Advertisement

ಉಕ್ಕಿ ಹರಿದ ಘಟಪ್ರಭೆ: ಮೂರನೇ ಬಾರಿ ಸೇತುವೆ ಜಲಾವೃತ

05:21 PM Aug 18, 2018 | Team Udayavani |

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಈ ಭಾಗದ ಜನ ನೆರೆ ಹಾವಳಿಗೆ ಸಿಲುಕಿದ್ದಾರೆ. ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ದುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಮತ್ತು ಹಿಡಕಲ್‌ ಜಲಾಶಯವು ಭರ್ತಿಯಾಗಿದ್ದರಿಂದ ಕಳೆದ ಎಂಟು ದಿನಗಳಿಂದ ಹಿಡಕಲ್‌ ಜಲಾಶಯದಿಂದಲೂ ನೀರನ್ನು ಹೊರಬಿಡುತ್ತಿರುವುದರಿಂದ ಕಳೆದ ಒಂದು ವಾರದಿಂದ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

Advertisement

ಆ.16ರಂದು ಹಿಡಕಲ್‌ ಜಲಾಶಯದಿಂದ ಜಿಎಲ್‌ಬಿಸಿ ಕಾಲುವೆಗೆ 2 ಸಾವಿರ ಕ್ಯೂಸೆಕ್‌, ಘಟಪ್ರಭಾ ನದಿಗೆ 25,978 ಕ್ಯೂಸೆಕ್‌ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದೆ ಎಂದು ಪಟ್ಟಣದ ಜಿಎಲ್‌ಬಿಸಿ ಎಇಇ ಶ್ರೀಧರ ನಂದಿಹಾಳ ತಿಳಿಸಿದ್ದಾರೆ. ಈ ಭಾಗದಲ್ಲಿ ಅಷ್ಟೊಂದು ಉತ್ತಮ ಮಳೆಯಾಗದಿದ್ದರು ಸಹ ಬೆಳಗಾವಿ ಗಡಿಭಾಗದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭೆಗೆ ಬರುವ ಪ್ರವಾಹದಿಂದ ನದಿಯ ಇಕ್ಕೆಲಗಳಲ್ಲಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಜೊತೆಗೆ ನೂರಾರು ಎಕರೆ ಕಬ್ಬಿನ ಗದ್ದೆಗಳು ಜಲಾವೃತವಾಗಿ ಬೆಳೆ ನಾಶವಾತ್ತಿದೆ.

ಸೇತುವೆಗಳು ಬಂದ್‌: ಘಟಪ್ರಭಾ ನದಿಯು ಉಕ್ಕಿ ಹರಿಯುತ್ತಿರುವುದರಿಂದ ಸಮೀಪದ ನಂದಗಾಂವ-ಅವರಾದಿ ಮತ್ತು ಅಕ್ಕಿಮರಡಿ-ಮಿರ್ಜಿ ಸೇತುವೆಗಳು ಸಂಪೂರ್ಣ ಜಲಾವೃತವಾಗಿ ಮಂಗಳವಾರದಿಂದಲೇ ಸಂಪರ್ಕ ಕಡಿತಗೊಂಡಿವೆ. ಸೇತುವೆಗಳು ಜಲಾವೃತವಾಗಿದ್ದರಿಂದ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ, ಯರಗುದ್ರಿ, ತಿಮ್ಮಾಪುರ, ಅರಳಿಮಟ್ಟಿ, ವೆಂಕಟಾಪುರ ಗ್ರಾಮಗಳು ವಿದ್ಯಾರ್ಥಿಗಳ ಶಿಕ್ಷಣ ಮತ್ತು ದಿನನಿತ್ಯ ವ್ಯಾಪಾರ ವಹಿವಾಟುಗಳಿಗೆ ಮಹಾಲಿಂಗಪುರವನ್ನೆ ಅವಲಂಬಿಸಿರುವದರಿಂದ ಈ ಎಲ್ಲಾ ಗ್ರಾಮಗಳ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಗಡಿಗ್ರಾಮ ಢವಳೇಶ್ವರ ಮತ್ತು ಬೆಳಗಾವಿ ಜಿಲ್ಲೆ ನೂತನ ಮೂಡಲಗಿ ತಾಲೂಕಿನ ಗಡಿಗ್ರಾಮ ಢವಳೇಶ್ವರ ಗ್ರಾಮಗಳ ನಡುವಿನ ಢವಳೇಶ್ವರ ಸೇತುವೆಯು ಬುಧವಾರ ಸಂಜೆಯಿಂದಲೇ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಇದರೊಂದಿಗೆ ಈ ಮೂರು ಸೇತುವೆಗಳು ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಜಲಾವೃತವಾಗಿವೆ.

ಘಟಪ್ರಭಾ ನದಿಯ ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಗ್ರಾಮಗಳ ಜನತೆ ನದಿ ಹತ್ತಿರ ಹೋಗಬಾರದು. ರೈತರು ಮೋಟಾರ್‌ ಅಳವಡಿಸಲು ಪ್ರಯತ್ನಿಸಬಾರದು ಎಂಬ ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಸೇತುವೆ ಮೇಲೆ ನೀರು ಕಡಿಮೆ ಇದೆ ಎಂದು ದಾಟುವ ದುಸ್ಸಾಹಸ ಮಾಡಬಾರದು. ಬುಧವಾರ ಸಂಜೆಯಿಂದ ಢವಳೇಶ್ವರ ಸೇತುವೆ ಹತ್ತಿರ ಪೊಲೀಸರ ನಿಯೋಜನೆ ಮಾಡಿ ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಲಾಗಿದೆ.
∙ ಡಿ.ಜಿ.ಮಹಾತ, ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next