Advertisement

 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆ

04:01 PM Dec 23, 2017 | |

ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಕೈಗೊಳ್ಳುವ ಹೆಚ್ಚಿನ ನಿರ್ಣಯಗಳು ಅನುಷ್ಠಾನವಾಗುವುದೇ ಇಲ್ಲ. ಇವುಗಳು ಕೇವಲ ಕಡತಕ್ಕೆ ಮಾತ್ರ ಮೀಸಲಾಗುತ್ತಿರುತ್ತವೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಗಂಭೀರ ಆರೋಪ ಮಾಡಿದ ಪ್ರಸಂಗ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

34ನೇ ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯತ್‌ ಅಧ್ಯಕ್ಷೆ ರತಿ ಎಸ್‌. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯೆ ಸತ್ಯವತಿ ಮಾತನಾಡಿ, ತಾಳೆಹಿತ್ಲು ಎಂಬಲ್ಲಿ ಎರಡು ಟ್ಯಾಂಕ್‌ ಗಳಿದ್ದು, ಒಂದು ಟ್ಯಾಂಕ್‌ನಿಂದ ಕೇವಲ ಆರು ಮನೆಗಳಿಗೆ ಮಾತ್ರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಇಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ.

ಸಮಾನ ನ್ಯಾಯ ಒದಗಿಸಲು ಮನವಿ
ಈ ಆರು ಮನೆಗಳಿಗೂ ಇನ್ನಿತರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಟ್ಯಾಂಕ್‌ನಿಂದಲೇ ಸಂಪರ್ಕ ಕಲ್ಪಿಸುವ ಮೂಲಕ ಪಂಚಾಯತ್‌ ಸಮಾನ ನ್ಯಾಯ ಕಲ್ಲಿಸಬೇಕೆಂದು ಕಳೆದ ಗ್ರಾಮ ಸಭೆಯಲ್ಲಿಯೇ ಗ್ರಾಮಸ್ಥರು ಆಗ್ರಹಿಸಿದ್ದರು. ಬಳಿಕ ಈ ಬಗ್ಗೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿ ಇಲ್ಲಿಯ ವಾಸ್ತವಾಂಶ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ ಸಮಿತಿ ರಚಿಸಿ ಹಲವು ತಿಂಗಳು ಕಳೆದರೂ
ಯಾವುದೇ ಕೆಲಸವಾಗಿಲ್ಲ. ಸಮಿತಿಯು ನಾಮಕಾವಸ್ತೆಗೆ ರಚಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಎನ್‌. ಶೇಖಬ್ಬ, ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಬೇಡ. ನಿರ್ಣಯಗಳು ಆದಷ್ಟು ಬೇಗ ಅನುಷ್ಠಾನಗೊಳ್ಳಲು ಕ್ರಮ ಕೈಗೊಳ್ಳಬೇಕು. ಶೀಘ್ರವೇ ಅಲ್ಲಿಗೆ ಸಮಿತಿ ತೆರಳಿ ವಾಸ್ತವಾಂಶ ಪರಿಶೀಲನೆ ಮಾಡಬೇಕು. ಎಲ್ಲರಿಗೂ ನೀರಿನ ಸಂಪರ್ಕ ಕಲ್ಪಿಸಿರುವ ಟ್ಯಾಂಕ್‌ನಿಂದ ಆರು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಾದರೆ ಎಲ್ಲರಿಗೂ ಅದೇ ಟ್ಯಾಂಕ್‌ನಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಎಂದರು.

ಉಪಾಧ್ಯಕ್ಷ ಅಸ್ಕರ್‌ ಅಲಿ ಮಾತನಾಡಿ, ಅಧಿಕಾರಿಗಳ ಅಲಭ್ಯತೆಯಿಂದ ಪರಿಶೀಲನೆ ವಿಳಂಬವಾಗಿದ್ದು ನಿಜ. ಇಂದೇ ದಿನ ನಿಗದಿಪಡಿಸಿ ಅಲ್ಲಿನ ವಾಸ್ತವಾಂಶ ಪರಿಶೀಲಿಸೋಣ. ಆರು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಟ್ಯಾಂಕ್‌ನಿಂದ ಹೆಚ್ಚು ವರಿ ಮನೆಗಳಿಗೆ ಸಂಪರ್ಕ ಕಲ್ಪಿಸೋಣ ಎಂದರು. ಮುಂದಿನ ಬುಧವಾರದಂದು ತಾಳೆಹಿತ್ಲು ಟ್ಯಾಂಕ್‌ ಬಳಿಗೆ ಸಮಿತಿ ತೆರಳಿ ಪರಿಶೀಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಸದಸ್ಯರಾದ ಪ್ರಶಾಂತ್‌ ಎನ್‌., ಬಾಬು ನಾಯ್ಕ, ಮೈಕಲ್‌ ವೇಗಸ್‌, ಯಮುನಾ, ದೇವಕಿ, ಕೃಷ್ಣವೇಣಿ, ಜ್ಯೋತಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಸ್ವಾಗತಿಸಿ, ವಂದಿಸಿದರು.

ಬದಲಿ ಜಾಡಮಾಲಿ ನೇಮಕ
ಈಗಿರುವ ಜಾಡಮಾಲಿ ನೆಕ್ಕಿಲಾಡಿ ವಾರದ ಸಂತೆಯ ದಿನ ಮಾತ್ರ ನೆಕ್ಕಿಲಾಡಿ ಸಂತೆಕಟ್ಟೆಯನ್ನು ಸ್ವತ್ಛಗೊಳಿಸುತ್ತಾರೆ. ಇದಕ್ಕೆ ಅವರು ಸಂತೆ ನಡೆಸುವವರಿಂದ ಹಣ ಪಡೆಯುತ್ತಾರೆ. ಆದರೆ ಪಂಚಾಯತ್‌ ಹೇಳಿದ ಕೆಲಸವನ್ನು ಮಾಡುವುದಿಲ್ಲ. ಆದ್ದರಿಂದ ಪಂಚಾಯತ್‌ ಸುಮ್ಮನೆ ಭತ್ಯೆ ನೀಡುವಂತಾಗಿದೆ. ಆದ್ದರಿಂದ ಈ ಜಾಗಕ್ಕೆ ಬದಲಿ ಜಾಡಮಾಲಿ ನೇಮಕ ಮಾಡಿಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next