Advertisement

ಉಡುಪಿಗೆ ಭೂಗತರಾಗಿ ಬಂದಿದ್ದ ಜಾರ್ಜ್‌

12:50 AM Jan 30, 2019 | Team Udayavani |

ಉಡುಪಿ: ದೇಶ ಕಂಡ ಅಸಾಮಾನ್ಯ ನಾಯಕ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಅವರ ಹುಟ್ಟೂರು ಮಂಗಳೂರಾದರೂ ಉಡುಪಿ ಭೇಟಿ ಆಗಾಗ್ಗೆ ನಡೆದಿದೆ. ಸೋಶಿಯಲಿಸ್ಟ್‌ ಪಾರ್ಟಿ ಧುರೀಣರಾಗಿ 1950ರ ಕೊನೆ-60ರ ದಶಕದ ಆರಂಭದಲ್ಲಿ ಆಗಾಗ್ಗೆ ಬಂದಿದ್ದ ಜಾರ್ಜ್‌ ಮತ್ತೆ ಬಂದದ್ದು ತುರ್ತು ಪರಿಸ್ಥಿತಿಯಲ್ಲಿ ಭೂಗತರಾಗಿ, ಮತ್ತೆ ಬಂದದ್ದು ರೈಲ್ವೇ ಸಚಿವರಾಗಿ. 

Advertisement

ಮಣಿಪಾಲ ಎಂಐಟಿ ಕಾರ್ಯಕ್ರಮ, ಡಾ| ಟಿಎಂಎ ಪೈ ಪ್ರತಿಷ್ಠಾನದ ಕೊಂಕಣಿ ಭಾಷಾ ಪುರಸ್ಕಾರ, ಕುಂದಾಪುರ ಮೂಡ್ಲಕಟ್ಟೆಯಲ್ಲಿ ಮಾಜಿ ಸಂಸದ ಐ.ಎಂ. ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಂಬಳಕ್ಕಾಗಿ ಆಗಮಿಸಿದ್ದರು.  ಈಗ ಶ್ರೀ ಕೃಷ್ಣಮಠದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೆಯ ಪರ್ಯಾಯ ನಡೆಯುತ್ತಿದ್ದರೆ 16 ವರ್ಷ ಹಿಂದೆ ಮೊದಲ ಪರ್ಯಾಯದ ಅವಧಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪ್ರಸಾದವನ್ನು ಸ್ವೀಕರಿಸಿದ್ದರು. 

ಸೋಶಿಯಲಿಸ್ಟ್‌ ನಾಯಕರಾಗಿ
ಜಾರ್ಜ್‌ ಹಳೆಯ ಸಮಾಜವಾದಿ. ಆಗಿನ ಸೋಶಿ ಯಲಿಸ್ಟ್‌ ಪಾರ್ಟಿ ಪರವಾಗಿ ಉಡುಪಿಗೆ 1957 ಮತ್ತು 1962ರ ಚುನಾವಣೆ ಪ್ರಚಾರಾರ್ಥ ಬಂದಿದ್ದರು. ಆಗ ಇವರಿಗೆ ಸಾಥ್‌ ನೀಡುತ್ತಿದ್ದವರು ಮೂಲ್ಕಿಯ ಮಾಜಿ ಶಾಸಕ ಸಂಜೀವನಾಥ ಐಕಳರು. ಬಳಿಕ ಜಾರ್ಜ್‌ ಅವರು ಮುಂಬಯಿಗೆ ತೆರಳಿ ಕಾರ್ಮಿಕ ನಾಯಕರಾಗಿ ಬೆಳಗಿದರು. 

ಭೂಗತ ಹೋರಾಟಗಾರರಾಗಿ
ಅನಂತರ ಜಾರ್ಜ್‌ ಅವರಿಗೆ ಉಡುಪಿಯ ಸಂಪರ್ಕಆದದ್ದು ತುರ್ತುಪರಿಸ್ಥಿತಿಯಲ್ಲಿ. ದೇಶದಲ್ಲಿ ಸ್ವಾತಂತ್ರÂ ಹರಣದ ವಿರುದ್ಧ ಎದ್ದು ನಿಂತ ಮಹಾನ್‌ ನಾಯಕರಲ್ಲಿ ಜಾರ್ಜ್‌ ಪ್ರಮುಖರು. ಸೈದ್ಧಾಂತಿಕವಾಗಿ ಆರೆಸೆಸ್‌ನ್ನು ವಿರೋಧಿಸುತ್ತಿದ್ದ ಸಮಾಜವಾದಿಗಳೂ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವನ್ನು ಆಳುತ್ತಿದ್ದ ಕಾಂಗ್ರೆಸ್‌ಗೆ ವಿರುದ್ಧವಾಗಿ ಆರೆಸೆಸ್‌ ಜತೆಗೂಡಿ ಕೆಲಸ ಮಾಡಿದ್ದರು. ಜಾರ್ಜ್‌ ಭೂಗತ ಚಟುವಟಿಕೆಯ ಸರದಾರರಾಗಿ
ಒಂದೂವರೆ ವರ್ಷ ಕಾಲ ಕೆಲಸ ಮಾಡಿದ್ದರು. ಇವರ ಕಾರ್ಯಕ್ಷೇತ್ರ ಇಡೀ ಭಾರತವಾಗಿತ್ತು.

ರೈಲ್ವೇ ಸಚಿವರಾಗಿ
ಜಾರ್ಜ್‌ ಅವರು ವಿ.ಪಿ.ಸಿಂಗ್‌ ಸರಕಾರದಲ್ಲಿ ಕೇಂದ್ರದ ರೈಲ್ವೇಖಾತೆ ಹೊತ್ತಾಗ ಕೊಂಕಣ ರೈಲು ಮಾರ್ಗವನ್ನು ಸಾಕಾರಗೊಳಿಸಿದರು. ಇವರು ಉಡುಪಿಗೆ ಆಗ ಭೇಟಿ ಕೊಟ್ಟಿದ್ದರು. ಇಂದ್ರಾಳಿಯಲ್ಲಿ ಕೊಂಕಣ ರೈಲ್ವೇ ಕಾಮಗಾರಿ ಆರಂಭೋತ್ಸವವನ್ನು 1990ರ ಫೆ. 26ರಂದು ಜಾರ್ಜ್‌ ನಡೆಸಿಕೊಟ್ಟರು. 1990ರ ಡಿಸೆಂಬರ್‌ 27ರಂದು ಕೊಂಕಣ ರೈಲ್ವೇ ನಿಗಮದ ಆಡಳಿತ ನಿರ್ದೇಶಕ ಶ್ರೀಧರನ್‌ ಇಂದ್ರಾಳಿ ರೈಲ್ವೇನಿಲ್ದಾಣಕ್ಕೆ ಶಿಲಾನ್ಯಾಸವನ್ನೂ, 1992ರ ಫೆ. 3ರಂದು ಆಗಿನ ರೈಲ್ವೇಸಚಿವ ಸಿ.ಕೆ. ಜಾಫರ್‌ ಶರೀಫ್‌ ಅವರು ಹಳಿ ಕಾಮಗಾರಿ ಆರಂಭೋತ್ಸವವನ್ನೂ, 1993ರ ಮಾ. 20ರಂದು ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರು ಮಂಗಳೂರು – ಉಡುಪಿ ರೈಲು ಮಾರ್ಗದ ಉದ್ಘಾಟನೆಯನ್ನೂ ನೆರವೇರಿಸಿದರು. 

Advertisement

ಇಂದಾ‹ಳಿಯಲ್ಲಿ  ನುಡಿದ ಭವಿಷ್ಯ
1990ರ ಫೆಬ್ರವರಿ 26ರಂದು ಈಗಿನ ಇಂದ್ರಾಳಿ ರೈಲ್ವೇ ನಿಲ್ದಾಣದ ಸ್ಥಳದಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಅವರು ರೈಲ್ವೇಮಂತ್ರಿಯಾಗಿ ಬಹಿರಂಗ ಭಾಷಣ ಮಾಡಿದ್ದರು. ಆಗ ಅವರು ಕೊಂಕಣ ರೈಲ್ವೇಕಾಮಗಾರಿಗೆ ಚಾಲನೆ ನೀಡಿದ್ದರು. 

“ನಾನು ಸಚಿವನಾಗಿ ಇರಲಿ ಇಲ್ಲದೆ ಇರಲಿ, ಸರಕಾರ ಇರಲಿ ಇಲ್ಲದೆ ಇರಲಿ ಕೊಂಕಣ ರೈಲುಮಾರ್ಗ ಪೂರ್ಣಗೊಳ್ಳು ತ್ತದೆ. ಅದಕ್ಕಾಗಿ ಕೊಂಕಣ ರೈಲ್ವೇ ನಿಗಮ ವನ್ನು ಸ್ಥಾಪಿಸಿದ್ದೇನೆ. ಏನೇ ಆದರೂ ಇದು ಸಾಕಾರಗೊಳ್ಳಲು ಬೇಕಾದ ವ್ಯವಸ್ಥೆ ಮಾಡಿದ್ದೇನೆ’ ಎಂದು ಆಗ ಜಾರ್ಜ್‌ ಘೋಷಿಸಿದ್ದರು. ಅವರು ಘೋಷಿಸಿ ದಂತೆಯೇ ಅವರ ಭವಿಷ್ಯವಾಣಿ ನಿಜವಾಯಿತು. 

ಭೂಗತ ಚಟುವಟಿಕೆಯ ವಿಚಿತ್ರ ಸಂಕೇತ!
ದೇಶಾದ್ಯಂತ 1975ರ ನ.14ರಿಂದ 1976ರ ಜ.14ರವರೆಗೆ ಪ್ರತಿ ವಾರವೂ ತಂಡತಂಡವಾಗಿ ಪ್ರತಿಭಟನೆ ನಡೆಸಿ ಜೈಲಿಗೆ ಹೋಗಬೇಕೆಂಬ ಹೋರಾಟ ಅದಾಗಿತ್ತು. ಕೊನೆಯ ದಿನ ಮಕರ ಸಂಕ್ರಾಂತಿಯಂದು ದೊಡ್ಡ ಮಟ್ಟದ ಜೈಲ್‌ಭರೋ ಆಗಿತ್ತು. ಉಡುಪಿಯಲ್ಲಿ ಮೊದಲು ಹೋರಾಟ ನಡೆಸಿ ಜೈಲಿಗೆ ಸೇರಿದವರು ಡಾ| ವಿ.ಎಸ್‌.ಆಚಾರ್ಯರ ನೇತೃತ್ವದ ತಂಡದವರು. ಬಹಿರಂಗ ಹೋರಾಟ ನಡೆಸಿ ಜೈಲಿಗೆ ಹೋಗುವವರು ಮತ್ತು ಭೂಗತರಾಗಿ ಚಟುವಟಿಕೆ ನಡೆಸುವವರು ಹೀಗೆ ಎರಡು ರೀತಿಯ ಹೋರಾಟ ಆಗ ನಡೆ ದಿತ್ತು. ಜಾರ್ಜ್‌ ಅವರು ಭೂಗತ ಚಟುವಟಿಕೆ ನಡೆಸಿದವರು. ಒಂದೂವರೆ ವರ್ಷದ ಅವಧಿಯಲ್ಲಿ ಜಾರ್ಜ್‌ ಅವರು ಉಡುಪಿ, ಮಂಗಳೂರು,
ಸುಳ್ಯಕ್ಕೆ ಬಂದು ಹೋಗಿದ್ದರು. ಭೂಗತ ಹೋರಾಟಗಾರರು ಎಲ್ಲಿಗೆ ಬಂದರು? ಯಾರ ಮನೆಯಲ್ಲಿ ಉಳಿದುಕೊಂಡರು? ರಾತ್ರಿ ಸಂಚರಿಸುತ್ತಿದ್ದರೋ? ಹಗಲು ಸಂಚರಿಸುತ್ತಿದ್ದರೋ? ಎಂಬುದು ಇಂದಿಗೂ ಗುಪ್ತವಾಗಿಯೇ ಇದೆ. ಭೂಗತ ಚಟುವಟಿಕೆ ನಡೆಸಿದ ಹಲವರು ಇಂದು ನಮ್ಮೊಡನಿದ್ದರೂ ಅವರೂ ಬಾಯಿಬಿಡುವುದಿಲ್ಲ. ರಾತೋರಾತ್ರಿ ಮೂರ್‍ನಾಲ್ಕು ಮನೆಗಳಿಗೆ ತಮ್ಮ ನಿವಾಸವನ್ನು ಬದಲಾಯಿಸುತ್ತಿದ್ದರಂತೆ. ಆಗ ಈಗಿನಂತೆ ದೂರವಾಣಿ ಸೌಲಭ್ಯಗಳು ಇರಲಿಲ್ಲ. ಇದ್ದ ದೂರವಾಣಿಯನ್ನೂ ಸಂಕೇತಾರ್ಥವಾಗಿ ಬರೆದುಕೊಳ್ಳುತ್ತಿದ್ದರು. ಉದಾಹರಣೆಗೆ 21569 ಸಂಖ್ಯೆ ಬರೆದುಕೊಳ್ಳಬೇಕಾದರೆ “ದೂಮಣ್ಣ ನಿಂದ 215 ರೂ. 69 ಪೈಸೆ ಬಾಕಿ’ ಎಂದು ಬರೆದು ಕೊಳ್ಳುತ್ತಿದ್ದರು. ಒಂದು ವೇಳೆ ಪೊಲೀಸರಿಗೆ ಈ ಚೀಟಿ ಸಿಕ್ಕಿದರೂ ಅವರೂ ಗೊಂದಲಕ್ಕೆ ಬೀಳುತ್ತಿದ್ದರು. ಭೂಗತ ಚಟುವಟಿಕೆ ನಡೆಸುತ್ತಿದ್ದವರ ಹೆಸರು ಒಂದೊಂದು ಕಡೆ ಒಂದೊಂದಾಗಿ ಕರೆಸಿಕೊಳ್ಳುತ್ತಿತ್ತು. ಇವರ ಒಟ್ಟು ಗುರಿ ಹೆಚ್ಚು ಜನರನ್ನು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳು ವಂತೆ ಮಾಡುವುದಾಗಿತ್ತು. ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದವರು ಜಾರ್ಜ್‌. 

- ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next