ವಾಡಿ: ನಾಯಿಂದ (ಕ್ಷೌರಿಕ) ಸಮುದಾಯಕ್ಕೆ ಕೆಲ ಮನುಷ್ಯ ವಿರೋಧಿ ಮನಸ್ಸುಗಳು ಅಸಂವಿಧಾನಿಕ ಪದಗಳಿಂದ ನಿಂದಿಸಿ ಅಪಮಾನಿಸುತ್ತಿವೆ. ಇದಕ್ಕೆ ಕಾನೂನಾತ್ಮಕ ಕಡಿವಾಣ ಹಾಕಲು ಸರಕಾರ ಮುಂದಾಗಬೇಕು ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.
ಕೊಂಚೂರು ಸವಿತಾ ಪೀಠದಲ್ಲಿ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಹಾಗೂ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷೌರ ಮಾಡುವುದು ನಾಯಿಂದ ಸಮುದಾಯದ ಸ್ವಾಭಿಮಾನದ ಕುಲಕಸುಬು. ಆದರೆ ಕ್ಷೌರಿಕ ಸಮುದಾಯ ಮಾನಸಿಕ ಅಸ್ಪೃಶ್ಯತೆ ಅನುಭವಿಸಿ ಸಾಮಾಜಿಕವಾಗಿ ಅವಮಾನಕ್ಕೀಡಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಕಡಿವಾಣ ಹಾಕಬೇಕಾಗಿದೆ. ಮಾನಸಿಕ ಅಸ್ಪೃಶ್ಯತೆ ಎಂಬುದು ಮಿದುಳು ಸಾಯಿಸುವ ಮಹಾರೋಗವಾಗಿದೆ. ಸವಿತಾ ಬಂಧುಗಳನ್ನು ಸಹೋದರ ಸಮಾನತೆಯಿಂದ ಕಾಣುವಂತಾಗಬೇಕು ಎಂದು
ಹೇಳಿದರು. ರಾಜ್ಯ ಸಮ್ಮಿಶ್ರ ಸರಕಾರ ಈ ವರ್ಷ ಸವಿತಾ ಜನಾಂಗಕ್ಕೆ ಮಹತ್ತರ ಕೊಡುಗೆ ಕೊಟ್ಟಿದೆ. ಸರಕಾರದಿಂದ ಸವಿತಾ ಮಹರ್ಷಿಗಳ ಜಯಂತಿ ಘೋಷಣೆ ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಜತೆಗೆ 25 ಕೋಟಿ ರೂ. ಅನುದಾನ ಒದಗಿಸಿರುವುದು ಹರ್ಷದಾಯಕ ಸಂಗತಿಯಾಗಿದೆ. ಸವಿತಾ ಸಮಾಜವನ್ನು 2ಎ ಪಂಗಡದಿಂದ ಪ್ರವರ್ಗ 1ಕ್ಕೆ ಸೇರಿಸಬೇಕು.
ಹಂಪಿ ವಿವಿಗೆ ಸವಿತಾ ಕುಲಶಾಸ್ತ್ರ ಅಧ್ಯಯನ ಕೇಂದ್ರ ಮಂಜೂರಾಗಿದ್ದು, ಆದಷ್ಟು ಬೇಗ ಆರಂಭಿಸಬೇಕು. ಇದರಿಂದ ನಮ್ಮ ಸಮುದಾಯದ ನೈಜ ಇತಿಹಾಸ ಹೊರಬರಲಿದೆ ಎಂದು ಹೇಳಿದರು. ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ರಮೇಶ ಚಿನ್ನಾಕರ, ಜಿಲ್ಲಾ ಗೌರವಾಧ್ಯಕ್ಷ ಅಶೋಕ ಡೈಮಂಡ್, ಜಿಲ್ಲಾಧ್ಯಕ್ಷ ನರಸಿಂಹ ಮೋತಕಪಲ್ಲಿ, ಜಿಲ್ಲಾ ಉಪಾಧ್ಯಕ್ಷರು ಪ್ರಕಾಶ ಕೊಟನೂರ, ಯಾದಗಿರಿ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕರ, ಮಠದ ಕಾರ್ಯದರ್ಶಿ ಶರಣಪ್ಪ ಬಳ್ಳಾರಿ, ಮುಖಂಡರಾದ ವೆಂಕಟೇಶ ವೆಲ್ಕೂರ, ಅಂಬ್ರೀಶ ಸಿಂಧನೂರ, ನಾಮದೇವ ನಾಗರಾಜ, ಸುಭಾಷ ಬಾದಾಮಿ, ರಾಜು ಶಿವುಪುರ, ಅಂಬ್ರೀಶ ಕಡದರಾಳ, ಸಂತೋಷ ಕೊಟನೂರ, ಮಲ್ಲಣ್ಣ ವಡಗೇರಿ, ಆನಂದ ವಾರಿಕ ಕಮಲಾಪುರ, ಬಸವರಾಜ ಜೇವರ್ಗಿ, ವೆಂಕಟೇಶ ಶಹಾಪುರ, ರಾಘವೇಂದ್ರ ಭಂಡಾರಿ ಪಾಲ್ಗೊಂಡಿದ್ದರು.
ವಾಡಿ ನಿಖೀತಾ ಆಸ್ಪತ್ರೆಯ ಡಾ| ಶ್ರವಣಕುಮಾರ ತಂಗಡಗಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶ್ರೀಧರಾನಂದ ಸ್ವಾಮೀಜಿ ಹಾಗೂ ಚೇತನ ಭಟ್ಟರಿಂದ ಸವಿತೃ ಹೋಮ ನೆರವೇರಿಸುವ ಮೂಲಕ ಸವಿತಾ ಸಮಾಜದ ಹನ್ನೊಂದು ಜನರಿಗೆ ಜನಿವಾರ ಧಾರಣೆ ನಡೆಯಿತು.