ಮಂಗಳೂರು: ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸಂಜೆ ಲಾಲ್‌ಬಾಗ್ ಜಂಕ್ಷನ್ ಎದುರು ಮೊಂಬತ್ತಿ ಉರಿಸಿ ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಾಲೆಟ್ ಪಿಂಟೊ, ರಾಜ್ಯ ಉಪಾಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ ಹಾಗೂ ಮೇಯರ್ ಕವಿತಾ ಸನಿಲ್ ಅವರು ಮಾತನಾಡಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರಸ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಿಎಫ್‌ಐ ವತಿಯಿಂದ ಜ್ಯೋತಿ ಜಂಕ್ಷನ್‌ನಲ್ಲಿ, ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ, ಡಿವೈಎಫ್‌ಐ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು, ಪಿಎಫ್‌ಐ ವತಿಯಿಂದ ಪುರಭವನ ಎದುರಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮತ್ತು ಭಾರತೀಯ ವಿಚಾರ ವಾದಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆ ಮಾನವೀಯ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರ ಕಾರ್ಯದರ್ಶಿ ಮಣಾಲ ತಿಳಿಸಿದ್ದು, ಗೌರಿ ಲಂಕೇಶ್ ಮತ್ತು ಈ ಹಿಂದೆ ನಡೆದ ಹತ್ಯೆಗಳಿಗೆ ಕಾರಣರಾದವರನ್ನು ಕೂಡಲೇ ಬಂಧಿಸ ಬೇಕೆಂದು ಆಗ್ರಹಿಸಿದ್ದಾರೆ.
ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ವಾಸುದೇವ ಉಚ್ಚಿಲ, ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಇಸ್ಮಾಯಿಲ್ ಎನ್., ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿಯ ಪದಾಧಿಕಾರಿಗಳು ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ್ದಾರೆ.