“ನಿಜವಾಗಿಯೂ ಈ ರೀತಿಯ ವ್ಯಕ್ತಿಗಳೂ ಇರ್ತಾರಾ…? ನಟಿ ನಿಶ್ವಿಕಾ ನಾಯ್ಡು ಕಥೆ ಕೇಳಿದ ಬಳಿಕ ಆ ನಿರ್ದೇಶಕರನ್ನು ಹೀಗೆ ಪ್ರಶ್ನಿಸಿದರಂತೆ. ಅಷ್ಟಕ್ಕೂ ನಿಶ್ವಿಕಾ ಕೇಳಿದ ಕಥೆ ಬೇರಾವುದೂ ಅಲ್ಲ, “ಜಂಟಲ್‌ಮೆನ್’ ಸ್ಟೋರಿ. ಆ ಕಥೆ ಹೇಳಿದ್ದು ನಿರ್ದೇಶಕ ಜಡೇಶ್. ಅಂದಹಾಗೆ, ಆ ಕಥೆಯ ವಿಶೇಷವೇನು ಗೊತ್ತಾ? ದಿನಕ್ಕೆ 18 ತಾಸು ನಿದ್ದೆ ಮಾಡುವ ಹುಡುಗನೊಬ್ಬನ ಸುತ್ತ ನಡೆಯೋ ಕಥೆ! ಉಳಿದ ಸಮಯದಲ್ಲಿ ಅವನು ಏನೆಲ್ಲಾ ಮಾಡುತ್ತಾನೆ ಅನ್ನುವುದನ್ನು ವಿಶೇಷವಾಗಿ ಹೆಣೆದಿರುವ ಕಥೆ ಕೇಳಿದ ನಿಶ್ವಿಕಾ, ನಿಜವಾಗಿಯೂ ಅಂತಹ ವ್ಯಕ್ತಿಗಳು ಇರುತ್ತಾರಾ? ಅಂತ ಪ್ರಶ್ನಿಸಿದ್ದರಂತೆ.
“ವಾಸು ನಾನು ಪಕ್ಕಾ ಕಮರ್ಷಿಯಲ್’, “ಅಮ್ಮಾ ಐ ಲವ್‌ಯು’,” ಪಡ್ಡೆ ಹುಲಿ’ ಬಳಿಕ “ಜೆಂಟಲ್‌ಮೆನ್’ ಸಿನಿಮಾದಲ್ಲಿ ನಾಯಕಿಯಾಗಿರುವ ನಿಶ್ವಿಕಾ ನಾಯ್ಡುಗೆ ಈ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರವಂತೆ. ಆ ಕುರಿತು ಅವರು ಹೇಳುವುದಿಷ್ಟು. “ಆರಂಭದಲ್ಲಿ ನಾನು ಕಥೆ ಕೇಳಿದಾಗ, ಥ್ರಿಲ್ ಆಗಿದ್ದು ನಿಜ. ನಿರ್ದೇಶಕ ಜಡೇಶ್ ಅವರು ಕಥೆ ಹೇಗೆ ಹೇಳಿದ್ದರೋ, ಹಾಗೆಯೇ ಸಿನಿಮಾ ಮಾಡಿ ಮಗಿಸಿದ್ದಾರೆ. ಈ ವಾರ ಚಿತ್ರ ಬಿಡುಗಡೆಯಾಗುತ್ತಿದ್ದು, ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲವಿದೆ.
ಇದನ್ನು ಖಂಡಿತ ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಈ ಹಿಂದೆ ಗುರುದೇಶಪಾಂಡೆ ಅವರ ನಿರ್ದೇಶನದ “ಪಡ್ಡೆ ಹುಲಿ’ ಚಿತ್ರದಲ್ಲಿ ನಟಿಸಿದ್ದೆ. ಈಗ ಅವರ ನಿರ್ಮಾಣದ “ಜಂಟಲ್‌ಮೆನ್’ ಚಿತ್ರದಲ್ಲಿ ಮಾಡಿದ್ದೇನೆ. ಚಿತ್ರದಲ್ಲಿ ನನ್ನದು ತಪಸ್ವಿನಿ ಎಂಬ ಪಾತ್ರ. ಅದೊಂದು ರೀತಿ ತುಂಬಾನೇ ಜವಾಬ್ದಾರಿ ಹುಡುಗಿಯಾಗಿ, ಮೆಚ್ಯೂರ್ಡ್ ಲುಕ್ ಇರುವಂತಹ ಪಾತ್ರ ಮಾಡಿದ್ದೇನೆ. ಈ ಕಥೆ ಕೇಳಿದಾಗಲೇ, ನನಗೆ ನಿಜಕ್ಕೂ ಇದು ರಿಯಲ್ ವ್ಯಕ್ತಿಗಳ ಕಥೆನಾ ಅಥವಾ ಕಾಲ್ಪನಿಕ ಕಥೆನಾ ಎಂದು ಕೇಳಿದ್ದೆ. ಅದು ನಿಜ ಅಂತ ಗೊತ್ತಾದಾಗಲೇ, ನಾನೂ ಈ ಚಿತ್ರದಲ್ಲಿ ಒಂದು ಭಾಗ ಆಗಬೇಕು ಎಂದು ತೀರ್ಮಾನಿಸಿದ್ದೆ.
ಅದೀಗ ಚಿತ್ರ ಮುಗಿದು, ಜನರ ಮುಂದೆ ಬರಲು ಅಣಿಯಾಗಿದೆ’ ಎಂಬುದು ನಿಶ್ವಿಕಾ ಮಾತು. ಚಿತ್ರೀಕರಣದ ಬಗ್ಗೆ ಮಾತನಾಡುವ ನಿಶ್ಚಿಕಾ, “ಚಿತ್ರದ ಹಾಡೊಂದನ್ನು ವಂಡರ್‌ಲಾದಲ್ಲಿ ಚಿತ್ರೀಕರಿಸಲಾಗಿದೆ. ಆ ಸಾಂಗ್‌ನ ಅನುಭವ ಅನನ್ಯ. ಯಾಕೆಂದರೆ, ಅದು ನಮಗೆ ಶೂಟಿಂಗ್ ಎನಿಸಲೇ ಇಲ್ಲ. ಕುಟುಂಬದವರೆಲ್ಲರೂ, ಒಂದು ಪಿಕ್‌ನಿಕ್ ಹೋದಂತೆ ಇತ್ತು. ನಾನು ಡಬ್ಬಿಂಗ್ ವೇಳೆ ಸಿನಿಮಾ ನೋಡಿದ್ದೇನೆ. ನಿರೀಕ್ಷೆ ಜಾಸ್ತಿ ಇದೆ. ಇಲ್ಲಿ ಎಲ್ಲವೂ ಫ್ರೆಶ್ ಆಗಿದೆ, ಕಥೆ, ಕಾನ್ಸೆಪ್ಟ್, ಶೂಟ್ ಮಾಡಿರುವ ರೀತಿ ಹಾಗೂ ಅದರ ಟೋನ್ ಎಲ್ಲವೂ ಹೊಸದಾಗಿದೆ. ಇನ್ನು, ಈ ಚಿತ್ರ ನನಗೆ ತುಂಬಾನೇ ಸ್ಪೆಷಲ್.
ಯಾಕೆಂದರೆ, ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದು. ಇನ್ನು, ಪ್ರಜ್ವಲ್ ದೇವರಾಜ್ ಬಗ್ಗೆ ಹೇಳುವುದಾದರೆ, ನಾನು ಮೊದ ಮೊದಲು ಕೊಂಚ ನರ್ವಸ್ ಆಗಿಯೇ ಇದ್ದೆ. ಕೆಲ ದೃಶ್ಯಗಳಲ್ಲಿ ನಟಿಸಿದ ಬಳಿಕ ಪ್ರಜ್ವಲ್ ಅವರೇ ನನ್ನ ಬಳಿ ಬಂದು ಮಾತನಾಡಿಸಿ, ಫ್ರೆಂಡ್ ಆಗಿ ತುಂಬಾನೇ ಕಂಫರ್ಟ್ ಫೀಲ್ ಕೊಟ್ಟರು. ನಿರ್ದೇಶಕರ ಮೊದಲ ಚಿತ್ರ ಇದಾಗಿದ್ದರೂ, ಅವರು ತುಂಬಾ ತಾಳ್ಮೆಯಿಂದ ಎಲ್ಲವನ್ನೂ ಹೇಳಿಕೊಟ್ಟು, ಎಲ್ಲರಿಂದಲೂ ನೀಟ್ ಆಗಿ ಕೆಲಸ ತೆಗೆದುಕೊಂಡಿದ್ದಾರೆ. ಒಟ್ಟಾರೆ, “ಜಂಟಲ್‌ಮೆನ್’ ಹೊಸಬಗೆಯ ಚಿತ್ರವಂತೂ ಹೌದು’ ಎನ್ನುವ ನಿಶ್ವಿಕಾ, “ರಾಮಾರ್ಜುನ’ ಹಾಗೂ “ಗಾಳಿಪಟ 2′ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.
ದರ್ಶನ್ ಸಾಥ್: ಆರಂಭದಿಂದಲೂ ಪ್ರಜ್ವಲ್ ದೇವರಾಜ್ ಅವರ “ಜಂಟಲ್‌ಮೆನ್’ ಚಿತ್ರಕ್ಕೆ ಸಾಥ್ ನೀಡುತ್ತಾ ಬಂದಿರುವ ದರ್ಶನ್ ಇಂದು ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮಕ್ಕೂ ಅತಿಥಿಯಾಗಿ ಆಗಮಿಸಲಿದ್ದಾರೆ. ಚಿತ್ರದ ಟ್ರೇಲರ್, ಹಾಡುಗಳ ಪ್ರದರ್ಶನ ಕೂಡಾ ನಡೆಯಲಿದ್ದು, “ಜಂಟಲ್‌ಮೆನ್’ಗೆ ದರ್ಶನ್ ಸಾಥ್ ನೀಡುತ್ತಿದ್ದಾರೆ.