ಒಬ್ಬ ಶಿವ, ಮಾತು ಕಮ್ಮಿ ಕೆಲಸ ಜಾಸ್ತಿ, ಇನ್ನೊಬ್ಬ ಹರಿ, ಮಾತು, ಕೆಲಸ ಎರಡೂ ಕಮ್ಮಿ.. ಆದರೆ ಹವಾ ಮೆಂಟೇನ್ ಮಾಡೋದು ಮಾತ್ರ ಚೆನ್ನಾಗಿ ಗೊತ್ತು… ಈ ಥರದ ಎರಡು ವಿರುದ್ಧ ದಿಕ್ಕುಗಳು ಒಂದಾಗುತ್ತವೆ. ಒಂದಾದ ನಂತರದ ದಾರಿಯಲ್ಲಿ ನೆತ್ತರ ಹೆಜ್ಜೆ… ಬೇಡ ಬೇಡವೆಂದರೂ ಹಾದಿ-ಬೀದಿಯಲ್ಲಿ ಹೆಣವಾಗುವ ಮಂದಿ… ಈ ವಾರ ತೆರೆಕಂಡಿರುವ “ಗರುಡ ಗಮನ ವೃಷಭ ವಾಹನ’ ಚಿತ್ರ ಅಂಡರ್‌ವರ್ಲ್ಡ್ ಹಿನ್ನೆಲೆ ಯಲ್ಲಿ ಸಾಗುವ ಸಿನಿಮಾವಾಗಿ ಒಂದು ಹೊಸ ಅನುಭವ ನೀಡುತ್ತದೆ. ಆ ಮಟ್ಟಿಗೆ “ಗರುಡ ಗಮನ ವೃಷಭ ವಾಹನ’ ಒಂದು ಹೊಸ ಪ್ರಯತ್ನ ಎಂದು ಹೇಳಬಹುದು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಅಂಡರ್‌ವರ್ಲ್ಡ್ ಕಥೆಗಳು ಬಂದಿವೆ. ಆದರೆ, “ಗರುಡ..’ ಮಾತ್ರ ತನ್ನ ನಿರೂಪಣಾ ಶೈಲಿಯಿಂದ ಭಿನ್ನವಾಗಿ ನಿಲ್ಲುತ್ತದೆ. ಒಬ್ಬ ನಿರ್ದೇಶಕ ತನ್ನ ಸಿನಿಮಾದಿಂದ ಸಿನಿಮಾಕ್ಕೆ ಯಾವ ರೀತಿ ಬದಲಾಗಬಹುದು ಎಂಬುದನ್ನು ರಾಜ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. “ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ತುಂಬಾ ಮೃದುವಾದ ಪಾತ್ರ ಹಾಗೂ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದ ರಾಜ್ ಶೆಟ್ಟಿ, ತಮ್ಮ ಎರಡನೇ ಸಿನಿಮಾದಲ್ಲಿ ಅದಕ್ಕೆ ತದ್ವಿರುದ್ಧವಾದ ಕಥೆಯನ್ನು ಆಯ್ಕೆ ಮಾಡಿ, ಅದನ್ನು ಅಷ್ಟೇ ಸಮರ್ಥವಾಗಿ ನಿಭಾಹಿಸಿದ್ದಾರೆ.
“ಗರುಡ..’ ಸಿನಿಮಾದ ಇಡೀ ಕಥೆ ನಡೆಯೋದು ಮಂಗಳೂರಿನಲ್ಲಿ. ಮಂಗಳೂರು ಪರಿಸರ, ತುಳು ಮಿಶ್ರಿತ ಮಂಗಳೂರು ಕನ್ನಡ, ಅಲ್ಲಿನ ಸೊಗಡನ್ನು ಈ ಸಿನಿಮಾದಲ್ಲಿ ನೋಡಬಹುದು. ಅಲ್ಲಿನ ಅಂಡರ್‌ವರ್ಲ್ಡ್, ಅದರ ಹಿನ್ನೆಲೆ, ನಂತರ ಅದು ತಲುಪುವ ಜಾಗ…ಎಲ್ಲ ವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ನೈಜತೆಗೆ ಇಲ್ಲಿ ಹೆಚ್ಚಿನ ಒತ್ತು ಕೊಡಲಾಗಿದೆ. ಇಲ್ಲಿ ಕೊಲೆಗಳು, ಗಲಾಟೆ, ಸ್ಕೆಚ್ ಎಲ್ಲವೂ ಇದೆ. ಅವೆಲ್ಲವನ್ನು ಹಸಿಹಸಿಯಾಗಿಯೇ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ನಿಮ್ಮ ಪಕ್ಕದ ಊರಿನಲ್ಲೊಂದು ಗಲಾಟೆಯಾದರೆ, ಆ ಗಲಾಟೆ ತೀವ್ರತೆಗೆ ಹೋದರೆ ಆ ಪರಿಸರ ಜನರ ಭಾವನೆ ಯಾವ ಥರ ಇರಬಹುದು, ಅಂಥದ್ದೇ ಫೀಲ್ “ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡುವಾಗಲೂ ನಿಮಗೆ ಸಿಗುತ್ತದೆ. ಮಂಗಳಾ ದೇವಿ, ಹುಲಿವೇಷ, ಹೂವಿನ ಮಾರ್ಕೇಟ್, ಕದ್ರಿ…. ಮಂಗಳೂರಿನ ಸಾಕಷ್ಟು ಪರಿಸರಗಳು ಈ ಕಥೆಯಲ್ಲಿ ಒಂದಾಗಿಬಿಟ್ಟಿವೆ. ಇಡೀ ಸಿನಿಮಾದಲ್ಲಿ ನಿರ್ದೇಶಕರು ಒಂದು ಸಣ್ಣ ಸಂದೇಶವನ್ನು ಕೊಟ್ಟಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಿದ ರೀತಿ ಇಷ್ಟವಾಗುತ್ತದೆ. ಈ ಚಿತ್ರದ ಕಥೆ ಏನು ಎಂದು ಕೇಳಬಹುದು.
ಇಡೀ ಚಿತ್ರ ಸ್ನೇಹದ ಹಿನ್ನೆಲೆಯಲ್ಲಿ ಸಾಗುತ್ತದೆ. ಒಬ್ಟಾತ ಸ್ನೇಹಕ್ಕಾಗಿ ಪ್ರಾಣ ತೆಗೆದು, ಪ್ರಾಣ ಕೊಡಲು ರೆಡಿಯಾಗಿರುವವ, ಇನ್ನೊಬ್ಬ ಸ್ನೇಹದ ಸೋಗಿನಲ್ಲಿ ಸ್ವಾರ್ಥ ಸಾಧನೆಯ ಕನಸು… ಹೀಗೆ ಸಾಗುವ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್-ಟರ್ನ್ಗಳಿವೆ. ಇಡೀ ಸಿನಿಮಾ ಪ್ರಮುಖವಾಗಿ ಮೂರು ಪಾತ್ರಗಳ ಸುತ್ತವೇ ಸುತ್ತುತ್ತದೆ. ಇಲ್ಲಿ ನಾಯಕಿ ಇಲ್ಲ, ನಾಯಕರೇ ಎಲ್ಲಾ… ರಿಷಭ್ ಶೆಟ್ಟಿ ಖಡಕ್ ಖದರ್‌ನ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ.
ಇನ್ನು, ರಾಜ್ ಶೆಟ್ಟಿ ಒಂದು ಗುರಿಯೇ ಇಲ್ಲದ ಅಮಾಯಕ ಮತ್ತು ಅಷ್ಟೇ ಕ್ರೌರ್ಯವಿರುವ ಪಾತ್ರವನ್ನು ಸಲೀಸಾಗಿ ಮಾಡಿದ್ದಾರೆ. ಮಳೆಯ ನಡುವೆ ಕುಣಿಯುವ ದೃಶ್ಯದಲ್ಲಿ ರಾಜ್ ಶೆಟ್ಟಿ ತಲ್ಲೀನರಾಗಿರುವ ರೀತಿಯನ್ನು ಮೆಚ್ಚಲೇಬೇಕು. ಉಳಿದಂತೆ ಗೋಪಾಲ ದೇಶಪಾಂಡೆ ಪಾತ್ರ ಗಮನ ಸೆಳೆಯುತ್ತದೆ. ಚಿತ್ರದ ಹಿನ್ನೆಲೆ ಸಂಗೀತ, ಕಥೆಗೆ ಪೂರಕ.
ರವಿಪ್ರಕಾಶ್ ರೈ