Advertisement

ಬಂಗಲೆ ಖಾಲಿ ಮಾಡದವರಿಗೆ ಗೇಟ್‌ಪಾಸ್‌: ಸಂಪುಟ ಅಸ್ತು

02:06 PM May 18, 2017 | Team Udayavani |

ಹೊಸದಿಲ್ಲಿ: ಅವಧಿ ಮುಗಿದ ನಂತರವೂ ಸರಕಾರಿ ವಸತಿ, ಬಂಗಲೆಗಳಲ್ಲಿ ವಾಸಿಸುವ ಸಚಿವರು, ಸಂಸದರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ತ್ವರಿತವಾಗಿ ಮನೆ ಖಾಲಿ ಮಾಡಿಸುವ ಅಧಿಕಾರ ಇನ್ನು ಎಸ್ಟೇಟ್‌ ಅಧಿಕಾರಿಗೆ ಸಿಗಲಿದೆ.

Advertisement

ಅಧಿಕಾರಿಗೆ ಇಂತಹುದೊಂದು ಅಧಿಕಾರವನ್ನು ಕಲ್ಪಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ತರಲು ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಸಮ್ಮತಿಸಿದೆ. ಹುದ್ದೆಯ ಅವಧಿ ಮುಗಿದ ನಂತರವೂ ಹಲವು ಬಂಗಲೆಗಳನ್ನು ಬಿಟ್ಟು ಕೊಡದೇ ಅಲ್ಲೇ ವಾಸಿಸುತ್ತಿರುತ್ತಾರೆ. ಖಾಲಿ ಮಾಡಲು ತಿಳಿಸಿದರೆ, ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದನ್ನು ತಪ್ಪಿಸಲು ಕಾನೂನಿಗೇ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿದ್ದೇವೆ. ಅದರಂತೆ, ಬಂಗಲೆ ಬಿಟ್ಟುಕೊಡದವರನ್ನು ಖಾಲಿ ಮಾಡಿಸುವ ಅಧಿಕಾರ ಎಸ್ಟೇಟ್‌ ಅಧಿಕಾರಿಗೆ ನೀಡಲಾಗುತ್ತದೆ. ಜತೆಗೆ, ಹೆಚ್ಚುವರಿ ವಾಸದ ಅವಧಿಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ 6 ಸಾವಿರ ರೂ.ಗಳನ್ನು ನೀಡುವ (ಮೊದಲ ಮಗುವಿಗೆ ಮಾತ್ರ) ಕೇಂದ್ರ ಸರಕಾರದ ಪ್ರಸ್ತಾಪಕ್ಕೂ ಸಂಪುಟದ ಒಪ್ಪಿಗೆ ದೊರೆತಿದೆ. ಈ ಮೊತ್ತವನ್ನು ಕಂತುಗಳ ರೂಪದಲ್ಲಿ ನೀಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಕಾನೂನು ತಿದ್ದುಪಡಿಗೆ ಒಪ್ಪಿಗೆ
ಸಂರಕ್ಷಿತ ಸ್ಮಾರಕಗಳ ನಿಷೇಧಿತ ಪ್ರದೇಶಗಳಲ್ಲೂ ರಾಷ್ಟ್ರೀಯ ಹಿತಾಸಕ್ತಿಯ ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಕಾರ್ಯಕ್ಕೆ ಅವಕಾಶ ಕಲ್ಪಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ತರಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರಕಾರದ ಯೋಜನೆಗಳು ಸರಾಗವಾಗಿ ಸಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಗೋಯಲ್‌ ಹೇಳಿದ್ದಾರೆ. ಪ್ರಸ್ತುತ ನಿಯಮದಂತೆ, ಸ್ಮಾರಕಧಿಗಳ 100 ಮೀಟರ್‌ ವ್ಯಾಪ್ತಿಯಲ್ಲಿ ರಿಪೇರಿ ಮತ್ತು ನವೀಕರಣ ಕಾರ್ಯ ಹೊರತುಪಡಿಸಿ, ಬೇರಾವುದೇ ನಿರ್ಮಾಣ ಕಾರ್ಯಕ್ಕೆ ಅನುಧಿಮತಿ ಇಲ್ಲ. ಇದರಿಂದಾಗಿ, ಹಲವು ಯೋಜನೆಗಳು ನನೆಗುದಿಗೆ ಬೀಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಲಾಯಿತು ಎಂದಿದ್ದಾರೆ ಗೋಯಲ್‌.

Advertisement

Udayavani is now on Telegram. Click here to join our channel and stay updated with the latest news.

Next