Advertisement

ಮುಂಗಾರು ಬಿತ್ತನೆಗೆ ಮೊದಲು ಬೀಜೋಪಚಾರ; ಬೀಜಾಮೃತ ವಿಧಾನ ಅನುಸರಿಸಿ

11:41 PM May 20, 2020 | Sriram |

ಕೋಟ: ರೈತ ಮುಂಗಾರುವಿನ ಸಿಂಚನಕ್ಕಾಗಿ ಕಾದು ಕುಳಿತಿದ್ದು ಕರಾವಳಿಯಲ್ಲಿ ಭತ್ತದ ಬೇಸಾಯದ ಚಟುವಟಿಕೆ ಇನ್ನು ಕೆಲವೇ ದಿನಗಳಲ್ಲಿ ಚುರುಕುಗೊಳ್ಳಲಿದೆ. ಆದರೆ ಭತ್ತದ ಬೇಸಾಯದಲ್ಲಿ ರೈತರಿಗೆ ಬಹುವಾಗಿ ಕಾಡುವ ಸಮಸ್ಯೆಗಳಲ್ಲಿ ರೋಗಬಾಧೆ, ಇಳುವರಿ ಕುಸಿತ, ಮಣ್ಣಿನ ಫಲವತ್ತತೆ ಕೊರತೆ ಪ್ರಮುಖವಾದದ್ದು. ಬೀಜದಿಂದ ಅನೇಕ ಹಾನಿಕಾರಕ ರೋಗಾಣುಗಳಾದ ಶಿಲೀಂಧ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜತೆಯಲ್ಲಿ ಬೆಳೆಯ ವಿವಿಧ ಬೆಳವಣಿಗೆಯ ಹಂತಗಳ‌ಲ್ಲಿ ರೋಗವು ಉಲ್ಬಣಿಸಿ ಇಳುವರಿ ಹಾನಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕವಾದ ಬೀಜೋಪಚಾರ ಅಥವಾ ಸಾವಯವದ ಬೀಜಾಮೃತ ವಿಧಾನಗಳನ್ನು ಬಳಸಿ ಅಧಿಕ ಇಳುವರಿ ಹಾಗೂ ರೋಗಗಳಿಂದ ಮುಕ್ತಿ ಪಡೆಯಬಹುದು ಹಾಗೂ ಬೀಜ ಮೊಳಕೆಯೊಡೆಯುವಿಕೆ ಹಾಗೂ ಸಸಿಗಳ ಬೆಳವಣಿಗೆ ಉತ್ತಮಗೊಳ್ಳಲು ಬೀಜಾಮೃತ ವಿಧಾನ ಅತ್ಯಂತ ಸಹಕಾರಿಯಾಗುತ್ತದೆ.

Advertisement

ಬೀಜೋಪಚಾರ
ಮಾಡುವುದು ಹೇಗೆ ?
ಇದು ರಾಸಾಯನಿಕ ವಿಧಾನವಾಗಿದ್ದು ಪ್ರತಿ ಎಕ್ರೆಗೆ 25 ರಿಂದ 30 ಕೆ.ಜಿ ಭತ್ತದ ಬೀಜಕ್ಕೆ 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಜೊಳ್ಳು ಬೀಜಗಳನ್ನು ಬೇರ್ಪಡಿಸಿ ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಹೊರತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 50 ರಿಂದ 60 ಗ್ರಾಂ ಕಾರ್ಬೆಂಡೆಜಿಮ್‌ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 2ಗ್ರಾಂ) ಎಂಬ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ, ನೆರಳಿನಲ್ಲಿ ಒಣಗಿಸಿ.ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ, ಮೊಳಕೆಯೊಡೆಯಲು ಇಟ್ಟು ಬಿತ್ತನೆ ಮಾಡಬೇಕು. ಈ ಸಂದರ್ಭದಲ್ಲಿ ಶಿಫಾರಸು ಮಾಡಿದ ಶಿಲೀಂಧ್ರನಾಶಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉಪಯೋಗಿಸಬೇಕು ಹಾಗೂ ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಬಿತ್ತನೆ ಮಾಡಬೇಕು.


ಬೀಜಾಮೃತ ವಿಧಾನ
ಇದು ಸಾವಯವ ವಿಧಾನವಾಗಿದ್ದು ಇಳುವರಿ ಹೆಚ್ಚಿಸುವ ಸಲುವಾಗಿ ಅತ್ಯಂತ ಅಗತ್ಯವಾದದ್ದು. ಬೀಜ ಮೊಳಕೆಯೊಡೆಯುವಿಕೆ ಹಾಗೂ ಸಸಿಗಳ ಬೆಳವಣಿಗೆ ಉತ್ತಮಗೊಳ್ಳಲು ಈ ವಿಧಾನ ಸಹಕಾರಿ 5 ಕೆ.ಜಿ ದೇಸಿ ಹಸುವಿನ ಸೆಗಣಿಯನ್ನು ಒಂದು ಬಟ್ಟೆಯಲ್ಲಿ ಮೂಟೆ ಕಟ್ಟಿ. ಇದನ್ನು 20 ಲೀಟರ್‌ ನೀರಿನಲ್ಲಿ 12 ಗಂಟೆಗಳ ಕಾಲ ಇಳಿಬಿಡಬೇಕು. ಒಂದು ಲೀಟರ್‌ ನೀರಿಗೆ 50 ಗ್ರಾಂ ಸುಣ್ಣವನ್ನು ಬೆರೆಸಿ, ಇದನ್ನು ರಾತ್ರಿ ಪೂರ್ತಿ ನೆನೆಯಲು ಬಿಟ್ಟು ಮರುದಿನ ಬೆಳಿಗ್ಗೆ, ಹಸುವಿನ ಸಗಣಿಯ ಮೂಟೆಯನ್ನು ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ಕುಲುಕಿಸಿ, ಇದರಿಂದ ಸಗಣಿಯ ಸತ್ವವು ಆ ನೀರಿನಲ್ಲಿ ಸಂಗ್ರಹವಾಗುವಂತೆ ಮಾಡಿ ತಯಾರಿಸಿದ ನೀರಿನ ದ್ರಾವಣದಲ್ಲಿ ಸ್ವಲ್ಪ ಮಣ್ಣನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕುಲುಕಿಸಿ. ಕೊನೆಯದಾಗಿ ತಯಾರಿಸಿದ ದ್ರಾವಣದಲ್ಲಿ 5 ಲೀಟರ್‌ ದೇಶಿ ಹಸುವಿನ ಮೂತ್ರ ಸೇರಿಸಿ ಸುಣ್ಣದ ನೀರನ್ನು ಸೇರಿಸಿ ಚೆನ್ನಾಗಿ ಕಲಿಕಿದರೆ ಬೀಜಾಮೃತ ಸಿದ್ಧವಾಗುತ್ತದೆ.

ಉತ್ತಮ ಫಸಲು ಹಾಗೂ ರೋಗವನ್ನು ತಡೆಗಟ್ಟುವ ಸಲುವಾಗಿ ಬಿತ್ತನೆಗೆ ಮೊದಲು ರೈತರು ಬೀಜೋಪಚಾರ ಅಥವಾ ಬೀಜಾಮೃತ ವಿಧಾನವನ್ನು ತಪ್ಪದೆ ಪಾಲಿಸುವುದು ಅತ್ಯಂತ ಸೂಕ್ತವಾಗಿದೆ.

ಕಡ್ಡಾಯವಾಗಿ ಅನುಸರಿಸಿ
ಬೀಜವನ್ನು ಸಂಸ್ಕೃರಿಸದೆ ಬಿತ್ತನೆ ಮಾಡುವುದರಿಂದ ರೋಗಬಾಧೆ, ಇಳುವರಿ ಕುಸಿತ, ಮಣ್ಣಿನ ಫಲವತ್ತತೆ ಕೊರತೆ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಬೀಜೋಪಚಾರ ಅಥವಾ ಬೀಜಾಮೃತವನ್ನು ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಹಾಗೂ ರೋಗ ಬಾಧೆಯಿಂದ ದೂರವಾಗಬಹುದು ಮತ್ತು ಮಣ್ಣಿನ
ಫಲವತ್ತತೆ ಕೂಡ ಹೆಚ್ಚಿಸಬಹುದು. ಎಲ್ಲ ರೈತರು ಇದನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿದೆ.
-ಡಾ| ಸುಧೀರ್‌ ಕಾಮತ್‌, ಪ್ರಾಂಶುಪಾಲರು
ಕೃಷಿ ಡಿಪ್ಲೋಮಾ ಕಾಲೇಜು ಬ್ರಹ್ಮಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next