Advertisement

Kadaba: ಸಿದ್ಧವಾಯಿತು ಪಾಲೋಳಿ ಸರ್ವಋತು ಸೇತುವೆ

01:08 PM Aug 26, 2024 | Team Udayavani |

ಕಡಬ: ಕುಮಾರಾಧಾರಾ ನದಿಗೆ ಪಾಲೋಳಿಯಲ್ಲಿ ನಿರ್ಮಾಣ ಗೊಂಡಿರುವ ಸರ್ವಋತು ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಜನರ ಬಹುಕಾಲದ ಕನಸು ನನಸಾಗಿದೆ.

Advertisement

ಕಡಬ ಹಾಗೂ ಎಡಮಂಗಲ ಗ್ರಾಮ ಗಳನ್ನು ಬೆಸೆಯುವ ಈ ಸೇತುವೆಯ ಕಾಮಗಾರಿ 2022 ನವೆಂಬರ್‌ನಲ್ಲಿ ಪ್ರಾರಂಭಗೊಂಡಿತ್ತು. ಕಳೆದ ವರ್ಷ ಮಳೆ ಗಾಲದ ಕಾರಣದಿಂದಾಗಿ ಕೆಲವು ತಿಂಗಳು ಕಾಮಗಾರಿ ನಿಲ್ಲಿಸಲಾಗಿತ್ತು. ಬಳಿಕ ಶೀಘ್ರ ವಾಗಿ ಕಾಮಗಾರಿ ನಡೆದು ಈಗ ಪೂರ್ಣಗೊಂಡಿದೆ. ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಪ್ರಮೋದ್‌ಕುಮಾರ್‌ ಕೆ.ಕೆ. ಉಸ್ತುವಾರಿಯಲ್ಲಿ ಸೇತುವೆಗೆ ಬಣ್ಣ ಬಳಿಯುವುದು, ಸೋಲಾರ್‌ ದೀಪಗಳ ಅಳವಡಿಕೆ ಕಾರ್ಯವೂ ಪೂರ್ಣಗೊಂಡಿದೆ.

ಗ್ರಾಮಸ್ಥರಿಂದಲೇ ತಾತ್ಕಾಲಿಕೆ ಸೇತುವೆ
ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಇಲ್ಲಿ ತಾತ್ಕಾಲಿಕ ನೆಲೆಯ ಸೇತುವೆ ನಿರ್ಮಾಣ ಮಾಡಿ ಬೇಸಗೆಯಲ್ಲಿ ವಾಹನ ಸಂಚರಿಸಲು ವ್ಯವಸ್ಥೆಮಾಡಿಕೊಂಡಿದ್ದರು. ಇಲ್ಲಿ ಬೇಸಗೆಯಲ್ಲಿ ಉಪಯೋಗಿಸಬಹುದಾದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಲ್ಪನೆಯನ್ನು ಕಂಡವರು ಸ್ಥಳೀಯ ಕುಮಾರಧಾರಾ ಯುವಕ ಮಂಡಲದ ಯುವಕರು. ಅದರ ಫಲವಾಗಿ 10 ವರ್ಷಗಳ ಹಿಂದೆ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಸುಮಾರು 120 ಮೀ. ಉದ್ದದ 10 ಮೀ. ಆಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಕೊಚ್ಚಿಹೋಗುವ ಕಚ್ಚಾ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್ನಿರ್ಮಾಣ ಮಾಡುತ್ತಲೇ ಬಂದಿದ್ದರು.

ವಾಹನ ಸಂಚಾರಕ್ಕೆ ತೆರೆಯಲು ಆಗ್ರಹ
ನೂತನ ಸೇತುವೆಯ ಮೇಲೆ ಸಂಚರಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಆದುದರಿಂದ ಸಂಬಂಧಪಟ್ಟವರು ಸೇತುವೆಯನ್ನು ಶೀಘ್ರ ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡಬೇಕೆನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ. .
-ಸಾಂತಪ್ಪ ಗೌಡ ಪಿಜಕಳ, ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿ ಮುಂದಾಳು.


175 ಮೀ. ಉದ್ದದ ಸೇತುವೆ
ಪರಿಸರದ ಜನರ ನಿರಂತರ ಹೋರಾಟದ ಫಲವಾಗಿ ಸರಕಾರವು ಲೋಕೋಪಯೋಗಿ ಇಲಾಖೆಯ ಮುಖಾಂತರ ಪಾಲೋಳಿ ಸೇತುವೆ ನಿರ್ಮಾಣಕ್ಕೆ 19.68 ಕೋಟಿ ರೂ.ಅನುದಾನ ಮಂಜೂರಾಗಿತ್ತು. 175 ಮೀ. ಉದ್ದದ ಈ ಸೇತುವೆ 12 ಮೀ. ಅಗಲದಲ್ಲಿ (ಒಂದು ಬದಿಯಲ್ಲಿ ಫೂಟ್‌ಪಾತ್‌ ಸೇರಿದಂತೆ) ನಿರ್ಮಾಣವಾಗಿದ್ದು, ಸೇತುವೆಯ ಎಡಮಂಗಲ ಭಾಗದಲ್ಲಿನ 675 ಮೀ. ಸಂಪರ್ಕದ ಕಚ್ಛಾ ರಸ್ತೆಯ ಸ್ವಲ್ಪ ಭಾಗವನ್ನು ಕಾಂಕ್ರೀಟ್‌ ಸಹಿತ ಅಭಿವೃದ್ಧಿಪಡಿಸಲಾಗಿದೆ. ಪಿಜಕಳ ಭಾಗದ ಸಂಪರ್ಕ ರಸ್ತೆ (100 ಮೀ.) ಯನ್ನು ಕಾಂಕ್ರೀಟ್‌ ಹಾಸಿ ಅಭಿವೃದ್ಧಿಪಡಿಸುವ ಕೆಲಸ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.