Advertisement
ಪಾಟರಿ ಟೌನ್, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಕನಕಪುರ ರಸ್ತೆ, ಯಲಚೇನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮೆಟ್ರೋ ಮತ್ತು ಅನಿಲ ಕೊಳವೆ ಮಾರ್ಗಗಳು ಸಂಧಿಸುತ್ತವೆ. ಇಲ್ಲೆಲ್ಲಾ ಎರಡರಲ್ಲೊಂದು ಮಾರ್ಗ ಬದಲಾವಣೆ ಮಾಡಬೇಕಾಗುತ್ತದೆ. ಇದರಲ್ಲಿ ಕೆಲವೆಡೆ ಅಧಿಕ ಒತ್ತಡದ ಅನಿಲ ಪೂರೈಕೆ ಆಗುವ ಸ್ಟೀಲ್ ಪೈಪ್ ಲೈನ್‌ಗಳು ಕೂಡ ಹಾದುಹೋಗಿವೆ. ಅದೇ ರೀತಿ, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದರಿಂದ ಮೆಟ್ರೋ ಮಾರ್ಗ ವಿನ್ಯಾಸ ಬದಲಾವಣೆಯೂ ಕಷ್ಟಕರವಾಗಿದೆ. ಇದರಿಂದ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದೆ.
Related Articles
Advertisement
ಮೆಟ್ರೋ ವಿನ್ಯಾಸದಲ್ಲಿ ಒಂದೆರಡು ಮೀಟರ್ ವ್ಯತ್ಯಾಸವಾದರೂ ಒಂದು ಮನೆ ಅಥವಾ ಯಾರದೋ ನಿವೇಶನ ಹೋಗುತ್ತದೆ. ಹೆಚ್ಚು ಜನರಿಗೆ ಇದರ ಬಿಸಿ ತಟ್ಟುತ್ತದೆ. ಹಾಗಾಗಿ, ಕೊಳವೆ ಮಾರ್ಗ ಸ್ಥಳಾಂತರವೇ ಸೂಕ್ತ ಎಂದು ಬಿಎಂಆರ್‌ಸಿಎಲ್ ವಾದ ಮುಂದಿಟ್ಟಿದೆ. ಇದಕ್ಕೆ ಪ್ರತಿಯಾಗಿ “ಮೊದಲೇ ಬಿಎಂಆರ್‌ಸಿಎಲ್ಯಿಂದ ನಿರಾಕ್ಷೇಪಣೆ ಪತ್ರ ಪಡೆಯಲಾಗಿದೆ. ಹೀಗಿರುವಾಗ, ಸ್ಥಳಾಂತರ ಮಾಡಿ ಎನ್ನುವುದು ಎಷ್ಟು ಸರಿ’ ಎಂದು ಗೇಲ್ ಅಧಿಕಾರಿಗಳು ಪ್ರಶ್ನಿಸಿದರೆ, ಸ್ಥಳಾಂತರಕ್ಕೆ ಸಮಸ್ಯೆ ಏನು?
ನೀರು ಅಥವಾ ವಿದ್ಯುತ್ ಮಾರ್ಗವನ್ನು ಕೆಲಹೊತ್ತು ಸ್ಥಗಿತಗೊಳಿಸಿ, ಸ್ಥಳಾಂತರಿಸುವುದು ಸುಲಭ. ಆದರೆ, ಗ್ಯಾಸ್ ಪೈಪ್‌ಲೈನ್‌ನಲ್ಲಿ ದಿನದ 24 ಗಂಟೆಗೆ ನಿರಂತರ ಅನಿಲ ಸರಬರಾಜು ಆಗುತ್ತಿರುತ್ತದೆ. ಹೋಟೆಲ್, ಕೈಗಾರಿಕೆಯಂತಹ ವಾಣಿಜ್ಯ ಗ್ರಾಹಕರು ಇದ್ದರೆ, ಸ್ಥಳಾಂತರಗಳಿಂದ ತುಂಬಾ ಸಮಸ್ಯೆ ಆಗುತ್ತದೆ.
ಇನ್ನು ಗ್ಯಾಸ್ ಪೈಪ್‌ಲೈನ್‌ನಲ್ಲಿ ಎರಡು ಪ್ರಕಾರಗಳಿವೆ. ಒಂದು ಎಂಡಿಪಿ ಮತ್ತೂಂದು ಸ್ಟೀಲ್. ಮೊದಲ ಪ್ರಕಾರದ ಕೊಳವೆಯಲ್ಲಿ ಅನಿಲದ ಒತ್ತಡ ಅಬ್ಬಬ್ಟಾ ಎಂದರೆ 3ರಿಂದ 4 ಕೆಜಿ ಇರುತ್ತದೆ. ಪೈಪ್‌ನ ಸುತ್ತಳತೆ 150ರಿಂದ 200 ಎಂಎಂ. ಸ್ಟೀಲ್ ಪೈಪ್‌ಲೈನ್‌ನಲ್ಲಿ ಈ ಒತ್ತಡ 19ರಿಂದ 20 ಕೆಜಿ ಇರುತ್ತದೆ. ಇದರ ಸುತ್ತಳತೆ 300ರಿಂದ 400 ಎಂಎಂ.
ಗ್ರಾಹಕರು ಕೂಡ ಹೆಚ್ಚು ಇರುವುದರಿಂದ ಸಹಜವಾಗಿಯೇ ವ್ಯತ್ಯಯದ ಬಿಸಿ ಹೆಚ್ಚು ತಟ್ಟುತ್ತದೆ. ಏಳರಿಂದ ಎಂಟು ಕಿ.ಮೀ.ವರೆಗೆ ಅನಿಲ ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ. ಈ ಸ್ಥಳಾಂತರಕ್ಕೆ ಕನಿಷ್ಠ ಮೂರು ದಿನಗಳು ಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಗೇಲ್‌ನ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ವೈಟ್‌ಫೀಲ್ಡ್‌ನಲ್ಲಿ ಇದೇ ಮೆಟ್ರೋ ಮಾರ್ಗಕ್ಕಾಗಿ ಸ್ಥಳಾಂತರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದೂ ಹೇಳಿದ ಅವರು, ಅಷ್ಟಕ್ಕೂ ಪಾಟರಿಟೌನ್ ಬಳಿ ಎಂಡಿಪಿ ಪೈಪ್‌ಲೈನ್ ಹಾದುಹೋಗಿರುವುದರಿಂದ ಸ್ಥಳಾಂತರಕ್ಕೆ ಪ್ರಯತ್ನಿಸಬಹುದು ಎಂದೂ ಗೇಲ್ ಅಧಿಕಾರಿಗಳು ತಿಳಿಸುತ್ತಾರೆ.
ಮೆಟ್ರೋದ ಬೆನ್ನಲ್ಲೇ ಭವಿಷ್ಯದ ಮೂಲಸೌಕರ್ಯ ಯೋಜನೆಗಳಿಗೂ ಅನಿಲ ಕೊಳವೆಮಾರ್ಗ ಅಡ್ಡಿ ಆಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಮೆಟ್ರೋಗೆ ಈಗ ಅಡ್ಡಿ ಆಗಿರುವ ಕೊಳವೆ ಮಾರ್ಗ ಒಂದು ಸ್ಯಾಂಪಲ್ ಅಷ್ಟೇ. ಭವಿಷ್ಯದಲ್ಲಿ ಅನೇಕ ಮೂಲಸೌಕರ್ಯ ಯೋಜನೆಗಳು ನಗರದ ಭೂಗರ್ಭದಿಂದ ಹಾದುಹೋಗಲಿವೆ.
ಆಗಲೂ ಇದೇ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಬಿಟಿಎಂ ಲೇಔಟ್‌ನಲ್ಲಿ ಬಿಬಿಎಂಪಿ ಮತ್ತು ಗೇಲ್ ನಡುವೆ ಉಂಟಾದ ತಿಕ್ಕಾಟವನ್ನೂ ಅವರು ಉಲ್ಲೇಖೀಸುತ್ತಾರೆ. ಆದರೆ, ಗೇಲ್ ಅಧಿಕಾರಿಗಳು ಇದನ್ನು ಅಲ್ಲಗಳೆಯುತ್ತಾರೆ. “ನಾವು ಈಗಾಗಲೇ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದೇವೆ.
ಎಲ್ಲೆಲ್ಲಿ ಅನಿಲ ಕೊಳವೆ ಮಾರ್ಗ ಹಾದುಹೋಗಿದೆಯೋ ಅಲ್ಲೆಲ್ಲಾ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ತಮಗೆ ಮಾಹಿತಿ ನೀಡಬೇಕು. ನಂತರ ಅದನ್ನು ಜಂಟಿಯಾಗಿ ಸಮೀಕ್ಷೆ ನಡೆಸಲಾಗುವುದು. ನಕ್ಷೆಗಳನ್ನು ಪರಸ್ಪರ ವಿನಿಯೋಗ ಮಾಡಿಕೊಳ್ಳಲಾಗುವುದು. ಆಮೇಲೆ ಒಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಮೆಟ್ರೋ-ಅನಿಲ ಕೊಳವೆ ಸಂಧಿಸುವುದು ಎಲ್ಲಿ?-ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಎತ್ತರಿಸಿದ ಮಾರ್ಗದ ಸಿಲ್ಕ್ಬೋರ್ಡ್ ಬಳಿ.
-ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಬರುವ ಪಾಟರಿ ಟೌನ್ ಸುರಂಗ ನಿಲ್ದಾಣ.
-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ (ಗ್ಯಾಸ್‌ಲೈನ್ ಸ್ಥಳಾಂತರಗೊಂಡಿದೆ).
-ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ.
-ಅಂಜನಾಪುರ ರಸ್ತೆ ಮೆಟ್ರೋ ನಿಲ್ದಾಣದ ಬಳಿ. ಕೆಲವೆಡೆ ಅನಿಲ ಕೊಳವೆ ಮಾರ್ಗ ಮತ್ತು ಮೆಟ್ರೋ ಮಾರ್ಗಗಳು ಸಂಧಿಸುತ್ತವೆ. ಇದಕ್ಕೆ ನಿಗಮ ಮತ್ತು ಗೇಲ್ ಒಟ್ಟಾಗಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿವೆ.
-ಅಜಯ್ ಸೇಠ್, ಬಿಎಂಆರ್‌ಸಿಎಲ್ಎಲ್ ವ್ಯವಸ್ಥಾಪಕ ನಿರ್ದೇಶಕ * ವಿಜಯಕುಮಾರ್ ಚಂದರಗಿ