ಆಳಂದ: ಆಮ್ ಆದ್ಮಿ ಪಕ್ಷದಿಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮೇ 17ರಂದು ಸಂಜೆ 5ಗಂಟೆಗೆ ಜನಸ್ಪಂದನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಮುಖಂಡರು, ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಧುತ್ತರಗಾಂವ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಪ್ರಥಮ ಬಾರಿಗೆ ಆಗಮಿಸಿ ಅವರು ಈ ವಿಷಯ ಪ್ರಕಟಿಸಿದರು. ಅಂದು ಬೆಳಗ್ಗೆ 11ಗಂಟೆಗೆ ಉಮರ್ಗಾ ರಸ್ತೆಯಲ್ಲಿ ಪಕ್ಷದ ನೂತನ ಕಚೇರಿ ಉದ್ಘಾಟಿಸಲಾಗುವುದು. ಅಲ್ಲದೇ ಪಟ್ಟಣದ ಮಟಕಿ ರಸ್ತೆಯ ಟಿಪ್ಪುಸುಲ್ತಾನ ಸರ್ಕಾರದಲ್ಲಿ ಆಮ್ ಆದ್ಮಿ ಪಕ್ಷದ ಜನಸಂಪರ್ಕ ಕಚೇರಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ರಹಿತ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಏಕೈಕ ಪಕ್ಷವಾಗಿದ್ದರಿಂದ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪರ್ಕಕ್ಕೆ ಬಂದಮೇಲೆ ನನ್ನ ತವರು ಕ್ಷೇತ್ರ ಆಳಂದ ವಿಧಾನಸಭೆ ಕ್ಷೇತ್ರದಿಂದಲೇ ಪಕ್ಷದ ಕಾರ್ಯ ಚಟುವಟಿಕೆ ಆರಂಭಿಸುತ್ತಿದ್ದೇನೆ ಎಂದರು.
ಜನಸ್ಪಂದನ ಸಭೆಯಲ್ಲಿ ತಾಲೂಕಿನ ಸಾರ್ವಜನಿಕ ಬೇಡಿಕೆಗಳು, ಅಭಿವೃದ್ಧಿ, ಆಳಂದ ಯುವಕರಿಗೆ ಉದ್ಯೋಗ ಸೃಷ್ಟಿ, ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಕೃಷಿ ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸುವುದು ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಿ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.
ಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸದೃಢಪಡಿಸಲು ಪ್ರಾಮಾಣಿಕ ಯುವಕರ ತಂಡವನ್ನು ರಚಿಸಿ ಈ ವಾರದಿಂದಲೇ 2023ರ ವಿಧಾನಸಭೆ ಚುನಾವಣೆ ಒಳಗೆ ಆಳಂದ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗೆ ಕನಿಷ್ಟ ಮೂರು ಬಾರಿ ಭೇಟಿ ನೀಡಲಾಗುವುದು ಎಂದು ಹೇಳಿದರು.
ನಿವೃತ್ತ ಜಂಟಿ ಆಯುಕ್ತ, ಪಕ್ಷದ ಮುಖಂಡ ಎಲ್.ಎಸ್. ರಾಠೊಡ, ಐಟಿ ಉದ್ಯಮಿ ಶರಣ ಪಾಟೀಲ, ಮುಖಂಡ ಕಾಂಬಳೆ ಇತರರು ಮಾತನಾಡಿದರು. ಪಕ್ಷದ ಕಾರ್ಯಕರ್ತರು ಇದ್ದರು.