ಯುರೋಪಿನ ಯಾವುದೇ ದೇಶಗಳಿಗೆ ನೀವು ಭೇಟಿ ನೀಡಿದರೂ ನಿಮ್ಮನ್ನು ಮೊದಲಿಗೆ ಆಕರ್ಷಿಸುವುದು ಅಲ್ಲಿರುವ ಮನಸೂರೆಗೊಳ್ಳುವ ಅರಮನೆಗಳು ಹಾಗೂ ಮನಮೋಹಕ ಕೋಟೆಗಳು. ಇಡೀ ಯುರೋಪ್‌ನಲ್ಲಿ ಅತೀ ಹೆಚ್ಚು ಕೋಟೆಗಳನ್ನು ಹೊಂದಿರುವ ದೇಶವೆಂದರೆ ಅದು ಜರ್ಮನಿ. ಸುಮಾರು ಇಪ್ಪತ್ತೈದು ಸಾವಿರದಷ್ಟು ಕೋಟೆಗಳು ನಿಮಗೆ ಜರ್ಮನಿಯಲ್ಲಿ ಕಾಣಸಿಗುತ್ತದೆ. ಪ್ರತಿಯೊಂದು ಕೋಟೆಗಳು ನಿಮಗೆ ಜರ್ಮನಿಯ ಸಾವಿರಾರು ವರುಷಗಳ ಇತಿಹಾಸವನ್ನು ಸಾರುತ್ತ ಇಂದಿಗೂ ತಮ್ಮದೇ ಆದ ಅನುಪಮ ಸೌಂದರ್ಯದಿಂದ ಕಂಗೊಳಿಸುತ್ತ ನಿಂತಿವೆ.
ಜರ್ಮಿನಿಯ ಆಗ್ನೇಯ ದಿಕ್ಕಿನಲ್ಲಿ ಸಿಗುವ ಬವೇರಿಯನ್ ಪ್ರದೇಶಗಳಲ್ಲಿ ನೀವು ತಪ್ಪದೇ ನೋಡಲೇಬೇಕಾದ ಒಂದು ಕೋಟೆಯೆಂದರೆ ಅದು “ನ್ಯೂ ಶ್ವಾನ್ ಸ್ಟೇನ್ ಕಾಸಲ್’. ಜರ್ಮನಿಯ ಬವೇರಿಯನ್ ಪರ್ವತ ಶ್ರೇಣಿಗಳ ನಡುವೆ, ಹಚ್ಚ ಹಸುರ ಕಾಡು ಬೆಟ್ಟದ ಮೇಲೆ ಭವ್ಯವಾಗಿ ನಿಂತಿರುವ ಈ ಕೋಟೆಯನ್ನು ನೋಡಲು ನೀವು ಜರ್ಮನಿಯ ಫುಸ್ಸೇನ್ ಎಂಬ ಊರಿಗೆ ಹೋಗಬೇಕು. ಈ ಊರಿಗೆ ನೀವು ತಲುಪುವ ಮುನ್ನವೇ ದೂರದಿಂದಲೇ ಬೆಟ್ಟದ ಮೇಲೆ ಕಾಣುವ ಈ ಕೋಟೆ ನಿಮ್ಮನ್ನು ಊರಿಗೆ ಸ್ವಾಗತಿಸುತ್ತದೆ.
ತನ್ನ ಹುಚ್ಚಾಟಗಳಿಂದ “ದಿ ಮ್ಯಾಡ್ ಕಿಂಗ್’ ಅಂತ ಕರೆಸಿಕೊಳ್ಳುತ್ತಿದ್ದ ಲೂಯಿಸ್ II ಅಥವಾ ಲುಡ್ ವಿಗ್ II ಎಂಬ ಒಬ್ಬ ರಾಜನ ಕನಸಿನ ಈ ಕೋಟೆ ಇಂದಿಗೂ ಅಪೂರ್ಣವಾಗಿದ್ದರೂ ನಿಮ್ಮ ಮನಸ್ಸನ್ನು ಮುದಗೊಳಿಸುವಲ್ಲಿ ಸಂದೇಹವೇ ಇಲ್ಲ. ಹೊರಗಿನಿಂದ ನೀವು ಈ ಕೋಟೆಯನ್ನು ನೋಡಿದರೆ ಇದೊಂದು ಅಪೂರ್ಣ ಕೋಟೆ ಅಂತ ನಿಮಗೆ ಅನಿಸುವುದೇ ಇಲ್ಲ. ಆ ಕೋಟೆಯ ಒಳಗೆ ಕಾಲಿಟ್ಟ ಅನಂತರ, ಕೋಟೆಯ ಇತಿಹಾಸವನ್ನು ತಿಳಿಯುತ್ತ ಹೋದಂತೆ ಅಪೂರ್ಣವಾಗಿರುವ ವಿಷಯ ನಮಗೆ ತಿಳಿಯುತ್ತದೆ. ಅಪೂರ್ಣವಾಗಿರುವ ಈ ಕೋಟೆಯೇ ಇಷ್ಟು ಸುಂದರವಾಗಿರ ಬೇಕಾದರೆ ರಾಜ ಲುಡ್ ವಿಗ್ II ತಾನು ಅಂದುಕೊಂಡಂತೆ ಸಂಪೂರ್ಣವಾಗಿ ಕಟ್ಟಿ ಬಿಟ್ಟಿದ್ದರೆ ಇನ್ನೆಷ್ಟು ಸುಂದರವಾಗಿದ್ದರಬಹುದು ಎಂಬ ಆಲೋಚನೆ ಮನದಲ್ಲಿ ಮೂಡುತ್ತದೆ. ಡಿಸ್ನಿಲ್ಯಾಂಡ್‌ನಲ್ಲಿ ನೀವು ನೋಡುವ “ಸ್ಲೀಪಿಂಗ್ ಬ್ಯೂಟಿ ಕಾಸಲ್’ಗೆ ಈ ಅದ್ಭುತವಾದ ಕೋಟೆಯೇ ಸ್ಫೂರ್ತಿ ಎನ್ನುವುದು ನಿಮಗೆ ತಿಳಿದಿರಲಿ.
1867ರಲ್ಲಿ ಈ ಕೋಟೆಯನ್ನು ಕಟ್ಟುವ ಕಾರ್ಯವನ್ನು ರಾಜ ಲುಡ್ ವಿಗ್ II ಆರಂಭಿಸಿದ. ಸರಿ ಸುಮಾರು ಎರಡು ದಶಕಗಳ ಕಾಲ ಈ ಕೋಟೆಯ ನಿರ್ಮಾಣ ಕಾರ್ಯ ನಡೆದಿದೆ. ದುರದೃಷ್ಟವಶಾತ್ ಈ ಕೋಟೆಯ ಕೊನೆ ಹಂತದ ನಿರ್ಮಾಣ ಕಾರ್ಯ ನಡೆಯುತ್ತಿರುವಾಗಲೇ ರಾಜ ಲುಡ್ ವಿಗ್ II ಇಹಲೋಕವನ್ನು ತ್ಯಜಿಸಿದ. ಹಾಗಾಗಿ ಕೋಟೆಯ ಬಹುತೇಕ ಕೆಲಸಗಳು ಹಾಗೆಯೇ ನಿಂತುಹೋಗಿ ಕೋಟೆಯೂ ಅಪೂರ್ಣವಾಗಿ ಹೋಯಿತು. ರಾಜ ಲುಡ್ ವಿಗ್ II ತನ್ನ ಸಾರ್ವಭೌಮತ್ವದ ಬಗೆಗಿನ ಹೆಮ್ಮೆ ಹಾಗೂ ಕಲೆಗಳ ಮೇಲಿದ್ದ ಆಸಕ್ತಿಯ ಜತೆಗೆ ರೊಮಾನೆಕ್ಸ್, ಗೋಥಿಕ್ ಹಾಗೂ ಬೈಜಾಂಟೈನ್ ವಾಸ್ತುಶಿಲ್ಪ ಕಲೆಗಳನ್ನು ಸಂಯೋಜಿಸಿ ಈ ಕೋಟೆಯನ್ನು ನಿರ್ಮಿಸಿದ್ದಾನೆ. ತಾನೇ ಖುದ್ದಾಗಿ ಇಡೀ ಕೋಟೆಯ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜ ಲುಡ್ ವಿಗ್ II ನಿರ್ಮಾಣದ ಪ್ರತೀ ಹಂತದ ಚಿತ್ರಗಳನ್ನು ಮಾಡಿಸಿಟ್ಟಿದ್ದಾನೆ.
ಈ ಕೋಟೆಯು 214 ಅಡಿಯಷ್ಟು ಎತ್ತರವಿದೆ. ಸುಮಾರು ಇನ್ನೂರು ಕೋಣೆಗಳಿರುವ ಈ ಕೋಟೆಯಲ್ಲಿ ಕೇವಲ 15 ಕೋಣೆಗಳು ಮಾತ್ರ ಸಂಪೂರ್ಣವಾಗಿ ನಿರ್ಮಾಣವಾಗಿದೆ. ನಿಮಗೆ ಕೋಟೆಯ ಒಳಗೆ ಯಾವುದೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಅನುಮತಿ ಇಲ್ಲ. ಕೇವಲ ಕೋಟೆಯ ಒಳಾಂಗಣದ ಸೌಂದರ್ಯವನ್ನು ನಿಮ್ಮ ಕಣ್ಣಿನ ಮೂಲಕ ಕಣ್ತುಂಬಿಕೊಳ್ಳಬೇಕು ಅಷ್ಟೇ. ಕೋಟೆಯ ಒಳಾಂಗಣದ ಸೌಂದರ್ಯದ ಬಗ್ಗೆ ಪದಗಳಲ್ಲಿ ವರ್ಣಿಸುವುದು ಕಷ್ಟ ಸಾಧ್ಯ.
ಇಪ್ಪತ್ತು ವರುಷಗಳ ಕಾಲ ಕಟ್ಟಿದ್ದ ಈ ಕೋಟೆಯಲ್ಲಿ ಕೇವಲ ಹನ್ನೊಂದು ದಿನಗಳ ಕಾಲ ಮಾತ್ರ ಲುಡ್ ವಿಗ್ II ವಾಸಿಸಿದ್ದ. ಪ್ರಜೆಗಳಿಂದ ದೂರವಿರಬೇಕೆಂದು ನಿರ್ಮಿಸಿದ್ದ ಈ ಕೋಟೆಯನ್ನು ಆತ ತೀರಿಕೊಂಡ ಹದಿನೈದನೇ ದಿನದಿಂದಲೇ ಪ್ರಜೆಗಳಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಯ್ತು. ಇದುವರೆಗೆ ಲಕ್ಷಾಂತರ ಜನರು ವಿವಿಧ ದೇಶಗಳಿಂದ ಬಂದು ಈ ಕೋಟೆಯನ್ನು ಸೊಬಗನ್ನು ಸವಿದಿದ್ದಾರೆ. “ನ್ಯೂ ಶ್ವಾನ್ ಸ್ಟೇನ್ ಕಾಸಲ್’ ಎಂಬ ಹೆಸರನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರೆ “ನ್ಯೂ ಸ್ವಾನ್ ಸ್ಟೋನ್ ಕಾಸಲ್’ ಎಂಬ ಅರ್ಥ ಬರುತ್ತದೆ. ಬವೇರಿಯನ್ ಸಂಸ್ಕೃತಿಯ ಪವಿತ್ರತೆ ಹಾಗೂ ದೇವರ ಅನುಗ್ರಹದ ಸಂಕೇತವಾದ ಹಂಸ ಪಕ್ಷಿಯ ಹೆಸರನ್ನು ಈ ಕೋಟೆಗೆ ಇಡಲಾಗಿದೆ.
ಮೇರಿ’ಸ್ ಬ್ರಿಡ್ಜ್
ಇಲ್ಲಿನ ಮತ್ತೊಂದು ಆಕರ್ಷಣೆ ಅಂದರೆ ಕೋಟೆಯ ಪಕ್ಕದಲ್ಲಿರುವ ಬೆಟ್ಟಗಳ ನಡುವೆ ನಿರ್ಮಾಣ ಆಗಿರುವ ಮೇರಿ’ಸ್ ಬ್ರಿಡ್ಜ್ . ಈ ಬ್ರಿಡ್ಜ್ ಮೇಲೆ ನಿಂತು ಸುಂದರ ಕೋಟೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ಇದೆ. ಫುಸ್ಸೇನ್ ನಗರದಿಂದ ಸ್ವಂಗಾವ್ ಎಂಬ ಸ್ಥಳದಲ್ಲಿ ನಿಮ್ಮ ಕಾರುಗಳನ್ನು ನಿಲ್ಲಿಸಿ ಬಸ್ಸಿನ ಮೂಲಕ “ನ್ಯೂ ಶ್ವಾನ್ ಸ್ಟೇನ್ ಕಾಸಲ್’ ಹಾಗೂ ಮೇರಿ’ಸ್ ಬ್ರಿಡ್ಜ್ ನೋಡಲು ಹೋಗಬಹುದು. ಹೈಕಿಂಗ್ ಮಾಡಲು ಆಸಕ್ತಿ ಇರುವವರು ಹೈಕಿಂಗ್ ಮಾಡಿಕೊಂಡು ಈ ಸ್ಥಳಗಳನ್ನು ತಲುಪಲು ಸಾಧ್ಯವಿದೆ. ಕೋಟೆಯನ್ನು ವೀಕ್ಷಿಸಲು ಕುದುರೆ ಗಾಡಿಯ ವ್ಯವಸ್ಥೆ ಕೂಡ ಈ ಸ್ಥಳದಲ್ಲಿ ಇದೆ.
ಬಾಲ್ಯದ ಕೋಟೆ, ರಮಣೀಯ ಸರೋವರ
ರಾಜ ಲುಡ್ ವಿಗ್ II ತನ್ನ ಬಾಲ್ಯವನ್ನು ಕಳೆದ ಕೋಟೆ “ಒಹೆನ್ ಸ್ವಂಗಾವ್’ ಕೂಡ ಈ ಕೋಟೆಯ ಎದುರುಗಡೆ ಇರುವ ಸಣ್ಣ ಬೆಟ್ಟದ ಮೇಲೆ ಇದೆ. ಆ ಕೋಟೆಯನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಈ ಕೋಟೆಯಿರುವ ಬೆಟ್ಟದ ತಪ್ಪಲಿನಲ್ಲಿ ಆಲ್‌ಪ್ಸಿ ಎಂದು ಕರೆಯುವ ರಮಣೀಯ ಸರೋವರ ಇದೆ. ದೋಣಿಯ ಮೂಲಕ ಈ ಸರೋವರದಲ್ಲಿ ಸುತ್ತಾಟವನ್ನು ನೀವು ನಡೆಸಬಹುದು.
ನೀವು ಇಲ್ಲಿ ಪ್ರತಿಯೊಂದಕ್ಕೂ ಪ್ರವೇಶ ಶುಲ್ಕವನ್ನು ಭರಿಸಿಯೇ ವೀಕ್ಷಿಸಬೇಕು ಎನ್ನವುದು ನಿಮ್ಮ ಗಮನದಲ್ಲಿರಲಿ. ಬೇಸಗೆ ಕಾಲದಲ್ಲಿ ಮುಂಗಡವಾಗಿ ಟಿಕೆಟ್‌ಗಳನ್ನೂ ಖರೀದಿಸಿಕೊಂಡು ಹೋದರೆ ಉತ್ತಮ, ಇಲ್ಲದಿದ್ದರೆ ಅಲ್ಲಿಯ ತನಕ ಹೋಗಿ ಕೋಟೆಯ ಒಳಾಂಗಣ ನೋಡಲು ಸಾಧ್ಯವಾಗದೆ ಇರುವ ಸಾಧ್ಯತೆಗಳಿವೆ. ಮನಮೋಹಕ ಬವೇರಿಯನ್ ಪರ್ವತ ಶೇಣಿಯ ನಡುವೆ ಕಂಗೊಳಿಸುತ್ತಿರುವ ಈ ಅಪೂರ್ಣವಾದ ಕೋಟೆಯ ಸೊಬಗನ್ನು ಖಂಡಿತವಾಗಿಯೂ ಒಮ್ಮೆಯಾದರೂ ಸವಿಯಲೇಬೇಕು.
*ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್