ಕೆಂಭಾವಿ: ಪಟ್ಟಣದಲ್ಲಿ ಗುರುವಾರ ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ ನೇತೃತ್ವದಲ್ಲಿ ನಡೆದ ಪುರಸಭೆಯ ಸಾಮಾನ್ಯ
ಸಭೆ ಹಲವು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು.
ಮಧ್ಯಾಹ್ಯ 2:30ಕ್ಕೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದೆ ಇರುವುದನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಇದರಿಂದ ಕೋರಂ ಅಭಾವದಿಂದ ಸಭೆ ಮುಂದೂಡುವ ಸ್ಥಿತಿ ನಿರ್ಮಾಣವಾಯಿತು. ಈ ಮಧ್ಯೆ ಆಡಳಿತ ಪಕ್ಷದ ಇಬ್ಬರು ಸದಸ್ಯರು 4:00 ಗಂಟೆಗೆ ಬಂದ ನಂತರ ಸಭೆ ಆರಂಭವಾಗಿ ನೆಪ ಮಾತ್ರಕ್ಕೆ ಎಂಬಂತೆ ಅನುಮೋದನೆ ಪಡೆಯಿತು.
ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಚಂದ್ರಶೇಖರ ಮೇಟಿ, 2018-19ನೇ ಸಾಲಿನ ಪುರಸಭೆ ಮಳಿಗೆಗಳ ಹರಾಜು, ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಆಶ್ರಯ ಮನೆ, ಪಟ್ಟಣದ ಸ್ವಚ್ಚತೆ, ನಗರೋತ್ಥಾನ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ 2017-18ನೇ ಸಾಲಿನ ಆಯವ್ಯಯ ಕುರಿತು ಅನುಮೋದನೆ ಸೇರಿದಂತೆ ಇನ್ನುಳಿದ ವಿಷಯಗಳನ್ನು ಪ್ರಸ್ತಾಪಿಸಿದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವುದರಿಂದ ಇದರ ಬಗ್ಗೆ ವಿಶೇಷ ಗಮನ ಹರಿಸುವಂತೆ ಸದಸ್ಯ ರಾಘವೇಂದ್ರ ದೇಶಪಾಂಡೆ ಸೂಚಿಸಿದರು. ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ಅಗಲೀಕರಣ ಕುರಿತು ಸಂಪೂರ್ಣ ವಿವರ ನೀಡುವಂತೆ ಕೇಳಿದ ಬಿಜೆಪಿ ಸದಸ್ಯ ಮಲ್ಲಿನಾಥಗೌಡ ಪೊಲೀಸ್ ಪಾಟೀಲ ಪ್ರಶ್ನೆಗೆ ಉತ್ತರ ನೀಡಲು ತಡಬರಿಸಿದ ಮುಖ್ಯಾ
ಧಿಕಾರಿ ಸಮಜಾಯಿಸಿ ನೀಡಿದರು.
ಸಾಮಾನ್ಯ ಜನತೆಯ ಕೆಲಸ ಕಾರ್ಯಗಳನ್ನು ಅತಿ ಶೀಘ್ರದಲ್ಲಿ ನೆರವೇರಿಸಲು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದರು. ಒಟ್ಟಾರೆ ವಿರೋಧ ಪಕ್ಷದ ವಿರೋಧದ ನಡುವೆಯೂ ಸಾಮಾನ್ಯ ಸಭೆ ಮುಕ್ತಾಯವಾಯಿತು. ಉಪಾಧ್ಯಕ್ಷೆ ಮಾಸಮ್ಮ ಹಲಗಿ, ಸದಸ್ಯರಾದ ಮುದಿಗೌಡ ಮಾಲಿಪಾಟೀಲ ರಫತ್ ನಗ್ಮಾ, ಉಮಾದೇವಿ, ಕಮಲಮ್ಮ, ಭೀಮರಾವ ಕುಲಕರ್ಣಿ, ತಿಪ್ಪಣ್ಣ ಟಣಕೆದಾರ ಇದ್ದರು. ವ್ಯವಸ್ಥಾಪಕಿ ನಾಗರತ್ನನಿರೂಪಿಸಿದರು. ದೇವಪ್ಪ ವಂದಿಸಿದರು.