Advertisement

ಗೌರಿ ಹತ್ಯೆ ಪ್ರಕರಣ: ಎಸ್‌ಐಟಿ ತನಿಖೆ ಮೇಲಿದೆ ನಂಬಿಕೆ

10:06 AM Oct 06, 2017 | Team Udayavani |

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವ ಪ್ರಶ್ನೆಯೇ ಇಲ್ಲ. 
ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಿದ್ದು ಆ ತಂಡದ ಕಾರ್ಯದಕ್ಷತೆಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಈ ತಂಡವೇ ಪ್ರಕರಣವನ್ನು ಭೇದಿಸುವ ವಿಶ್ವಾಸವಿದೆ ಎಂದು ಗೌರಿಲಂಕೇಶ್‌ ತಾಯಿ ಇಂದಿರಾ ಲಂಕೇಶ್‌ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೌರಿ ಅವರನ್ನು ನೆನೆದು ಭಾವೋದ್ವೇಗಕ್ಕೊಳಗಾದ ಅವರು, ಹಂತಕರ ಹೆಜ್ಜೆ ಜಾಡನ್ನು ಬೆನ್ನುಹತ್ತಿರುವ ವಿಶೇಷ ತನಿಖಾ ತಂಡ ಮತ್ತು ಸರ್ಕಾರ ನಮ್ಮೊಂದಿಗೆ ನಿಕಟ ಸಂಪರ್ಕದಲ್ಲಿದೆ.
ತನಿಖಾ ತಂಡ ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದ್ದೇವೆ. ಆರೋಪಿತರ ಸುಳಿವಿನ ಬಗ್ಗೆ ಸರ್ಕಾರವೇ ಮಾತನಾಡುತ್ತಿದ್ದು, ನಾನು ಮತ್ತೆ ಈ ಬಗ್ಗೆ ಮಾತನಾಡಿದರೆ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೌರಿ ಲಂಕೇಶ್‌ ಜೀವನ ಕುರಿತ ಸಿನಿಮಾ ನಿರ್ಮಿಸಲು ಕೆಲ ನಿರ್ದೇಶಕರು ಮುಂದೆ ಬಂದಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣ ತನಿಖೆಯ ಹಂತದಲ್ಲಿದೆ. ಹೀಗಾಗಿ ಚಿತ್ರ ನಿರ್ಮಾಣಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಶೀಘ್ರ ಪತ್ತೆ: ನಮ್ಮ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಗೌರಿ ಹತ್ಯೆಯ ವಿಚಾರವಾಗಿಯೇ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮತ್ತು ವಿಶೇಷ ತನಿಖಾ ತಂಡದ ಮುಖ್ಯಸ್ಥರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಆರೋಪಿಗಳು ಶೀಘ್ರದಲ್ಲಿಯೇ ಪತ್ತೆಯಾಗುವ ನಂಬಿಕೆಯಿದೆ ಎಂದರು.

ಕಾಲಾವಕಾಶ ಬೇಕು: ಗೌರಿಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌ ಮಾತನಾಡಿ, ಎಸ್‌ಐಟಿ ತಂಡ ನಿಷ್ಠುರವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಮಜಲುಗಳಲ್ಲಿ ತನಿಖೆಯ ಬೆನ್ನುಹತ್ತಿರುವ ಈ ತಂಡಕ್ಕೆ ಕಾಲಾವಕಾಶ ಬೇಕಿದೆ. ತನಿಖೆಗೆ ಮತ್ತಷ್ಟು ವೇಗವನ್ನು ನೀಡಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.

Advertisement

ರಾಜಕೀಯ ಬೇಡ: ಗೌರಿಲಂಕೇಶ್‌ ಸಹೋದರ ಇಂದ್ರಜಿತ್‌ ಲಂಕೇಶ್‌ ಮಾತನಾಡಿ, ಕೊಲೆಗಾರರನ್ನು ಹಿಡಿದರೆ ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಯಿತೆಂಬ ಸತ್ಯಾಂಶ ಹೊರ ಬರುತ್ತದೆ. ಆಗ ವಿಚಾರವಾದಿ ದಾಬೋಲ್ಕರ್‌, ಎಂ.ಎಂ ಕಲಬುರ್ಗಿ ಸೇರಿ ಹಲವು ಹತ್ಯೆಗಳ ಸುಳಿವು ಸಿಗಬಹುದು. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇದರಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next