ನಾವು ಸೇರಿದ್ದೇವೆ. ಇದು ಸೇವಾ ಸಮಾವೇಶ, ಶಿವ ಸಮಾವೇಶ.

Advertisement

ಶಿವನನ್ನು ಸ್ಮರಿಸುವುದಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವುದು ಶ್ಲಾಘನೀಯ ಎಂದರು. ಪ್ರವಚನಕ್ಕೂ ಮುನ್ನ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಯುವ ಜನಾಂಗಕ್ಕೆ ಶಿವರಾತ್ರಿಯ ಮಹತ್ವ ತಿಳಿಸಿಕೊಡುವುದು ಮುಖ್ಯ. ಪ್ರತಿ ವರ್ಷ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಆಯೋಜಿಸಬೇಕು. ಅದಮ್ಯ ಚೇತನ ಸಂಸ್ಥೆ ಶಾಲಾ ಮಕ್ಕಳಿಗೆ ಉಚಿತವಾಗಿ ಭೋಜನ ನೀಡುತ್ತಿದ್ದರೆ, ಕ್ಷಮತಾ ಸೇವಾ ಸಂಸ್ಥೆ ಬಡ ಜನರಿಗೆ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಿದೆ ಎಂದರು. 

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಮಾತೇ ಕೃತಿಯಾದಾಗ ಮಾನವ ಮಹದೇವನಾಗುತ್ತಾನೆ ಎಂದು ಹಿರಿಯರು  ಹೇಳಿದ್ದಾರೆ. ಅದೇ ರೀತಿ ನುಡಿದಂತೆ ನಡೆಯುವವರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ಅಂಥ ಸರಳ ಸಜ್ಜನಿಕೆಯ ಸ್ವಾಮೀಜಿ ಶಿವರಾತ್ರಿ ಕಾರ್ಯಕ್ರಮ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು. ಅದಮ್ಯ ಚೇತನದ ನಂದಕುಮಾರ ಪ್ರಾಸ್ತಾವಿಕ ಮಾತನಾಡಿ, ಅದಮ್ಯ ಚೇತನ  ಸಂಸ್ಥೆ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದು,

ಪ್ರಸ್ತುತ ಪ್ರತಿದಿನ 81,000 ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ವಿತರಿಸುತ್ತಿದೆ. ಈವರೆಗೆ 12ಕೋಟಿ ಭೋಜನ ವಿತರಿಸಲಾಗಿದೆ ಎಂದರು. ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಜಿಮ್‌ಖಾನ ಸಂಸ್ಥೆ ಅಧ್ಯಕ್ಷ ಸಿ.ಸಿ.ದೀಕ್ಷಿತ, ಗೋವಿಂದ ಜೋಶಿ. ಅಚ್ಯುತ್‌ ಲಿಮಯೆ ವೇದಿಕೆ ಮೇಲಿದ್ದರು. ನಂತರ ಸಂಗೀತ ಕಾರ್ಯಕ್ರಮಗಳು ನಡೆದವು.  

Advertisement

Udayavani is now on Telegram. Click here to join our channel and stay updated with the latest news.

Next