ಸೈಂಟ್ ಲೂಸಿಕಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದ ವೆಸ್ಟ್ ಇಂಡೀಸ್ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಗ್ರಾಸ್ ಐಲೆಟ್ ಡ್ಯಾರೆನ್ ಸಮ್ಮಿ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ನಾಯಕ ಜೇಸನ್ ಹೋಲ್ಡರ್ ನಿರ್ಧಾರವನ್ನು ಕೆರೀಬಿಯನ್ ಬೌಲರ್ ಗಳು ಉತ್ತಮವಾಗಿ ಸಮರ್ಥಿಸಿದರು. ಕಳೆದ ಪಂದ್ಯದಲ್ಲಿ ರನ್ ಹೊಳೆಯನ್ನೇ ಬಾರಿಸಿದ್ದ ಇಂಗ್ಲೆಂಡ್ ಆಟಗಾರರು, ಅಂತಿಮ ಪಂದ್ಯದಲ್ಲಿ ವಿಂಡೀಸ್ ಬೌಲಿಂಗ್ ಎದುರು ಪತರುಗಟ್ಟಿದರು.
ಕಳೆದ ಪಂದ್ಯದ ಶತಕವೀರರಾದ ಜೋಸ್ ಬಟ್ಲರ್ ಮತ್ತು ನಾಯಕ ಇಯಾನ್ ಮೋರ್ಗನ್ ಇಲ್ಲಿ ರನ್ ಕಲೆ ಹಾಕಲು ಹೆಣಗಾಡಿದರು. ಅಂತಿಮವಾಗಿ ಇಂಗ್ಲೆಂಡ್ 28.1 ಓವರ್ ನಲ್ಲಿ ಕೇವಲ 113 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ವಿಂಡೀಸ್ ನ ಯುವ ವೇಗಿ ಒಶಾನೆ ಥೋಮಸ್ ಕೇವಲ 21 ರನ್ ನೀಡಿ ಐದು ವಿಕೆಟ್ ಪಡೆದು ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು. ನಾಯಕ ಜೇಸನ್ ಹೋಲ್ಡರ್ ಮತ್ತು ಕಾರ್ಲೋಸ್ ಬ್ರಾತ್ ವೇಟ್ ತಲಾ ಎರಡು ವಿಕೆಟ್ ಪಡೆದರು.
ಗೇಲ್ ಅಬ್ಬರ: ಇಂಗ್ಲೆಂಡ್ ನೀಡಿದ 114 ರನ್ ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಿರಾಯಾಸವಾಗಿ ಜಯ ಸಾಧಿಸಿತು. ಸರಣಿಯುದ್ದಕ್ಕೂ ಅಬ್ಬರದ ಪ್ರದರ್ಶನ ನೀಡುತ್ತಿರುವ ಕ್ರಿಸ್ ಗೇಲ್ ಈ ಪಂದ್ಯದಲ್ಲೂ ಇಂಗ್ಲೆಂಡ್ ಬೌಲರ್ ಗಳ ಮೇಲೆ ಯಾವುದೇ ಕರುಣೆ ತೋರಲಿಲ್ಲ. ಕೇವಲ 27 ಎಸೆತ ಎದುರಿಸಿದ ಗೇಲ್ ಭರ್ಜರಿ 9 ಸಿಕ್ಸರ್ ನೆರವಿನಿಂದ 77 ರನ್ ಬಾರಿಸಿದರು. ಕೇವಲ 12.1 ಓವರ್ ಗಳಲ್ಲಿ ವಿಂಡೀಸ್ ಮೂರು ವಿಕೆಟ್ ಕಳೆದುಕೊಂಡು ವಿಜಯದ ಗುರಿ ಮುಟ್ಟಿತು.
ಈ ಜಯದೊಂದಿಗೆ ವಿಂಡೀಸ್ ಐದು ಪಂದ್ಯಗಳ ಏಕದಿನ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸಿ ಸರಣಿಯನ್ನು ಮುಗಿಸಿತು. ಸರಣಿಯ ಮೂರನೇ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಒಶಾನೆ ಥೋಮಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕ್ರಿಸ್ ಗೇಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.