Advertisement

ಬಿ.ಸಿ.ರೋಡ್‌-ಪಾಣೆಮಂಗಳೂರು ರಸ್ತೆ: ಕಸದ ಸಮಸ್ಯೆ

08:40 AM May 15, 2018 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್‌ ಮುಖ್ಯವೃತ್ತದಲ್ಲಿ ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯ ಒಂದು ಬದಿ ಪುರಸಭೆಯ ಕಸದ ತೊಟ್ಟಿಯಾಗುವ ಮೂಲಕ ಸಮಸ್ಯೆಯ ಕೇಂದ್ರವಾಗಿ ಕಾಡುತ್ತಿದೆ. ಸುಮಾರು ಎರಡು ದಶಕಗಳಿಂದ ನಗರದ ಕಸದ ತೊಟ್ಟಿಯಾಗಿದ್ದ ಬಿ.ಸಿ. ರೋಡಿನ ಬಂಟ್ವಾಳ ಪೇಟೆಯ ಕಡೆಗೆ ಹೋಗುವ ರಸ್ತೆಯ ತ್ಯಾಜ್ಯಗುಂಡಿಯನ್ನು ಜೋಡುಮಾರ್ಗ ಉದ್ಯಾನವನವಾಗಿ ಪರಿವರ್ತಿಸಿದ ಬಳಿಕ ಕಸವನ್ನು ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯ ಇನ್ನೊಂದು ಬದಿಗೆ ಪುರಸಭೆಯೇ ಸ್ಥಳಾಂತರಿಸಿತ್ತು. ಈಗ ಅಲ್ಲಿಯ ದುರ್ನಾತ ಹೆದ್ದಾರಿಗೂ ರಾಚುತ್ತಿದೆ. ರಸ್ತೆಯಲ್ಲಿ ನಡೆದು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಿ.ಸಿ.ರೋಡಿನ ರೈಲ್ವೇ ಸ್ಟೇಶನ್‌, ಬಂಟ್ವಾಳ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ರಿಕ್ಷಾ ಚಾಲಕರ ಸಂಘ, ಸರಕಾರಿ ಪ.ಪೂ. ಕಾಲೇಜುಗಳಿಗೆ ಹೋಗುವ ರಸ್ತೆಯಲ್ಲಿ ಪ್ರಸ್ತುತ ಕಸ ತುಂಬಿಕೊಳ್ಳುತ್ತಿದೆ.

Advertisement

ಎರಡೂ ಬದಿಯಲ್ಲಿ ಕಸ
ಈ ಕಸದಿಂದ ದುರ್ನಾತವಲ್ಲದೆ ಸೊಳ್ಳೆ, ಬೀದಿನಾಯಿ ಕಾಟ, ನೊಣಗಳ ಸಮಸ್ಯೆ ತೀವ್ರವಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಇದರ ಜತೆಗೆ ಪುರಸಭೆ ಅಲ್ಲಿಯೇ ಪುರಸಭೆ ಕಸ ಸಂಗ್ರಹದ ಲಾರಿಯನ್ನು ನಿಲ್ಲಿಸುವ ಮೂಲಕ ಸಮಸ್ಯೆಗೆ ಪೂರಕ ಪರಿಸ್ಥಿತಿ ಉಂಟು ಮಾಡುತ್ತಿದೆ ಎಂಬುದು ಸಾರ್ವಜನಿಕರು ಆರೋಪ.

ಪಾಣೆಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಎಸೆಯಲಾದ ಕಸದಲ್ಲಿ ಮನೆ ಮತ್ತು ವಾಣಿಜ್ಯ ಕಟ್ಟಡಗಳ ತ್ಯಾಜ್ಯ, ವಿವಿಧ ರೀತಿಯ ಹಸಿಕಸ, ಕಾಂಪೋಸ್ಟ್‌ ಕಸ, ಮರುಬಳಕೆ ಮಾಡಬಹುದಾದ ಲೋಹ, ಬಾಟಲ್‌, ರಟ್ಟುಗಳು, ರಬ್ಬರ್‌, ಹಳೆಯ ಪತ್ರಿಕೆಗಳು ಕೂಡ ಇವೆ. ಅಪಾಯಕಾರಿ ತ್ಯಾಜ್ಯಗಳಾದ ಬ್ಯಾಟರಿ ಸೆಲ್‌, ಮೊಬೈಲ್‌ ಬಿಡಿ ಭಾಗ, ಕಂಪ್ಯೂಟರ್‌ ಬಿಡಿ ಭಾಗಗಳು, ಔಷಧಿ ಬಾಟಲಿಗಳಂತಹ ತ್ಯಾಜ್ಯ ಕೂಡ ಇಲ್ಲಿ ಎಸೆಯಲ್ಪಡುತ್ತಿದೆ. ಈ ಬಗ್ಗೆ ಬಂಟ್ವಾಳ ಪುರಸಭೆಯನ್ನು ವಿಚಾರಿಸಿದಾಗ, ಕಸದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ದೊರೆತಿದೆ.

ನೀರು ಕಲುಷಿತ
ಇಲ್ಲಿನ ತೋಡಿನಲ್ಲಿ ಹರಿಯುವ ನೀರಿನಲ್ಲಿ ಬೆರಕೆ ಆಗುವ ಈ ಎಲ್ಲ ತ್ಯಾಜ್ಯವು ನೀರನ್ನು ಕಲುಷಿತ ಮಾಡುತ್ತಿದೆ. ಇನ್ನು ಮಳೆ ಆರಂಭವಾದರೆ ಇದೆಲ್ಲವೂ ಮಲಿನ ನೀರಿನೊಂದಿಗೆ ಸೇರಿ ನದಿಯನ್ನು ಸೇರುವ ಮೂಲಕ ರೋಗ ಹರಡಲು ಕಾರಣವಾಗುವ ಆತಂಕವೂ ಜನತೆಗೆ ಎದುರಾಗಿದೆ.

ಸ್ವಚ್ಛ – ಸ್ವಸ್ಥ ಯೋಜನೆ
ಸ್ವಚ್ಛ ಬಂಟ್ವಾಳ ರೂಪಿಸುವ ಉದ್ದೇಶದಿಂದ ಸ್ವಚ್ಛ ಬಂಟ್ವಾಳ-ಸ್ವಸ್ಥ ಬಂಟ್ವಾಳ ಯೋಜನೆ ರೂಪಿಸಿದೆ. ಇದರ ಪ್ರಕಾರ ನಾಗರೀಕರು ಯಾವುದೇ ಹಸಿ, ಒಣ ಕಸವನ್ನು ವಿಂಗಡಿಸಿ ನೀಡಿದರೆ, ವಿಲೇವಾರಿಗೆ ಉತ್ತಮ. ವಿಂಗಡಿಸಿ ನೀಡಿದರೆ ಪುರಸಭೆಯ ವಾಹನದಲ್ಲಿ ವಿಲೇ ಮಾಡಲಾಗುವುದು. ಬಂಟ್ವಾಳ ನಗರವನ್ನು ಸ್ವಚ್ಛವಾಗಿ ಉಳಿಸಿಕೊಳ್ಳಲು ನಾಗರೀಕರ ಸಹಾಯ, ಸಹಕಾರ ಅಗತ್ಯ.
– ರಾಯಪ್ಪ, ಮುಖ್ಯಾಧಿಕಾರಿ ಬಂಟ್ವಾಳ ಪುರಸಭೆ

Advertisement

— ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next