ಶಿವಮೊಗ್ಗ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಿಂದ ರಾಜ್ಯದ ಒಟ್ಟು ಫಲಾನುಭವಿಗಳ 4.31ಕೋಟಿ ಕುಟುಂಬಗಳಿಗೆ ಪಡಿತರ ನೀಡಿದ್ದೇವೆ. ಶಿವಮೊಗ್ಗ ಜಿಲ್ಲೆಯ 13.12 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಿದೆ. ಭಾರತ ಕೋವಿಡ್-19ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಎರಡು ವರ್ಷಗಳ ಕಾಲ ತನ್ನ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಆಹಾರ ಧಾನ್ಯ ಒದಗಿಸಿದ್ದನ್ನು ವಿಶ್ವ ಅಚ್ಚರಿಯಿಂದ ಗಮನಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಭಾರತೀಯ ಜನತಾ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏಪ್ರಿಲ್ 7ರಿಂದ ಏಪ್ರಿಲ್ 20ರ ವರೆಗೆ ಬಿಜೆಪಿಯ ವಿವಿಧ ಜನಪರ ಕೆಲಸಗಳನ್ನು ಜನರಿಗೆ ತಲುಪಿಸುವ ಅಂಗವಾಗಿ ವಿನೋಬನಗರದ ಸಾಕಮ್ಮ ನ್ಯಾಯಬೆಲೆ ಅಂಗಡಿ ಮುಂಭಾಗದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ವಿತರಿಸಲಾದ ಪಡಿತರ ಯಶಸ್ವಿ ಅನುಷ್ಠಾನದ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ವ್ಯಾಪಾರ ಸಂಸ್ಥೆ ಅನುಮತಿಸಿದರೆ ಭಾರತ ವಿಶ್ವಕ್ಕೆ ಆಹಾರ ಸಂಗ್ರಹ ಪೂರೈಸಲು ಸಿದ್ಧವಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉಕ್ರೇನ್ ಯುದ್ಧದ ಪರಿಣಾಮ ಜಗತ್ತಿನ ವಿವಿಧ ದೇಶಗಳಲ್ಲಿ ಭಾರೀ ಆಹಾರ ಕೊರತೆ ತಲೆದೋರಿದ್ದು, ಯುದ್ಧದ ಪರಿಣಾಮ ಜಗತ್ತಿನ ದೇಶಗಳಲ್ಲಿ ಅನಿಶ್ಚಿತತೆ ಉದ್ಭವವಾಗಿದೆ. ಈಗ ಜಗತ್ತು ಹೊಸ ಸಮಸ್ಯೆ ಎದುರಿಸುತ್ತಿದೆ. ವಿಶ್ವದ ಆಹಾರ ಸಂಗ್ರಹ ಬರಿದಾಗುತ್ತಿದೆ. ನಾವು ಈಗ ನಮ್ಮ ಜನರಿಗೆ ಅಗತ್ಯವಿರುವ ಸಾಕಷ್ಟು ಆಹಾರಧಾನ್ಯಗಳನ್ನು ಹೊಂದಿದ್ದು, ನಮ್ಮ ರೈತರು ವಿಶ್ವಕ್ಕೆ ಅನ್ನ ಒದಗಿಸಲು ಶಕ್ತರಿದ್ದಾರೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ ಎಂದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್, ಬಿಜೆಪಿಯ ನಗರದ ಅಧ್ಯಕ್ಷರಾದ ಜಗದೀಶ್, ಸುಡಾ ಅಧ್ಯಕ್ಷರಾದ ನಾಗರಾಜ್, ಮಂಜುನಾಥ್, ರಾಹುಲ್ ಬಿದರೆ, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.