Advertisement

ಸರ್ದಾರ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ

06:25 AM Mar 03, 2018 | |

ಇಪೋ (ಮಲೇಷ್ಯಾ): ಮಹತ್ವದ ಅಜ್ಲಾನ್‌ ಶಾ ಹಾಕಿ ಕೂಟ ಶನಿವಾರದಿಂದ ಆರಂಭವಾಗಲಿದೆ. ಈ ಕೂಟಕ್ಕೆ ತಂಡದ ಶ್ರೇಯಾಂಕವನ್ನು ವೃದ್ಧಿಸುವ ಸಾಮರ್ಥ್ಯವಿಲ್ಲದಿದ್ದರೂ ಸಾಮರ್ಥ್ಯವನ್ನು ಒರೆಗಚ್ಚುವ ಶಕ್ತಿಯಿದೆ. ಪ್ರತಿ ವರ್ಷ ಮಲೇಷ್ಯಾದಲ್ಲಿ ನಡೆಯುವ ಈ ಕೂಟದಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳು ಆಡುವುದರಿಂದ ಬಹಳ ಮಹತ್ವ ಹೊಂದಿದೆ. ಅಚ್ಚರಿಯೆಂಬಂತೆ ಭಾರತ ಈ ಬಾರಿ ಬಹುತೇಕ ಹೊಸಬರೇ ತುಂಬಿಕೊಂಡಿರುವ ತಂಡವನ್ನು ಕಳುಹಿಸಿದೆ. ಈ ತಂಡವನ್ನು ಮುನ್ನಡೆಸುತ್ತಿರುವುದು ಸರ್ದಾರ್‌ ಸಿಂಗ್‌!

Advertisement

ಸರ್ದಾರ್‌ ಸಿಂಗ್‌ ನಾಯಕರಾಗಿರುವುದು ಪ್ರಮುಖ ಸುದ್ದಿ. ಈಗಾಗಲೇ ತಂಡದ ನಾಯಕತ್ವ ಕಳೆದುಕೊಂಡಿರುವ ಅವರು, ಬಹುತೇಕ ತಂಡದಿಂದಲೂ ಹೊರಬಿದ್ದಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ಫೈನಲ್‌ನಲ್ಲೂ ಸ್ಥಾನ ಪಡೆದಿರಿಲಿಲ್ಲ. ಇದು ಅವರು ತಂಡದಿಂದ ಹೊರಬಿದ್ದಿರುವ ಸಂಕೇತ, ಅವರು ನಿವೃತ್ತಿ ಹೇಳುವುದೇ ಲೇಸು ಎಂಬ ಭಾವ ಮೂಡಿಸಿತ್ತು. ಅಂತಹ ಸಂದರ್ಭದಲ್ಲಿ ಹಾಲಿ ನಾಯಕನಿಗೆ ವಿಶ್ರಾಂತಿ ನೀಡಿ ಸರ್ದಾರ್‌ಗೆ ತಾತ್ಕಾಲಿಕ ಅವಕಾಶ ನೀಡಿರುವ ಅರ್ಥವೇನು ಎನ್ನುವುದು ಪ್ರಶ್ನಾರ್ಥಕ.

ಕೆಲ ಮೂಲಗಳು ಇದು ಸರ್ದಾರ್‌ಗೆ ಗೌರವಾರ್ಹ ವಿದಾಯ ಹೇಳಲು ಮಾಡಿಕೊಂಡಿರುವ ಪರಸ್ಪರ ಪೂರಕ ವ್ಯವಸ್ಥೆ ಎಂದೂ ಅರ್ಥೈಸಿವೆ. ಆದರೆ ಸರ್ದಾರ್‌ ಸಿಂಗ್‌ರನ್ನೇ ಗಮನಿಸಿದರೆ ಇದನ್ನು ಸುಳ್ಳೆನ್ನಬೇಕಾಗುತ್ತದೆ. ಅವರು ಅತ್ಯುತ್ತಮವಾಗಿ ಸಿದ್ಧತೆ ಮಾಡಿಕೊಂಡಿದ್ದು ಅಜ್ಲಾನ್‌ ಶಾ ಮಾತ್ರವಲ್ಲ ವಿಶ್ವಕಪ್‌, ಒಲಿಂಪಿಕ್ಸ್‌ನಲ್ಲೂ ಆಡುವ ಉದ್ದೇಶ ಹೊಂದಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ಖಾಯಂ ನಾಯಕ ಮನ್‌ಪ್ರೀತ್‌ ಸಿಂಗ್‌, ಮುನ್ಪಡೆ ಆಟಗಾರ ಆಕಾಶ್‌ದೀಪ್‌ ಸಿಂಗ್‌, ಪೆನಾಲ್ಟಿ ಕಾರ್ನರ್‌ ತಜ್ಞರಾದ ಹರ್ಮನ್‌ ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಖ್ಯಾತ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌, ತಜ್ಞ ಆಟಗಾರ ಎಸ್‌.ವಿ.ಸುನೀಲ್‌ ಇವರೆಲ್ಲ ತಂಡದಲ್ಲಿರುವುದಿಲ್ಲ. ಇಂತಹ ಶ್ರೇಷ್ಠ ಆಟಗಾರರು ಇಲ್ಲದಿರುವ ತಂಡ ಮುನ್ನಡೆಸುವುದೆಂದರೆ ನಿಜಕ್ಕೂ ಸವಾಲಿನ ಕೆಲಸ.

ಸದ್ಯ ಸರ್ದಾರ್‌ಗೆ ತಮ್ಮ ಮುಂದಿರುವ ಸವಾಲೇನೆಂದು ಗೊತ್ತಿದೆ. ಈ ಕೂಟದಲ್ಲಿ ಅವರು ತೋರುವ ಪ್ರದರ್ಶನದ ಆಧಾರದಿಂದಲೇ ಅವರ ಭವಿಷ್ಯ ನಿರ್ಧಾರವಾಗಲಿದೆ. ಆದರೆ ಅವರ ಕೈಗೆ ಸಿಕ್ಕಿರುವ ತಂಡ ಬಹುತೇಕ ಹೊಸಬರದ್ದು. ಅನುಭವಿಗಳೂ ಇದ್ದರೂ ಅವರ ಪ್ರದರ್ಶನದ ಮೇಲೆ ಎಷ್ಟರ ಮಟ್ಟಿಗೆ ಭರವಸೆ ಇಡಬಹುದೆನ್ನುವುದು ಖಚಿತವಾಗಿಲ್ಲ. ತಂಡದ ಉಪನಾಯಕರಾಗಿ ಅನುಭವಿ ರಮಣ್‌ ದೀಪ್‌ ಸಿಂಗ್‌ ಇದ್ದಾರೆ. ಕೊಡಗಿನ ಎಸ್‌.ಕೆ.ಉತ್ತಪ್ಪ ಸ್ಥಾನ ಪಡೆದಿದ್ದು, ಪೆನಾಲ್ಟಿ ಕಾರ್ನರ್‌ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತಾರೆ. ಮತ್ತೂಂದು ಕಡೆ ಗುರ್ಜಂತ್‌ ಸಿಂಗ್‌, ತಲ್ವಿಂದರ್‌ ಸಿಂಗ್‌ ಮಿಡ್‌ ಫೀಲ್ಡ್‌ನಲ್ಲಿ ಆಡುತ್ತಾರೆ.

Advertisement

ಈ ಬಾರಿ ರಕ್ಷಣಾ ವಿಭಾಗದಲ್ಲಿ ವರುಣ್‌ ಕುಮಾರ್‌, ಸುರೇಂದರ್‌ಕುಮಾರ್‌, ದಿಪ್ಸನ್‌ ಆಡಲಿದ್ದಾರೆ. ರೋಹಿದಾಸ್‌, ಸಂಜೀವ್‌ ಜೆಸ್‌ ಬದಲೀ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಪಿ.ಆರ್‌.ಶ್ರೀಜೇಶ್‌ ಅನುಪಸ್ಥಿತಿಯಲ್ಲಿ ಸೂರಜ್‌ ಕರ್ಕೆರಾ, ಕೃಷ್ಣ ಪಾಠಕ್‌ ಗೋಲ್‌ ಕೀಪರ್‌ಗಳಾಗಲಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಈ ಇಬ್ಬರು ಆಟಗಾರರಿಗೆ ಇದು ಅತ್ಯುತ್ತಮ ಅವಕಾಶ. ಇಂತಹ ಅನನುಭವಿ ಪಡೆ ಮತ್ತು ಕೆಲವೇ ಕೆಲವು ಅನುಭವಿಗಳನ್ನು ಸರ್ದಾರ್‌ ನಿಭಾಯಿಸಬೇಕಿದೆ.

ಇತಿಹಾಸ ಹೇಗಿದೆ?: ಸರ್ದಾರ್‌ ಇಲ್ಲಿಯವರೆಗೆ 3 ಬಾರಿ ಅಜ್ಲಾನ್‌ ಶಾದಲ್ಲಿ ನಾಯಕರಾಗಿ ಆಡಿದ್ದಾರೆ. ಅವರ ನೇತೃತ್ವದಲ್ಲಿ ತಂಡ 2008, 2016ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, 2015ರಲ್ಲಿ ಕಂಚಿನ ಪದಕ ಗೆದ್ದಿದೆ. ಆದರೆ ಅವರ ನೇತೃತ್ವದಲ್ಲಿ ಭಾರತ ಒಮ್ಮೆಯೂ ಚಿನ್ನ ಗೆದ್ದಿಲ್ಲ. ಸುಲ್ತಾನ್‌ ಅಜ್ಲಾನ್‌ ಶಾದಲ್ಲಿ ಭಾರತ ಇದುವರೆಗೆ 20 ಬಾರಿ ಆಡಿದೆ. 5 ಬಾರಿ ಚಾಂಪಿಯನ್‌ ಆಗಿದ್ದರೆ, 2 ಬಾರಿ ಬೆಳ್ಳಿ, 7 ಬಾರಿ ಕಂಚಿನ ಪದಕ ಗೆದ್ದಿದೆ. ಆದರೆ ಈ ಬಾರಿ ಚಿನ್ನ ಗೆಲ್ಲುವುದನ್ನು ಭಾರತ ನಿರೀಕ್ಷಿಸುವಂತಿಲ್ಲ. ಕಾರಣ ಇಲ್ಲಿ ವಿಶ್ವ ನಂ.1 ಆಸ್ಟ್ರೇಲಿಯಾ, ಒಲಿಂಪಿಕ್ಸ್‌ ಚಿನ್ನ ವಿಜೇತ ಅರ್ಜೆಂಟೀನಾ ತಂಡಗಳು ಪ್ರಬಲ ಒಡ್ಡುತ್ತಿವೆ. ಇವರೊಂದಿಗೆ ಇಂಗ್ಲೆಂಡ್‌, ಐರೆಲಂಡ್‌, ಮಲೇಷ್ಯಾಗಳು ಇವೆ. ಇದ್ದಿದ್ದರಲ್ಲಿ ದುರ್ಬಲ ತಂಡ ಐರೆಲಂಡ್‌ ಒಂದೇ. ಈ ಸವಾಲನ್ನು ನಿಭಾಯಿಸಿ ಗೆಲ್ಲುವುದು, ಕನಿಷ್ಠ ಪಕ್ಷ ಸಮಾಧಾನಕರ ಪ್ರದರ್ಶನ ನೀಡುವುದು ಭಾರತಕ್ಕೆ ಅಗ್ನಿ ಪರೀಕ್ಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next