Advertisement

ಬಯಲು ಶೌಚಮುಕ್ತ ಘೋಷಣೆಗೆ ಸಿದ್ಧರಾಗಿ: ಸಿಇಒ ಅಶ್ವತಿ

02:33 PM Jul 14, 2017 | |

ದಾವಣಗೆರೆ: ಈ ವರ್ಷದ ಅಂತ್ಯದ ವೇಳೆ ಇಡೀ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಬೇಕಾದ ಎಲ್ಲಾ
ಕ್ರಮ ವಹಿಸಲು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಅಶ್ವತಿ ನೋಡೆಲ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಗುರುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸ್ವತ್ಛ ಭಾರತ್‌ ಮಿಷನ್‌ನ ನೋಡೆಲ್‌ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ,
ಮಾತನಾಡಿದ ಅವರು, ಹೊನ್ನಾಳಿ, ಹರಿಹರ, ದಾವಣಗೆರೆ, ಚನ್ನಗಿರಿ ತಾಲ್ಲೂಕುಗಳನ್ನು ಅಕ್ಟೋಬರ್‌ 2ರ ವೇಳೆಗೆ ಹಾಗೂ ಜಗಳೂರು ಹರಪನಹಳ್ಳಿ ತಾಲ್ಲೂಕುಗಳನ್ನು ಡಿಸೆಂಬರ್‌ ವೇಳೆಗೆ ಬಯಲು ಶೌಚಮುಕ್ತ ತಾಲೂಕುಗಳೆಂದು ಘೋಷಿಸಲು ಕ್ರಮ ವಹಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 2,82,278 ಕುಟುಂಬಗಳಿವೆ. ಈ ಪೈಕಿ 1,97,069 ಕುಟುಂಬಗಳಿಗೆ ಈಗಾಗಲೇ ಶೌಚಾಲಯ ಸವಲತ್ತು ಸಿಕ್ಕಿದೆ. ಅಲ್ಲಿಗೆ ಶೇ.70ರಷ್ಟು ಕುಟುಂಬಗಳು ಶೌಚಾಲಯ ಹೊಂದಿದಂತಾಗಿದ್ದು, ಉಳಿದ 85,209 ಕುಟುಂಬಗಳಿಗೆ ಶೌಚಾಲಯ
ಕಟ್ಟಿ ಕೊಡಬೇಕಿದೆ. ಈ ಕಾರ್ಯ ತ್ವರಿತ ಗತಿಯಲ್ಲಿ ಮುಗಿಸಿ ಎಂದರು. ನೋಡೆಲ್‌ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸದ ಜೊತೆಗೆ ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು. ಗ್ರಾಮೀಣ ಭಾಗಕ್ಕೆ ಭೇಟಿ ನೀಡಬೇಕು. ತಾಲ್ಲೂಕು ಮಟ್ಟದಲ್ಲಿ ನೋಡೆಲ್‌ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಪ್ರಗತಿ ಪರಿಶೀಲಿಸಬೇಕು. ಜನರಲ್ಲಿ ಅರಿವು ಮೂಡಿಸಿ, ಶೌಚಾಲಯ ನಿರ್ಮಾಣಕ್ಕೆ
ಸೂಚಿಸಬೇಕು ಎಂದು ಅವರು ತಿಳಿಸಿದರು. 

ಶೌಚಾಲಯ ಕಟ್ಟಿಕೊಳ್ಳಲು ಇದೀಗ ಜನ ಸಹ ಮುಂದೆ ಬರುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಪೂರ್ತಿ ನಾವು 19,000 ಶೌಚಾಲಯ ಮಾತ್ರ ಕಟ್ಟಿದ್ದೆವು. ಈ ಆರ್ಥಿಕ ವರ್ಷ ಆರಂಭವಾಗಿ ಇನ್ನೂ 3 ತಿಂಗಳು ಕಳೆದಿದ್ದು, ಈಗಾಗಲೇ 10 ಸಾವಿರ ಶೌಚಾಲಯ  ನಿರ್ಮಾಣ ಮಾಡಲಾಗಿದೆ. ಇದೇ ವೇಗ ಮುಂದುವರಿದರೆ ಶೀಘ್ರ ನಮ್ಮ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಬಹುದು. ನವೆಂಬರ್‌ ವೇಳೆ ಬಯಲು ಶೌಚಮುಕ್ತ ಮಾಡುವ ಗುರಿ ಇಟ್ಟುಕೊಂಡು ಕೆಲಸಮಾಡಿ. ಜಾಗೃತಿ ಮೂಡಿಸಲು ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಿ,
ಅವರಿಗೆ ಒಂದು ಶೌಚಾಲಯ ನಿರ್ಮಾಣ ಕಾರ್ಯ ಆದರೆ 150 ರೂ.ಗಳ ಪ್ರೇರೇಪಣಾ ರೂಪದಲ್ಲಿ ನೀಡಲಾಗುವುದು ಎಂದು ಅವರು
ಹೇಳಿದರು. ಮಿಷನ್‌ನ ಯೋಜನಾ ನಿರ್ದೇಶಕ ಡಾ| ರಂಗಸ್ವಾಮಿ ಸಭೆ ಆರಂಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸ್ವತ್ಛ ಭಾರತ ಮಿಷನ್‌ ಜಾರಿಗಾಗಿ ಹೋಬಳಿ ಮಟ್ಟದಲ್ಲಿ ನೋಡೆಲ್‌ ಅಧಿಕಾರಿಗಳನ್ನು ನೇಮಿಸಿ, ಜವಾಬ್ದಾರಿ ವಹಿಸಲಾಗಿದೆ ಎಂದರು. ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ವಿವಿಧ ಇಲಾಖೆಯಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಸಾಮೂಹಿಕ ಸೀಮಂತ
ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಸಿದರೆ ಸೀಮಂತ ಕಾರ್ಯ ಹಮ್ಮಿಕೊಂಡು ಅವರನ್ನು ಸನ್ಮಾನಿಸಲಾಗುವುದು. ಈ ಕುರಿತು ವ್ಯಾಪಕ ಪ್ರಚಾರ ಮಾಡಿ. ಜಿಲ್ಲೆಯಲ್ಲಿ ಹಾಲಿ 15,600 ಗರ್ಬಿಣಿಯರಿದ್ದು, ಇವರಿಗೆ ಈ ಕುರಿತು ಮಾಹಿತಿ ನೀಡಿ. ಜೊತೆಗೆ ಶಾಲಾಮಕ್ಕಳಿಗೆ ಪ್ರಾರ್ಥನೆ ವೇಳೆ ಕರಪತ್ರ ನೀಡಿ, ಶೌಚಾಲಯ ಇಲ್ಲದವರು ಇಲ್ಲಿಯೇ ಅರ್ಜಿ ಸಲ್ಲಿಸಿ, ಶೌಚಾಲಯ ನಿರ್ಮಾಣ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿ.
ಎಸ್‌. ಅಶ್ವತಿ, ಜಿಪಂ ಸಿಇಒ.

Advertisement
Advertisement

Udayavani is now on Telegram. Click here to join our channel and stay updated with the latest news.

Next