ದಾವಣಗೆರೆ: ಆಂಗ್ಲ ಶಾಲೆಯಲ್ಲಿ ಕಲಿತರೆ ಮಕ್ಕಳು ದೊಡ್ಡ ಹುದ್ದೆ ಅಲಂಕರಿಸುತ್ತಾರೆಂಬ ಭಾವನೆ ಅಷ್ಟು ಸರಿಯಲ್ಲ. ಜ್ಞಾನ ಗ್ರಹಿಕೆ ಆಗುವುದೇ ಮಾತೃಭಾಷೆಯಲ್ಲಿ. ಕನ್ನಡ ನಮಗೆ ಹೃದಯ ಭಾಷೆಯಾಗಿದ್ದು, ಹತ್ತನೇ ತರಗತಿವರೆಗೆ ಮಕ್ಕಳು ಕನ್ನಡ ಭಾಷೆಯಲ್ಲಿಯೇ ಓದುವುದು ಒಳಿತು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ತಾಲೂಕಿನ ಕಬ್ಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುರಾರ್ಜಿ ಕಲಾ ಬಳಗ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಬ್ಬೂರು ಸಾಂಸ್ಕೃತಿಕ ಸಂಭ್ರಮ ಹಾಗೂ “ಕನ್ನಡಕ್ಕಾಗಿ ನಾವು ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಶಾಲೆಗೆ ಮಕ್ಕಳನ್ನು ಕಳುಹಿಸುವ ವ್ಯಾಮೋಹದಿಂದ ಪೋಷಕರು ಹೊರಬರಬೇಕು. ಜಗತ್ತಿನ ದೊಡ್ಡ ಕಂಪನಿಗಳಲ್ಲಿ ಕನ್ನಡದ ಬಾವುಟ ಹಾರಿಸಿದ ಬಹುತೇಕರು ಕನ್ನಡ ಶಾಲೆಗಳಲ್ಲಿ ಕಲಿತವರಾಗಿದ್ದಾರೆ ಎಂಬುದನ್ನು ಅರಿಯಬೇಕು. ಮಕ್ಕಳಿಗೆ ವಿದ್ಯೆ ಜೊತೆ ಒಳ್ಳೆಯ ಸಂಸ್ಕಾರ ನೀಡುವ ಕರ್ತವ್ಯ ಪೋಷಕರದ್ದಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ನಡುವೆ ಸಾಮರಸ್ಯ ಬೆಸೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್‌ಗಳು ಜನರನ್ನು ಆಕರ್ಷಣೆ ಮಾಡುತ್ತಿದ್ದು, ಸಂಸ್ಕೃತಿ, ಜಾನಪದ, ಭಾವಗೀತೆ, ವಚನಗಾಯನಗಳು ಕಣ್ಮರೆಯಾಗುತ್ತಿವೆ. ಈ ಕಾರಣದಿಂದ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಆಯೋಜಿಸಲಾಗಿದೆ. ಶುದ್ಧವಾಗಿ ಕನ್ನಡ ಮಾತನಾಡುವವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಮುರಾರ್ಜಿ, ಸತೀಶ್‌ಕುಮಾರ್ ಜಟ್ಟಿ, ತ್ರಿವೇಣಿ, ಬಿ.ಬಿ. ನಿಂಗಪ್ಪ ಇತರರು ಜಾನಪದ ಗೀತೆ, ವಚನಗೀತೆ, ದೇಶಭಕ್ತಿ ಗಾಯನ ನಡೆಸಿಕೊಟ್ಟರು. ಇಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ನಡೆಸಿಕೊಟ್ಟ ಸಾಮೂಹಿಕ ನೃತ್ಯ ಕಾರ್ಯಕ್ರಮ ನೋಡುಗರ ಮನಸೂರೆಗೊಂಡಿತು. ಅತ್ತಿಗೆರೆ ಗ್ರಾಪಂ ಅಧ್ಯಕ್ಷೆ ಯಶೋದಮ್ಮ ಚಂದ್ರಪ್ಪ, ಗ್ರಾಪಂ ಸದಸ್ಯ ಪಿ.ಎಂ. ಶಿವಕುಮಾರ್, ಆರ್. ಕಲ್ಲೇಶ್, ಎನ್.ಎಂ. ಕೋಟಿ, ವಿಜಯಮ್ಮ, ಪಾರ್ವತಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಶರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಅಂತಃ ಶಕ್ತಿಯಾಗಲಿ
ನಿರಂತರ ಶ್ರಮಪಡುವ ವ್ಯಕ್ತಿಗೆ ಬಡತನ ಅಡ್ಡಿಯಾಗುವುದಿಲ್ಲ. ಶ್ರಮಪಟ್ಟು ಕನ್ನಡ ಶಾಲೆಯಲ್ಲಿಯೇ ಓದಿ ಉನ್ನತ ಹುದ್ದೆ ಅಲಂಕರಿಸಬಹುದು. ಜಡಗೊಂಡ ಮನಸ್ಸುಗಳಿಗೆ ಸಂಗೀತ ಉತ್ಸಾಹ, ಸ್ಫೂರ್ತಿ ನೀಡಿ ಮತ್ತಷ್ಟು ಕೆಲಸ ಮಾಡಲು ಉತ್ತೇಜಿಸುತ್ತದೆ. ಕನ್ನಡವೇ ನಮ್ಮ ಅಂತಃಶಕ್ತಿಯಾಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದರು.