ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾಗಿ 1994ರಿಂದ 2013ರವರೆಗೂ ಜಯಭೇರಿ ಬಾರಿಸುವ ಮೂಲಕ ಜಿಲ್ಲೆಯಲ್ಲಿ ಯಾರೂ ಮಾಡಿರದ ವಿಶೇಷ ಸಾಧನೆಯನ್ನು ಎಚ್. ಎಸ್. ಮಹದೇವಪ್ರಸಾದ್ ಮಾಡಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪತಿಯ ಜಯಭೇರಿಯನ್ನು ಮುಂದುವರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
1994ರಲ್ಲಿ ಪ್ರಥಮ ಬಾರಿಗೆ ಜಯಗಳಿಸಿದ ಎಚ್.ಎಸ್. ಮಹದೇವಪ್ರಸಾದ್, ನಂತರ 1999, 2004, 2008ರ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದು ಬಂದಿದ್ದರು. ಕಳೆದ 2013ರ ಚುನಾವಣೆಯಲ್ಲೂ ಜಯಭೇರಿ ಬಾರಿಸುವ ಮೂಲಕ ಸತತ ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು.
ಹೀಗಾಗಿಯೇ ಅವರನ್ನು ಸೋಲಿಲ್ಲದ ಸರದಾರ ಎಂದೇ ಕರೆಯಲಾಗುತ್ತಿತ್ತು. ವಿಶೇಷವೆಂದರೆ, ಮಹದೇವಪ್ರಸಾದ್ ನಾಲ್ಕು ಚುನಾವಣೆಗಳಲ್ಲೂ ನಾಲ್ಕು ಪಕ್ಷದಿಂದ ನಾಲ್ಕು ಬೇರೆ ಬೇರೆ ಚಿಹ್ನೆಗಳಿಂದ ಆರಿಸಿ ಬಂದಿದ್ದರು. 1994ರಲ್ಲಿ ಜನತಾದಳ (ಚಕ್ರದಗುರುತು), 1999ರಲ್ಲಿ ಸಂಯುಕ್ತಜನತಾದಳ(ಬಾಣದ ಗುರುತು) 2004ರಲ್ಲಿ ಜಾತ್ಯತೀತ ಜನತಾದಳ (ಟ್ಯಾಕ್ಟರ್ ಗುರುತು), 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ (ಹಸ್ತದಗುರುತು) ಗೆದ್ದಿದ್ದರು. ಪದೇಪದೆ ಪಕ್ಷ ಹಾಗೂ ಚಿಹ್ನೆ ಬದಲಾದರೂ ಕ್ಷೇತ್ರದ ಜನತೆ ಅವರ ವ್ಯಕ್ತಿತ್ವ ನೋಡಿಯೇ ಗೆಲ್ಲಿಸುತ್ತಿದ್ದರು.
ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಾಜ್ಯದ ಪ್ರಥಮ ಹಾಗೂ ಏಕೈಕ ಮಹಿಳಾ ಸ್ಪೀಕರ್ ಕೆ.ಎಸ್. ನಾಗರತ್ನಮ್ಮ ಅವರು 1957, 1962, 1967, 1972ರಲ್ಲಿ ಆರಿಸಿ ಬಂದಿದ್ದರು. 1978ರಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ಕೆ. ಶಿವರುದ್ರಪ್ಪ ಅವರಿಂದ 271 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ನಾಗರತ್ನಮ್ಮ ಅವರ ಸತತ ಗೆಲುವಿನ ದಾರಿಗೆ ಭಂಗವಾಯಿತು. ಮತ್ತೆ 1983, 1985,1989ರಲ್ಲಿ ನಾಗರತ್ನಮ್ಮ ಗೆದ್ದಿದ್ದರು. ನಾಗರತ್ನಮ್ಮ ವಿರುದಟಛಿ 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಮಹದೇವಪ್ರಸಾದ್ ಮತ್ತೆ 1989ರ ಚುನಾವಣೆಯಲ್ಲೂ ಅಮ್ಮನ ವಿರುದಟಛಿ (ನಾಗರತ್ನಮ್ಮ ಅವರನ್ನು ಕ್ಷೇತ್ರಾದ್ಯಂತ ಜನರು ಅಮ್ಮ ಎಂದೇ ಕರೆಯುತ್ತಿದ್ದರು)ಸೋಲನುಭವಿಸಿದ್ದರು. ಇದೇ ಅಮ್ಮನ ವಿರುದ್ಧ 1993ರಲ್ಲಿ ಮಹದೇವಪ್ರಸಾದ್ ಅವರ ತಂದೆ ಎಚ್.ಎನ್. ಶ್ರೀಕಂಠಶೆಟ್ಟಿ ಜನತಾಪಕ್ಷದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಅಮ್ಮ ಬದುಕಿರುವವರೆಗೂ ತಂದೆ-ಮಗ ಇಬ್ಬರೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
1993ರಲ್ಲಿ ನಾಗರತ್ನಮ್ಮ ನಿಧನಾನಂತರ, 1994ರಲ್ಲಿ ನಡೆದ ಚುನಾವಣೆಯ ನಂತರ ಮಹದೇವಪ್ರಸಾದ್ ಅವರ ಅದೃಷ್ಟವೇ ಬದಲಾಯಿತು. ಹಾಗೆಯೇ ಕ್ಷೇತ್ರದ ಚಿತ್ರಣವೂ ಬದಲಾಯಿತು. ಅದುವರೆಗೂ ಅಮ್ಮ ಎನ್ನುತ್ತಿದ್ದ ಕ್ಷೇತ್ರ ಅಪ್ಪನ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.7 ಬಾರಿ ಗೆದ್ದಿದ್ದರೂ ನಾಗರತ್ನಮ್ಮನವರ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಗಣನೀಯ ಪ್ರಮಾಣದಲ್ಲಿ ನಡೆದಿರಲಿಲ್ಲ. ಮಹದೇವಪ್ರಸಾದ್ ಐದು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ನಡೆದವು.
ಆದರೆ ಸತತವಾಗಿ ಐದು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಾಖಲೆ ಈಗ ಮಹದೇವಪ್ರಸಾದ್ ಹೆಸರಿಗೆ ಜಮೆಯಾಗಿದೆ. ಸತತ ಗೆಲುವನ್ನು ಹೊರತುಪಡಿಸಿದರೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ 7 ಬಾರಿ ಗೆದ್ದ ದಾಖಲೆ ನಾಗರತ್ನಮ್ಮನವರ ಹೆಸರಿನಲ್ಲೇ ಇದೆ. ಒಟ್ಟಾರೆ ಸ್ವಾತಂತ್ರ್ಯ ನಂತರದ ಚುನಾವಣೆ ಆರಂಭಿಸಿ ಇದುವರೆಗೂ, ಒಮ್ಮೆ ಎಚ್.ಕೆ. ಶಿವರುದ್ರಪ್ಪ ಅವರು ಗೆದ್ದಿದ್ದನ್ನು ಹೊರತುಪಡಿಸಿ, ನಾಗರತ್ನಮ್ಮ ಹಾಗೂ ಮಹದೇವಪ್ರಸಾದ್ ಅವರಿಬ್ಬರೇ ಆ ಕ್ಷೇತ್ರದ ಅಧಿಪತಿಗಳಾಗಿದ್ದರು.
– ಕೆ.ಎಸ್. ಬನಶಂಕರ ಆರಾಧ್ಯ