Advertisement

ಉಚಿತ ಅನಿಲ ದೊರೆತರೂ ದುಡ್ಡು ಕಕ್ಕಬೇಕು!

09:08 AM Jan 29, 2018 | |

ಬೆಳ್ತಂಗಡಿ: ವಿವಿಧ ಭಾಗ್ಯಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅಡುಗೆ ಅನಿಲ ಉಚಿತವಾಗಿ ದೊರೆತರೂ ಅನಿಲ ಕಂಪೆನಿಗೆ ಸಾಗಾಟ ವೆಚ್ಚ ಪಾವತಿಸಬೇಕು! ಇದು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯ ಅಲ್ಲ, ಬಿಸಿಯೂಟ ಒದಗಿಸುವ ಶಾಲೆಗಳಿಗೂ ಈ ದಂಡ ತಪ್ಪಿಲ್ಲ. ಈ ಸಮಸ್ಯೆ ರಾಜ್ಯಾದ್ಯಂತ ಇದೆ.

Advertisement

ಉಚಿತ ಸಂಪರ್ಕ
ಸೀಮೆಎಣ್ಣೆ ಬಳಕೆಯನ್ನು ನಿಲ್ಲಿಸಲು ಗ್ರಾಮಾಂತರದ ಜನರಿಗೆ ಉಚಿತವಾಗಿ ಅಡುಗೆ ಅನಿಲ ಒದಗಿಸುವ ಯೋಜನೆ ಬಂತು. ಬೇರೆ ಬೇರೆ ಯೋಜನೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಉಚಿತ ಅನಿಲ ಭಾಗ್ಯ ದೊರೆಯಿತು. ಫಲಾನುಭವಿಗಳಿಗೆ ಸಂಪರ್ಕ ಉಚಿತವೇನೋ ನಿಜ, ಆದರೆ ಸಾಗಾಟ ವೆಚ್ಚ ಎಂದು ಅನಿಲ ಸಿಲಿಂಡರ್‌ ಸರಬರಾಜು ಏಜೆನ್ಸಿಯವರು ಹಣ ವಸೂಲಿ ಮಾಡು ತ್ತಿದ್ದಾರೆ. ಸಣ್ಣ ಮೊತ್ತವಲ್ಲವೆ ಎಂದು ಪಾವತಿ ಮಾಡಲು ಆರಂಭಿಸಿದವರಿಗೆ ಈಗ 70 ರೂ., 90 ರೂ. ಎಂಬ ಅಧಿಕ ಮೊತ್ತ ತಲೆಶೂಲೆ ತರತೊಡಗಿದೆ.

ಸರಕಾರದಿಂದ ಹಣ
ಅಡುಗೆ ಅನಿಲ ಸಂಪರ್ಕ ಪಡೆಯುವಾಗ ಸಂಬಂಧಪಟ್ಟ ತೈಲ ಕಂಪೆನಿ/ ಏಜೆನ್ಸಿ ಯಲ್ಲಿ ಭದ್ರತಾ ಠೇವಣಿ ಇಡಬೇಕು. ಆದರೆ ಉಚಿತ ಸರಕಾರಿ ಭಾಗ್ಯದ ಅನಿಲ ಸಂಪರ್ಕದಲ್ಲಿ ಸರಕಾರವೇ ನೇರವಾಗಿ ಅನಿಲ ಕಂಪೆನಿಯಲ್ಲಿ ಗ್ರಾಹಕನ ಪರವಾಗಿ ಭದ್ರತಾ ಠೇವಣಿ ಇರಿಸಿದೆ. ಆದ್ದರಿಂದ ಫಲಾನುಭವಿ ಯಾವುದೇ ಮೊತ್ತ ನೀಡಬೇಕಿರಲಿಲ್ಲ. ಆದರೆ ಏಜೆನ್ಸಿಯವರು ತಮ್ಮದೇ ಸ್ಟವ್‌, ಪೈಪ್‌, ರೆಗ್ಯುಲೇಟರ್‌ ಎಂದು ಕಡ್ಡಾಯವಾಗಿ ಶುಲ್ಕ ವಸೂಲಿ ಮಾಡು ತ್ತಿದ್ದರು. ಜನಪ್ರತಿನಿಧಿಗಳ ಆಕ್ಷೇಪದ ಬಳಿಕ ಏಜೆನ್ಸಿ ಯಿಂದಲೇ ಸ್ಟವ್‌ ಖರೀದಿ ಕಡ್ಡಾಯವಲ್ಲ ಎನ್ನಲಾಯಿತು.

ಸಂಪರ್ಕ ವರ್ಗ
ಈಗ ಇರುವ ಯಾವುದೇ ತೈಲ ಕಂಪೆನಿಯ ಅನಿಲ ಸಂಪರ್ಕದ ಬದಲು ಇನ್ನೊಂದು ತೈಲ ಕಂಪೆನಿಯ ಸಂಪರ್ಕ (ಉದಾ.: ಇಂಡೇನ್‌ನಿಂದ ಎಚ್‌ಪಿ)ಕ್ಕೆ ಬದಲಾಯಿಸಲು ಅವಕಾಶ ನೀಡಲಾಗಿದೆ. ಈ ಸಂದರ್ಭ ಭದ್ರತಾ ಠೇವಣಿಯ ರಶೀದಿ ತೋರಿಸಿ ಭದ್ರತಾ ಠೇವಣಿ ಹಿಂಪಡೆದು, ಅಷ್ಟೇ ಮೊತ್ತವನ್ನು ಹೊಸ ಏಜೆನ್ಸಿಗೆ ನೀಡಿದರಾಯಿತು. ಹೊಸ ಸಂಪರ್ಕ ಪಡೆಯಲು ಈಗ ಅವಶ್ಯವಿರುವ ಠೇವಣಿ ಎಷ್ಟೇ ಆಗಿದ್ದರೂ ಎಷ್ಟೋ ವರ್ಷಗಳ ಹಿಂದೆ ಹಳೆಯ ಕಂಪೆನಿಗೆ ನೀಡಿದ್ದಷ್ಟೇ ಭದ್ರತಾ ಠೇವಣಿಯಲ್ಲಿ ಏಜೆನ್ಸಿ ಬದಲಾವಣೆಯಾಗುತ್ತದೆ.

ಇಲ್ಲೇನು ಸಮಸ್ಯೆ?
ಮೊದಲು ತಾಲೂಕಿನಲ್ಲಿ ಒಂದು ಅಥವಾ ಎರಡು ಅನಿಲ ಏಜೆನ್ಸಿಗಳಿದ್ದವು. ಈಗ ಗ್ರಾಮಾಂ ತರ ವಿತರಕರು ಎಂದು ಅಲ್ಲಲ್ಲಿ ಏಜೆನ್ಸಿ ಕೊಡ ಲಾಗಿದೆ. ಈ ಸಂದರ್ಭ ಸಮೀಪದಲ್ಲಿಯೇ ಅಡುಗೆ ಅನಿಲ ವಿತರಕರಿದ್ದರೂ ಬಡವರು ಮಾತ್ರ ದೂರದಿಂದ ಬರುವ ಅನಿಲ ಸಿಲಿಂಡರ್‌ ಪಡೆದು ಅವರು ವಿಧಿಸುವ ದುಬಾರಿ ಸಾಗಾಟ ವೆಚ್ಚ ಭರಿಸಬೇಕಿದೆ. ಬದಲಿಗೆ ಸಂಪರ್ಕವನ್ನು ಸಮೀಪದ ಗ್ಯಾಸ್‌ ಏಜನ್ಸಿಗೆ ಹಸ್ತಾಂತರಿಸಿದರೆ ಫಲಾನುಭವಿಗೆ ತೊಂದರೆಯಾಗುವುದಿಲ್ಲ. ಇದು ಬಿಸಿಯೂಟ ನೀಡುವ ಶಾಲೆಗಳಿಗೆ ಕೂಡ ಅನ್ವಯವಾಗುತ್ತದೆ. ಶಾಲೆಯ ಸಮೀಪವೇ ಏಜೆನ್ಸಿ ಇದ್ದರೂ 50-60 ಕಿ.ಮೀ. ದೂರದಿಂದ ಬರುವ ಹಳೆಯ ಎಜೆನ್ಸಿಯವರಿಗೆ 125 ರೂ.ಗೂ ಅಧಿಕ ಸಾಗಾಟ ವೆಚ್ಚ ನೀಡುವ ಪರಿಸ್ಥಿತಿಯಲ್ಲಿ ಹಲವು ಶಾಲೆಗಳಿವೆ.

Advertisement

ಎಲ್ಲವೂ ಅಲ್ಲ
ಸರಕಾರದಿಂದ ದೊರೆತ ಎಲ್ಲ ಉಚಿತ ಸಂಪರ್ಕ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅರಣ್ಯ ಇಲಾಖೆ, ಗ್ರಾ.ಪಂ., ಪಂಚಾಯತ್‌ರಾಜ್‌ ಮೂಲಕ ದೊರೆತ ಸಂಪರ್ಕಗಳ ಸಂದರ್ಭಗಳಲ್ಲಿ ಸಂಬಂಧಪಟ್ಟ ಅನಿಲ ಏಜೆನ್ಸಿಗಳಿಗೆ ಚೆಕ್‌ ಮೂಲಕ ಹಣ ಪಾವತಿಯಾಗಿದೆ. ಅಂತಹ ಸಂಪರ್ಕಗಳನ್ನು ಬದಲಾಯಿಸಬಹುದು. ಏಜೆನ್ಸಿಗಳ ಬದಲು ತೈಲ ಕಂಪೆನಿಗಳಿಗೆ ಸರಕಾರ ನೇರ ಹಣ ಪಾವತಿಸಿದ್ದಲ್ಲಿ ಮಾತ್ರ ಸಮಸ್ಯೆ ಉಂಟಾಗಿರುವುದು.

 ಸ್ಪಂದಿಸಲಿ
ಸರಕಾರದಿಂದ ನೀಡಿದ ಅನಿಲ ಸಂಪರ್ಕ ಗಳಿಗೆ ಭದ್ರತಾ ಠೇವಣಿ ಕಲಂ ನಲ್ಲಿ “ಸರಕಾರ’ ಎಂದು ಇರುವ ಕಾರಣ ಅಂತಹವರಿಗೆ ಬೇರೆ ಏಜೆನ್ಸಿಯಲ್ಲಿ ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಸರಕಾರದಿಂದ ಸೂಕ್ತ ಆದೇಶ ಹೊರಡಿಸಬೇಕು.
– ಎಚ್‌. ಮಹಮ್ಮದ್‌, ವೇಣೂರು

 ಆದೇಶ ಬಂದಿದೆ
ಶಾಲೆಗಳಿಗೆ ಬಿಸಿಯೂಟಕ್ಕೆ ಹೊರೆ ಯಾ ಗುವ ಕಾರಣ ಸಮೀಪದ ಏಜೆನ್ಸಿ ಗಳಿಗೆ ಕೊಡಿ ಎಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರೇ ಆದೇಶ ಮಾಡಿ  ದ್ದರೂ ಕೆಲವು ಏಜೆನ್ಸಿಯವರು ಕೊಡುತ್ತಿಲ್ಲ. 
– ಕೆ.ಜಿ. ಲಕ್ಷ್ಮಣ ಶೆಟ್ಟಿ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ವಿಭಾಗ, ಶಿಕ್ಷಣ ಇಲಾಖೆ

 ಗಮನಕ್ಕೆ  ತರಲಾಗಿದೆ
ಈ ಸಮಸ್ಯೆಯನ್ನು ಹಿರಿಯ ಅಧಿಕಾರಿ ಗಳ ಗಮನಕ್ಕೆ ತರಲಾಗಿದೆ. ತೈಲ ಕಂಪೆನಿ ಹಾಗೂ ಸರಕಾರಿ ಮಟ್ಟದಲ್ಲಷ್ಟೇ ಇದು ಇತ್ಯರ್ಥವಾಗಬೇಕಿದೆ. 
– ಮಲ್ಲಪ್ಪ  ನಡುಗಡ್ಡಿ ಆಹಾರ ನಿರೀಕ್ಷಕರು, ಬೆಳ್ತಂಗಡಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next