Advertisement

Kundapura: ಹೆಬ್ಬಾಡಿ ಹೊಳೆಗೆ ಸೇತುವೆ ಇನ್ನೂ ಮರೀಚಿಕೆ

05:33 PM Aug 25, 2024 | Team Udayavani |

ಕುಂದಾಪುರ: ಕುಳ್ಳುಂಜೆ ಗ್ರಾಮದ ಹೆಬ್ಟಾಡಿ ಹೊಳೆಗೆ ಹಾಲಿಬಚ್ಚಲು ಬಳಿ ಸೇತುವೆ ಬೇಕು ಅನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿನ ಜನ ಅನೇಕ ವರ್ಷಗಳಿಂದಲೂ ಈ ಬಗ್ಗೆ ಬೇಡಿಕೆ ಇಡುತ್ತಿದ್ದರೂ, ಆಳುವ ವರ್ಗ ಮಾತ್ರ ಇನ್ನೂ ಗಾಢ ನಿದ್ದೆಯಲ್ಲಿದ್ದಂತಿದೆ. ಇಲ್ಲಿ ಸೇತುವೆಯಾದರೆ ಉಳ್ಳೂರು 74 ಹಾಗೂ ಶಂಕರನಾರಾಯಣ ಗ್ರಾಮವನ್ನು ಸಹ ಹತ್ತಿರದಿಂದ ಬೆಸೆಯಲಿದೆ.

Advertisement

ಮಳೆಗಾಲ ಬಂದರೆ ಸಾಕು ಹೆಬ್ಟಾಡಿ ಭಾಗದ ಜನರಿಗೆ ಭಯ ಆವರಿಸುತ್ತದೆ. ಹೊಳೆ ದಾಟಲು ಇರುವಂತಹ ಕಾಲು ಸಂಕವೂ ಸಹ ನೆರೆ ಬಂದಾಗೆಲ್ಲ ಮುಳುಗುತ್ತದೆ. ಈ ಬಗ್ಗೆ ಪ್ರತಿ ಬಾರಿಯೂ ಹೊಸ ಶಾಸಕರಿಗೆ ಮನವಿ ಕೊಡುತ್ತಿದ್ದರೂ, ಸೇತುವೆ ಬೇಡಿಕೆ ಮಾತ್ರ ಈವರೆಗೆ ಈಡೇರಿಲ್ಲ.

ಸುದಿನ ನಿರಂತರ ವರದಿ ಹೆಬ್ಟಾಡಿ ಹೊಳೆಗೆ ಸೇತುವೆ ಬೇಡಿಕೆ ಬಗ್ಗೆ “ಉದಯವಾಣಿ ಸುದಿನ’ವು ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆಯುವ ಪ್ರಯತ್ನ ಮಾಡುತ್ತಿದೆ.

ಸೇತುವೆ ಯಾಕೆ ಅಗತ್ಯ?
ಉಳ್ಳೂರು 74 ಗ್ರಾಮದ ದಕ್ಷಿಣ ಭಾಗದ ಬಂಟಕೋಡು, ನಿಡ್‌ ಗೋಡು, ಜಡ್ಡು, ಹೆದ್ದಿನಬೇರು, ಬಣಸಾಲೆ, ಬಂಟ್ರಗದ್ದೆ, ಮಾಸ್ರಳ್ಳಿ, ಕೊಕ್ಕೋಡು, ಹುಂಬಾಡಿ. ಕಳ್ಗಿ, ತುಳಿನ ತೋಟ, ಹಾಲಿಬಚ್ಚಲು, ಮೊದಲಾದ ಪ್ರದೇಶಗಳ ಜನರು ಈಗ ಸುತ್ತು ಬಳಸಿ ಶಂಕರನಾರಾಯಣದ ಕಾಲೇಜು, ಆಸ್ಪತ್ರೆ, ಸಬ್‌ ರಿಜಿಸ್ಟರ್‌ ಕಚೇರಿ ಕೆಲಸಗಳಿಗೆ ಹೋಗಿ ಬರುತ್ತಾರೆ. ಹಾಲಿ ಬಚ್ಚಲು – ಹೆಬ್ಟಾಡಿಯಲ್ಲಿ ಸೇತುವೆಯಾದರೆ ಹತ್ತಿರದಿಂದ ಸಂಪರ್ಕ ಬೆಸೆಯಲಿದೆ.
ಹೆಬ್ಟಾಡಿ ನದಿಯ ಒಂದು ಭಾಗ ಉಳ್ಳೂರು 74 ಗ್ರಾಮದ ಲ್ಲಿದ್ದರೆ, ಇನ್ನೊಂದು ಭಾಗ ಕುಳ್ಳುಂಜೆ ಗ್ರಾಮದಲ್ಲಿದೆ. 2 ಕಡೆ ಪಂಚಾಯತ್‌ ರಸ್ತೆಯಿದೆ. ಸ್ವಲ್ಪ ಸ್ಥಳ ಮಾತ್ರ ರಸ್ತೆ ಆಗಲು ಬಾಕಿಯಿದೆ.
ಸಿದ್ದಾಪುರ, ಉಳ್ಳೂರು, ಕುಳ್ಳುಂಜೆ, ಶಂಕರನಾರಾಯಣಗಳ ನಡುವೆಯೂ ಸಂಪರ್ಕ ಸಾಧ್ಯವಾಗಲಿದೆ.

ನೂರಾರು ಜನರಿಗೆ ಪ್ರಯೋಜನ
ಹಾಲಿಬಚ್ಚಲು – ಹೆಬ್ಟಾಡಿ ಕಿರು ಸೇತುವೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಈ ಹಿಂದೆಯೇ ಸಲ್ಲಿಸಲಾಗಿದೆ. ಆದರೆ ಸರಕಾರದ ಮಟ್ಟದಿಂದ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕಾಲು ಸಂಕ ಬದಲು ಸೇತುವೆಯಾದರೆ 7 ಕಿ.ಮೀ. ದೂರದ ಶಂಕರನಾರಾಯಣ ಕೇವಲ 3 ಕಿ.ಮೀ. ಹತ್ತಿರವಾಗಲಿದೆ. ಸೇತುವೆಯಾದರೆ ಕಾಲೇಜು, ಆಸ್ಪತ್ರೆ, ಪೊಲೀಸ್‌ ಠಾಣೆ, ಪಶು ಆಸ್ಪತ್ರೆ, ಉಪನೋಂದಣಾಧಿಕಾರಿಗಳ ಕಚೇರಿ ಹೀಗೆ ಎಲ್ಲದಕ್ಕೂ ಹತ್ತಿರವಾಗಲಿದೆ. ನೂರಾರು ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. – ಚಿಟ್ಟೆ ರಾಜಗೋಪಾಲ ಹೆಗ್ಡೆ, ಅಧ್ಯಕ್ಷ, ಪಶ್ಚಿಮವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ

Advertisement

ಅನುದಾನ ಬಂದಲ್ಲಿ ವ್ಯವಸ್ಥೆ
ಹೆಬ್ಟಾಡಿ ಸೇತುವೆ ಬೇಡಿಕೆ ಗಮನದಲ್ಲಿದ್ದು, ಊರವರು ಸಹ ಮನವಿ ಮಾಡಿಕೊಂಡಿದ್ದಾರೆ. ಅದು ದೊಡ್ಡ ಮಟ್ಟದ ಅನುದಾನದ ಅವಶ್ಯಕತೆ ಇದೆ. ಈಗ ಸರಕಾರದಿಂದಲೂ ಯಾವುದೇ ಅನುದಾನ ಸಿಗದಿರುವುದರಿಂದ ಭರವಸೆ ನೀಡುವುದು ಕಷ್ಟ. ಆದರೆ ಯಾವುದೇ ಅನುದಾನ ಸಿಕ್ಕರೂ ಅಲ್ಲಿಗೆ ನೀಡಲಾಗುವುದು.
– ಗುರುರಾಜ್‌ ಗಂಟಿಹೊಳೆ, ಬೈಂದೂರು ಶಾಸಕರು

ಅಪಾಯಕಾರಿ ಕಾಲು ಸಂಕ
ಗ್ರಾಮಸ್ಥರೇ ವಿದ್ಯುತ್‌ ಕಂಬ ಹಾಕಿ ಮಾಡಿದ ತಾತ್ಕಾಲಿಕ ಸೇತುವೆಯೇ ಈಗ ಹೊಳೆ ದಾಟಲು ಆಧಾರವಾಗಿದೆ. ಅದು ಕೂಡ ನೆರೆ ಬಂದಾಗ ಮುಳುಗುತ್ತದೆ, ನೀರು ಇಳಿದರೆ ಸೇತುವೆ ಕಾಣುತ್ತದೆ. ಸರಿಯಾಗಿ ಹಿಡಿಕೆಯು ಇಲ್ಲ. ಇರುವಂತಹ ಹಿಡಿಕೆಯು ಮಳೆಗೆ ಜಾರುತ್ತದೆ. ಕೊಂಚ ಎಚ್ಚರ ತಪ್ಪಿದರೂ, ಅಪಾಯವಂತೂ ತಪ್ಪಿದ್ದಲ್ಲ.

Advertisement

Udayavani is now on Telegram. Click here to join our channel and stay updated with the latest news.

Next