ಸೇಡಂ: ಭಗವದ್ಗೀತೆ ಹೆಸರಲ್ಲಿ ಮುಖ್ಯಾಧಿಕಾರಿ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಜಟಾಪಟಿ ನಡೆಸಿದ ಘಟನೆಗೆ ಶನಿವಾರ ನಡೆದ ತುರ್ತು ಸಾಮಾನ್ಯ ಸಭೆ ಸಾಕ್ಷಿಯಾಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಕೆಂಪು ಪ್ಲಾಸ್ಟಿಕ್ ಬ್ಯಾಗ್ ಜತೆಗೆ ಸಭೆಗೆ ಆಗಮಿಸಿದ ಮಾಜಿ ಅಧ್ಯಕ್ಷ ಎಕಬಾಲ್ ಖಾನ್, ಸಭಾಂಗಣದ ನಡುವೆ ನೆಲದ ಮೇಲೆ ಕುಳಿತು ಪೌರ ಕಾರ್ಮಿಕರ ಪರ ಮಾತನಾಡಲು ಶುರು ಮಾಡಿದರು.
ಪೌರ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು. ಮುಖ್ಯಾಧಿಕಾರಿಗಳ ಕೆಲಸದಿಂದ ಜನ ರೋಸಿ ಹೋಗಿದ್ದಾರೆ ಎಂದು ಪ್ರತಿಭಟಿಸಿದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಅನೀಲಕುಮಾರ ಪಾಟೀಲ ತೆಲ್ಕೂರ, ಏನೇ ವಿಚಾರ ಇದ್ದರೂ ಕುರ್ಚಿ ಮೇಲೆ ಕುಳಿತಿ ಚರ್ಚಿಸೋಣ ಎಂದರಾದರೂ, ಅವರ ಮಾತಿಗೆ ಜಗ್ಗದ ಎಕ್ಬಾಲ್‌ಖಾನ್‌ಕೆಂಪು ಪ್ಲಾಸ್ಟಿಕ್‌ನಲ್ಲಿ ತಂದಿದ್ದ ಭಗವದ್ಗೀತೆ ಗ್ರಂಥವನ್ನು ತೆಗೆದು ಇದರ ಮೇಲೆ ಆಣೆ ಮಾಡಿ ಹೇಳಿ.
ನೀವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಅವರನ್ನು ಪ್ರಶ್ನಿಸಲು ಮುಂದಾದರು. ಈ ವೇಳೆ ಮುಖ್ಯಾಧಿಕಾರಿ ಮತ್ತು ಎಕ್ಬಾಲ್‌ಖಾನ್ ನಡುವೆ ಕೆಲಹೊತ್ತು ಮಾತಿನ ಜಟಾಪಟಿ ನಡೆಯಿತು. ನಾನ್ಯಾಕೆ ಗೀತೆ ಮೇಲೆ ಆಣೆ ಮಾಡಲಿ. ನಾನು ಕೊಲೆ ಆರೋಪಿನಾ? ಇದೇನು ನ್ಯಾಯಾಲಯವೇ? ನೀವೇನು ವಕೀಲರೇ ಎಂದು ಪ್ರಶ್ನಿಸಿದರು.
ಸಾಧ್ಯವಾದರೆ ಜಿಲ್ಲಾಧಿ ಧಿಕಾರಿಗಳಿಗೆ ದೂರು ನೀಡಿ ನನ್ನನ್ನು ವರ್ಗಾಯಿಸಿ. ಸುಖಾ ಸುಮ್ಮನೆ ಆರೋಪ ಮಾಡದಿರಿ ಎಂದು ದಬಾಯಿಸಿದರು. ಇದರಿಂದ ಗಲಿಬಿಲಿಗೊಂಡ ಎಕ್ಬಾಲ್ ಖಾನ್, ನಡೀರಿ ಜನರ ಬಳಿ ತೆರಳಿ ಅಭಿಪ್ರಾಯ ಸಂಗ್ರಹ ಮಾಡೋಣ. ನಿಮ್ಮ ಕಾರ್ಯ ಚನ್ನಾಗಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯ ದತ್ತು ಪಾಟೀಲ ಮಾತನಾಡಿ, ಭಗವದ್ಗೀತೆಯನ್ನು ನೆಲದ ಮೇಲೆ ಇರಿಸಿ ಅವಮಾನಿಸಲಾಗಿದೆ.
ಈ ರೀತಿಯಾಗಿ ಮಾಜಿ ಅಧ್ಯಕ್ಷ ಎಕ್ಬಾಲ್ ಖಾನ್ ನಡೆದುಕೊಂಡಿರುವುದು ಖಂಡನೀಯ ಎಂದು ಆಗ್ರಹಿಸಿದರು. ಒಟ್ಟಾರೆಯಾಗಿ ಜನರಿಗಾಗಿ ಸಭೆ ನಡೆಸಬೇಕಾದ ಸದಸ್ಯರು ಮತ್ತು ಅಧಿಕಾರಿಗಳೇ ಜಟಾಪಟಿಗೆ ಇಳಿದಿರುವುದು ಆಕ್ರೋಶಕ್ಕೆ ಕಾರಣವಾಯಿತು.
ಉಪಾಧ್ಯಕ್ಷೆ ಕಮಲಾಬಾಯಿ ಹೂಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬ್ ಅಲಿ ಜಿಗರ, ಸದಸ್ಯರಾದ ಹಾಜಿ ನಾಡೇಪಲ್ಲಿ, ಲೀಲಾಬಾಯಿ ರಾಠೊಡ, ಶ್ರೀಲತಾ ಕೊಟ್ರಕಿ, ರಾಜಶೇಖರ ನಿಲಂಗಿ, ಜಗನ್ನಾಥ ಚಿಂತಪಳ್ಳಿ, ದೇವಿಂದ್ರ ಬುಡಸಾಣಿ, ಅಶೋಕ ಮಹಾಡಿಕ್, ಸಂತೋಷ ತಳವಾರ, ರಾಜು ಹಡಪದ, ಬಸವರಾಜ ರಾಯಕೋಡ, ಶಾಬೋದ್ದಿನ್ ಹೈಯಾಳ,ಮಲ್ಲಿಕಾರ್ಜುನ ವಾಲೀಕಾರ, ವೀರೇಂದ್ರ ರುದನೂರ, ರಾಜು ಚವ್ಹಾಣ ಇದ್ದರು.