ಢಾಕಾ: ಕೋವಿಡ್ ನಿಂದಾಗಿ ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಅಲ್ಲಿನ ಕಾರ್ಮಿಕರು ಅತಂತ್ರರಾಗಿದ್ದಾರೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಏಷ್ಯಾದಲ್ಲೇ ಚೀನವನ್ನು ಬಿಟ್ಟರೆ ಎರಡನೆ ಅತಿ ಪ್ರಮುಖ ರಾಷ್ಟ್ರವಾಗಿರುವ ಬಾಂಗ್ಲಾವು ಕೋವಿಡ್ ಕಾರಣದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ದೇಶದ ಶೇ. 84ರಷ್ಟು ರಫ್ತು ಆದಾಯದ ಮೂಲವಾಗಿರುವ ಗಾರ್ಮೆಂಟ್ಸ್ ಉದ್ಯಮವನ್ನು ಅಲ್ಲಿನ ಸರಕಾರವು ಅಗತ್ಯ ಸೇವೆ ಎಂದು ಪರಿಗಣಿಸಿ ಲಾಕ್‌ಡೌನ್‌ನಿಂದ ಹೊರಗಿಟ್ಟಿತ್ತು. ಆದರೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕುಸಿದಿರುವುದು ಮತ್ತು ಸೋಂಕು ಹರಡುವ ಭೀತಿಯಿಂದಾಗಿ ಹೆಚ್ಚಿನ ಗಾರ್ಮೆಂಟ್ಸ್ ಮಾಲಕರು ಸ್ವಯಂಪ್ರೇರಿತರಾಗಿ ಬಹುತೇಕ ಕಾರ್ಖಾನೆಗಳನ್ನು ಮುಚ್ಚಿರುವುದರಿಂದ ಎಷ್ಟೋ ಸಂಖ್ಯೆಯ ಕಾರ್ಮಿಕರು ಕೆಲಸವಿಲ್ಲದ ಉಪವಾಸದಿಂದಿರಬೇಕಾದ ಸ್ಥಿತಿ ಅಲ್ಲಿ ನೆಲೆಸಿದೆ.
16 ಕೋಟಿ ಜನಸಂಖ್ಯೆಯಿರುವ ಬಾಂಗ್ಲಾದಲ್ಲಿ ಸುಮಾರು 65 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
“ನಾನು ದುಡಿಯುವ ಕಾರ್ಖಾನೆಯು ಸುಮಾರು 6 ವಾರಗಳಿಂದ ಮುಚ್ಚಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ನನಗೆ ಈಗ ಕೆಲಸವಿಲ್ಲದ ಕಾರಣ ಸಹೋದರನ ಔಷಧದ ಬಿಲ್ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ನನ್ನ ಎಲ್ಲ ಸಹೋದ್ಯೋಗಿಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ’ ಎಂದು ಢಾಕಾದ ಗಾರ್ಮೆಂಟ್ಸ್ ಒಂದರಲ್ಲಿ ದುಡಿಯುವ ಸುಮಾರು 30 ವರ್ಷ ಪ್ರಾಯದ ಕಾರ್ಮಿಕರೋರ್ವರು ಮಾಧ್ಯಮಕ್ಕೆ ಹೇಳುತ್ತಿದ್ದಾರೆ.
ಪ್ರಸ್ತುತ ಸರಕಾರದ 8 ಮಿಲಿಯನ್ ಡಾಲರ್ ಪ್ಯಾಕೇಜ್‌ನ ಸಹಾಯದಿಂದ ದೇಶದ ಗಾರ್ಮೆಂಟ್ಸ್ ಕಾರ್ಖಾನೆಗಳು ಆರಂಭಗೊಂಡಿವೆ. ಮೇ ತಿಂಗಳ ಕೊನೆಯಲ್ಲಿ ಸುಮಾರು 732 ಮಿಲಿಯನ್ ಡಾಲರ್ ಅಂತಾರಾಷ್ಟ್ರೀಯ ಸಹಾಯವೂ ಸಿಕ್ಕಿದ್ದು, ಯೂರೋಪಿಯನ್ ಯೂನಿಯನ್ ಕೂಡ 126 ಮಿಲಿಯಲನ್ ಡಾಲರ್ ಸಹಾಯದ ಭರವಸೆ ನೀಡಿದೆ. ಆದರೆ ಮೂರು ಕೋವಿಡ್ ಸೋಂಕಿನ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಇಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದು, ದೊಡ್ಡ ಫ್ಯಾಷನ್ ಬ್ರ್ಯಾಂಡ್‌ಗಳು ಆರ್ಡರ್‌ಗಳನ್ನು ರದ್ದುಪಡಿಸುತ್ತಿವೆ. ಇದರ ನೇರ ಪರಿಣಾಮವು ನಿರುದ್ಯೋಗದ ರೂಪದಲ್ಲಿ ಕಾರ್ಮಿಕರನ್ನು ಕಾಡುತ್ತಿದೆ. ಕೆಲಸ ಕಳೆದುಕೊಳ್ಳುವ ಹಾಗೂ ವೇತನ ಕಡಿತದಂಥ ಸವಾಲುಗಳು ಕಾರ್ಮಿಕರ ಮುಂದಿಟ್ಟು, ಅವರ ಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ.
ಬಾಂಗ್ಲಾದಲ್ಲಿ ಲಾಕ್‌ಡೌನ್ ತೆರವಾಗಿದ್ದುದು ಮೇ 31ರಂದು ಆಗಿದ್ದರೂ ಅಗತ್ಯ ಸೇವೆ ಹೆಸರಲ್ಲಿ ಅಖ್ತರ್ ಎಂಬವರು ದುಡಿಯುವ ಕಾರ್ಖಾನೆಯು ಮೇ ಮೊದಲ ವಾರದಲ್ಲಿ ಪುನರಾರಂಭಗೊಂಡಿತ್ತು. ಮೊದಲ ದಿನ ಸಂಸ್ಥೆಯ ಮ್ಯಾನೇಜರ್ ಎಲ್ಲರನ್ನೂ ಸೇರಿಸಿ, ನೀವು ಕೆಲಸ ಮಾಡದ ದಿನಗಳ ಶೇ. 60ರಷ್ಟು ವೇತನ ನೀಡುತ್ತೇವೆ. ಆದರೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಗಣನೀಯವಾಗಿ ಕುಸಿದಿರುವುದರಿಂದ ಎಷ್ಟು ದಿನ ಹೀಗೆ ನೀಡಲು ಸಾಧ್ಯ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ಅಖ್ತರ್ ಹೇಳುತ್ತಿದ್ದಾರೆ. ಇದೇ ರೀತಿ ಬೇರೆ ಕೆಲವು ಗಾರ್ಮೆಂಟ್ಸ್ ಮಾಲಕರು ಕೂಡ ಹೇಳಿದ್ದು, ಇದರ ಹಿಂದೆ ಕಾರ್ಮಿಕರ ಯೂನಿಯನ್ ನಾಯಕರ ಶ್ರಮವೂ ಇದೆ.
2013ರ ಎಪ್ರಿಲ್ 24ರಂದು ಢಾಕಾ ಸಮೀಪದ ರಾಣಾ ಪ್ಲಾಝಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಗಾರ್ಮೆಂಟ್ಸ್ ಒಂದರಲ್ಲಿ ಬೆಂಕಿ ದುರಂತ ಸಂಭವಿಸಿ ಸುಮಾರು 1,100 ಕಾರ್ಮಿಕರು ಸಾವಿಗೀಡಾಗಿದ್ದರು. ಅದು ಗಾರ್ಮೆಂಟ್ಸ್ ಉದ್ಯಮಕ್ಕೆ ದೊಡ್ಡ ಆಘಾತ ನೀಡಿತ್ತು. ಆಗ ಕೆಲವು ದಿನಗಳ ಕಾಲ ಗಾರ್ಮೆಂಟ್ಸ್ ಉದ್ಯಮ ತಟಸ್ಥವಾಗಿತ್ತು. ಆದರೆ ಕೆಲಸ ಆರಂಭಿಸಿದ ಬಳಿಕ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ವೇತನ ನೀಡಲಾಗಿತ್ತು ಎಂದು ದೇಶದ ಪ್ರಮುಖ ಯೂನಿಯನ್ ಫೆಡರೇಶನ್ ಆಗಿರುವ ಸೊಮ್ಮಿಲಿಟೊ ಗಾರ್ಮೆಂಟ್ಸ್ ಶ್ರಮಿಕ್ ಫೆಡರೇಶನ್‌ನ ಅಧಕ್ಷೆ ನಜ್ಮಾ ಅಖ್ತರ್ ಹೇಳುತ್ತಿದ್ದಾರೆ. ಈಗ ಅದಕ್ಕಿಂತಲೂ ದೊಡ್ಡ ಆಘಾತವನ್ನು ಕೋವಿಡ್ ನೀಡಿದೆ.
ಈಗ ಗಾರ್ಮೆಂಟ್ಸ್ ಕಾರ್ಮಿಕರಿಗೆ ಆದಾಯದ ಮೂಲವೇ ಇಲ್ಲದ ಕಾರಣ ತಾವು ಕೋವಿಡ್ ವೈರಸ್‌ನಿಂದ ಸಾಯುವ ಮೊದಲು ಹಸಿವೆಯಿಂದ ಸಾಯುತ್ತೇವೆಯೇ ಎಂಬ ಭಯ ಮೂಡುವಂತಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.
ಹಿಂದೆ ನೀಡಿದ್ದ ಆರ್ಡರ್‌ಗಳನ್ನು ರದ್ದುಗೊಳಿಸುವವರ ವಿರುದ್ಧ ಈಗ ಬಾಂಗ್ಲಾದಲ್ಲಿ ಅಭಿಯಾನ ಆರಂಭವಾಗಿದ್ದು, ಅದರ ಪರಿಣಾಮವಾಗಿ ಸುಮಾರು 16 ಬ್ರ್ಯಾಂಡ್‌ಗಳು ಆರ್ಡರ್ ಜಾರಿಯಲ್ಲಿರಿಸಿದ್ದಾರೆ. ಕೆಲವು ಬ್ರ್ಯಾಂಡ್‌ಗಳನ್ನು ಸಂಪರ್ಕಿಸಿದಾಗ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ, ಮತ್ತೆ ಕೆಲವು ದಿವಾಳಿಯಾಗಿದ್ದೇವೆ ಎಂಬ ಉತ್ತರವೂ ಸಿಕ್ಕಿದೆ. ಎಚ್ ಆ್ಯಂಡ್ ಎಂ, ಅಡಿಡಾಸ್ ಮತ್ತು ನೈಕ್ ಮುಂತಾದ ಬ್ರ್ಯಾಂಡ್‌ಗಳು ಸುಮಾರು 7.5 ಬಿಲಿಯನ್ ಡಾಲರ್ ಮೊತ್ತದ ತಮ್ಮ ಹಿಂದಿನ ಆರ್ಡರ್‌ಗಳಿಗೆ ಬದ್ಧವಾಗಿರಲು ನಿರ್ಧರಿಸಿದೆ ಎಂದು ಕಾರ್ಮಿಕ ಸಂಘಟನೆ ನಾಯಕರು ಹೇಳುತ್ತಿದ್ದಾರೆ.