Advertisement
ಕೋವಿಡ್ ವೈರಸ್ ನಿಂದ ಜಗತ್ತಿನಾದ್ಯಂತ 40 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಎಂಟು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರಕ ಸೋಂಕು ಹರಡದಿರುವಂತೆ ತಡೆಯಲು ವಿವಿಧ ತಂತ್ರಕ್ಕೆ ಮೊರೆ ಹೋಗಿರುವ ದೇಶಗಳ ವಿವರ ಇಲ್ಲಿದೆ…
ಮಲೇಷ್ಯಾದಲ್ಲಿ ಮನೆ ಯಜಮಾನ ಮಾತ್ರ ತರಕಾರಿ ಮಾರುಕಟ್ಟೆಗೆ (ಸೂಪರ್ ಮಾರ್ಕೆಟ್) ಹೋಗಬೇಕು ಎಂದು ಕಡ್ಡಾಯ ಆದೇಶ ಹೊರಡಿಸಿದೆ. ಆದರೆ ಇದರಿಂದ ಹೆಚ್ಚು ಗೊಂದಲಕ್ಕೊಳಗಾದವರು ಗಂಡಸರು! ಮಾರ್ಚ್ 16ರಂದು ಮಲೇಷ್ಯಾ ಸರ್ಕಾರ ಮೊದಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಿತ್ತು. ವಿದೇಶಿಯರಿಗೂ ಷರತ್ತು ವಿಧಿಸಿತ್ತು. ಮಾರ್ಚ್ 21ರಂದು ಹಿರಿಯ ಸಚಿವ ಡಾಟುಕ್ ಫಾದಿಲ್ಲಾ ಯೂಸೂಫ್, ಚಲನವಲನ ನಿಯಂತ್ರಣ ಆದೇಶದ ಪ್ರಕಾರ ಒಂದು ಕುಟುಂಬದ ಒಬ್ಬ ವ್ಯಕ್ತಿ (ಯಜಮಾನ) ಮಾತ್ರ ಮನೆಯಿಂದ ಹೊರ ಹೋಗಲು ಅವಕಾಶ ಎಂದು ಘೋಷಿಸಿದ್ದರು. ಮಲೇಷ್ಯಾದಲ್ಲಿ ಹೆಂಗಸರು ಹೆಚ್ಚಾಗಿ ಮನೆಗೆ ಬೇಕಾದ ಸಾಮಾನು ತರುವುದು ರೂಢಿ. ಹೀಗಾಗಿ ಸೂಪರ್ ಮಾರ್ಕೆಟ್ ನಲ್ಲಿ ಗಂಡಸರು ಗೊತ್ತು ಗುರಿ ಇಲ್ಲದೆ ತಿರುಗಾಡುತ್ತಿರುವ ಪೋಸ್ಟ್ ಒಂದನ್ನು ಮುಝಾಫರ್ ರೆಹಮಾನ್ ಫೇಸ್ ಬುಕ್ ನಲ್ಲಿ ಹಾಕಿದ್ದರು ಎಂದು ವರದಿ ತಿಳಿಸಿದೆ.
Related Articles
ಪನಾಮಾದಲ್ಲಿ 1,075 ಮಂದಿಗೆ ಕೋವಿಡ್ 19 ವೈರಸ್ ತಗುಲಿರುವುದು ದೃಢಪಟ್ಟಿದ್ದು, 27 ಮಂದಿ ಈವರೆಗೆ ಸಾವನ್ನಪ್ಪಿದ್ದರು. ಮಾರಕ ಕೋವಿಡ್ ವೈರಸ್ ಹರಡುವುದನ್ನು ತಡೆಯಲು ಪನಾಮಾ ಸರ್ಕಾರ ಲಿಂಗಾಧಾರಿತ ಕ್ವಾರಂಟೈನ್ ಕ್ರಮ ಅನುಸರಿಸುವುದಾಗಿ ಬುಧವಾರ ಘೋಷಿಸಿತ್ತು.
Advertisement
ಕ್ವಾರಂಟೈನ್ ಷರತ್ತು ಹೀಗಿತ್ತು: ಸೂಪರ್ ಮಾರ್ಕೆಟ್ ಅಥವಾ ಮೆಡಿಕಲ್ ಗೆ ಹೋಗಲು ಗಂಡಸರಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಅವಕಾಶ, ಮಹಿಳೆಯರಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಅವಕಾಶ!
ಶ್ರೀಲಂಕಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಬಂಧನ:ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ ಹೊರಡಿಸಿದ ಆದೇಶ ಹಲವರ ಹುಬ್ಬೇರಿಸುವಂತೆ ಮಾಡಿದೆ. ಹೌದು ಕೋವಿಡ್ ತಡೆಗಾಗಿ ಸಾಮಾಜಿಕ ಅಂತರ ಅಭ್ಯಾಸ ಮಾಡಿಕೊಳ್ಳಿ ಇಲ್ಲವೇ ಬಂಧನಕ್ಕೊಳಗಾಗಲಿದ್ದೀರಿ ಎಂದು ಆದೇಶ ಹೊರಡಿಸಿತ್ತು. ಶನಿವಾರ ಕೋವಿಡ್ 19 ಸೋಂಕಿಗೆ ಮೊದಲ ಸಾವು ವರದಿಯಾಗಿತ್ತು. ದೇಶಾದ್ಯಂತ ಕರ್ಫ್ಯೂ ಹೇರಿದ್ದ ಶ್ರೀಲಂಕಾ ಸಾವಿರಾರು ಜನರನ್ನು ಬಂಧಿಸಿದೆ ಎಂದು ವರದಿ ತಿಳಿಸಿದೆ. ಜನರಿಗೆ ಬೇಕಾದ ಅಗತ್ಯವಸ್ತುಗಳನ್ನು ಮನೆ,ಮನೆಗೆ ವಿತರಿಸುವ ನಿರ್ಧಾರ ಲಂಕಾ ಸರ್ಕಾರ ಕೈಗೊಂಡಿದೆ. ಕರ್ಫ್ಯೂ ಪಾಸ್ ಇಲ್ಲದೆ ಹೊರ ಬಂದಲ್ಲಿ ಅವರನ್ನು ಬಂಧಿಸುವುದಾಗಿ ಲಂಕಾ ಪೊಲೀಸರು ತಿಳಿಸಿದ್ದಾರೆ. ಈವರೆಗೆ 7ಮಂದಿ ಬಂಧನಕ್ಕೊಳಗಾಗಿದ್ದು, 1,700ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.