ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬಾಲಕ ಉಸಿರುಗಟ್ಟಿ ಮೃತಪಟ್ಟು, ಆತನ ಸಹೋದರ ಪ್ರಜ್ಞೆತಪ್ಪಿದ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ದುರ್ಘಟನೆಯಲ್ಲಿ ಸಮೀರ್ (13) ಮೃತಪಟ್ಟು, ಆತನ ತಮ್ಮ ಶಂಶೀರ್ (5) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾದ್ ಏಜೆನ್ಸಿ ಸಿಬ್ಬಂದಿ ಸಮರ್ಪಕವಾಗಿ ಅನಿಲ ತುಂಬಿಸಿಕೊಡದ ಕಾರಣ ಅನಿಲ ಸೋರಿಕೆಯಾಗಿ ದುರ್ಘಟನೆ ಸಂಭವಿಸಿದೆ ಎಂದು ಸಮೀರ್ ತಾಯಿ ಕಲಾವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಖಾಸಗಿ ಏಜೆನ್ಸಿ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ (ಐಪಿಸಿ 304ಎ) ಅನ್ವಯ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮಲಗಿದ್ದಲೇ ಮೃತನಾದ ಅಣ್ಣ: ಜಗದೀಶ್‌ನಗರದ ಚರ್ಚ್ ಸಮೀಪದ ಚಿಕ್ಕ ಕೊಠಡಿಯಲ್ಲಿ ಕಲಾವತಿ, ಇಬ್ಬರು ಮಕ್ಕಳ ಜತೆ ವಾಸಿಸುತ್ತಿದ್ದರು. ಕಲಾವತಿ ಮನೆ ಕೆಲಸ ಮಾಡುತ್ತಿದ್ದು ಶನಿವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಎದ್ದು ಬಾಗಿಲು ಹಾಕಿಕೊಳ್ಳುವಂತೆ ಮಕ್ಕಳಿಗೆ ಸೂಚಿಸಿ ತೆರಳಿದ್ದಾರೆ. ಮಕ್ಕಳು ಬಾಗಿಲು ಹಾಕಿಕೊಂಡು ಮಲಗಿದ್ದಾರೆ. ಎಂಟು ಗಂಟೆ ಸುಮಾರಿಗೆ ಕಲಾವತಿ ವಾಪಸ್ ಬಂದು ನೋಡಿದಾಗ ಗ್ಯಾಸ್ ವಾಸನೆ ಬಂದಿದೆ.
ಆತಂಕಗೊಂಡು ಅಕ್ಕಪಕ್ಕದ ನಿವಾಸಿಗಳನ್ನು ಕರೆದು ಬಾಗಿಲು ಒಡೆದು ನೋಡಿದಾಗ, ಮಕ್ಕಳಿಬ್ಬರು ಮಲಗಿದ್ದ ಬೆಡ್ ಮೇಲೆಯೇ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರನ್ನೂ ಪರಿಶೀಲಿಸಿದ ವೈದ್ಯರು, ಸಮೀರ್ ಮೃತಪಟ್ಟಿರುವುದಾಗಿ ತಿಳಿಸಿದ್ದರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಶಂಶೀರ್‌ನನ್ನು ಸೇಂಟ್‌ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಠಡಿಗೆ ಕಿಟಕಿಯೇ ಇಲ್ಲ: ನೇಪಾಳ ಮೂಲದ ಕಲಾವತಿ ಅವರ ಪತಿ ಮೃತಪಟ್ಟಿದ್ದು, ಮೂರ್‍ನಾಲ್ಕು ವರ್ಷಗಳಿಂದ ತನ್ನ ಇಬ್ಬರು ಮಕ್ಕಳ ಜತೆ ಬಾಡಿಗೆ ಕೊಠಡಿಗೆಯಲ್ಲಿ ವಾಸಿಸುತ್ತಿದ್ದರು. ಆದರೆ, ಆ ಕೊಠಡಿಗೆ ಕಿಟಕಿಯೇ ಇಲ್ಲ. ಬಾಗಿಲು ಮುಚ್ಚಿದರೆ ಬೆಳಕೂ ಬರುವುದಿಲ್ಲ. ಶಂಶೀರ್ ಒಂದನೇ ತರಗತಿ ಓದುತ್ತಿದ್ದು, ಸಮೀರ್ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಕಲಾವತಿ ವಾಸವಿದ್ದ ಕೊಠಡಿಗೆ ಕಿಟಕಿ ಇಲ್ಲ. ಹೀಗಾಗಿ ಸೋರಿಕೆಯಾದ ಅನಿಲ ಒಳಗೆ ದಟ್ಟವಾಗಿ ಆವರಿಸಿದ್ದು, ಸಮೀರ್ ಉಸುರುಗಟ್ಟಿ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾತ್ರಿಯಷ್ಟೇ ಗ್ಯಾಸ್ ತುಂಬಿಸಿದ್ದರು: ಕಲಾವತಿ, ಶನಿವಾರ ರಾತ್ರಿ 7.30ರ ಸುಮಾರಿಗೆ ಖಾಸಗಿ ಏಜೆನ್ಸಿಯರಿಂದ ಸಿಲಿಂಡರ್‌ಗೆ ಅನಿಲ ತುಂಬಿಸಿಕೊಂಡು ಬಂದಿದ್ದರು. ಮುಂಜಾನೆ ಹೊರಡುವಾಗ ಸಿಲಿಂಡರ್ ಆಫ್ ಮಾಡಿ ತೆರಳಿದ್ದೆ ಎಂದು ಹೇಳಿದ್ದಾರೆ. ಜತೆಗೆ, ಅನಿಲ ತುಂಬಿಸಿಕೊಡುವವರು ಸರಿಯಾಗಿ ತುಂಬಿಸಿಲ್ಲ.
ಇದರಿಂದ ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ. ದುರಂತ ನಡೆದ ಅಕ್ಕಪಕ್ಕದ ಮನೆಗಳ ನಿವಾಸಿಗಳು ಅನಿಲ ಸೋರಿಕೆ ವಾಸನೆ ನಮಗೆ ಬಂರಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.