ಸ್ಟೇಟ್‌ಬ್ಯಾಂಕ್: ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ಮಂಗಳೂರಿನ ತ್ಯಾಜ್ಯದ ಸಮಸ್ಯೆಗೆ ಮಾತ್ರ ಪರಿಹಾರವೇ ಸಿಗುತ್ತಿಲ್ಲ. ರಸ್ತೆ ಬದಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪರಿಪಾಠ ಮುಂದುವರಿದಿದೆ.
ಸ್ಟೇಟ್‌ಬ್ಯಾಂಕ್‌ನ ಪುರಭವನ ಮುಂಭಾ ಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯ ಎಡಬದಿಯಲ್ಲಿ ತ್ಯಾಜ್ಯರಾಶಿಯೇ ತುಂಬಿಕೊಂಡಿದ್ದು, ಸವಾರರು ಮೂಗುಮುಚ್ಚಿ ತೆರಳುವ ಪರಿಸ್ಥಿತಿ ಇದೆ. ಅದರಲ್ಲಿಯೂ ಕಾಲ್ನಡಿಗೆಯಲ್ಲಿ ಅತ್ತಿಂದಿತ್ತ ಓಡಾಡುವ ಮಂದಿಗೆ ಇಲ್ಲಿನ ತ್ಯಾಜ್ಯರಾಶಿ ನರಕದರ್ಶನ ಸೃಷ್ಟಿಸಿದೆ.
ಇದೇ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹ, ವಿದ್ಯಾಸಂಸ್ಥೆ, ತಾಲೂಕು ಕಚೇರಿ ಸಹಿತ ಹಲವು ವಾಣಿಜ್ಯ ಸಂಸ್ಥೆಗಳು ಇವೆ. ನಿತ್ಯ ನೂರಾರು ಮಂದಿ ರೈಲು ನಿಲ್ದಾಣಕ್ಕೆ ವಾಹನ/ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ರಸ್ತೆ ಬದಿ ಹರಡಿರುವ ತ್ಯಾಜ್ಯ ರಾಶಿ ವಾಸನೆ ಹಾಗೂ ಗಲೀಜು ಸೃಷ್ಟಿಸಿದೆ.
ಮಂಗಳೂರು ನಗರವನ್ನು ಕ್ಲೀನ್ ಸಿಟಿ ಯಾಗಿ ಬದಲಾಯಿಸಲಾಗುವುದು ಎಂದು ಪಾಲಿಕೆ ನೂತನ ಮೇಯರ್ ಹಾಗೂ ಉಪ ಮೇಯರ್ ಅವರು ಈಗಾಗಲೇ ಘೋಷಿಸಿ ದ್ದಾರೆ. ಹೀಗಾಗಿ ಬಹುಮಂದಿ ಅತ್ತಿಂದಿತ್ತ ಹೋಗುವ ರೈಲು ನಿಲ್ದಾಣ ರಸ್ತೆಯ ತ್ಯಾಜ್ಯದ ರಾಶಿಗೆ ಮುಕ್ತಿ ನೀಡುವ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ವಿಲೇವಾರಿಗೆ ಗಮನಹರಿಸದ ಇಲ್ಲಿನ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದ್ದೂ ಇಲ್ಲದಂತಿರುವ ಇ ಟಾಯ್ಲೆಟ್! ಮಂಗಳೂರಿನಲ್ಲಿ ಬಹು ಸುದ್ದಿ ಮಾಡಿ ಜಾರಿಗೆ ಬಂದಿದ್ದ ಇ ಟಾಯ್ಲೆಟ್ ಇಲ್ಲಿ ಇದ್ದೂ ಇಲ್ಲದಂತಿದೆ. ಅದರ ಮುಂಭಾಗದಲ್ಲಿಯೇ ತ್ಯಾಜ್ಯ ರಾಶಿ ತುಂಬಿಕೊಂಡಿದ್ದು, ಇ ಟಾಯ್ಲೆಟ್ ಬಳಕೆಗೆ ಸಿಗುತ್ತಿಲ್ಲ. ಪರಿಣಾಮವಾಗಿ ಕಳೆದ ಹಲವು ಸಮಯದಿಂದ ಇ ಟಾಯ್ಲೆಟ್ ಪ್ರದೇಶ ಕಸ ಹಾಕುವ ಡಂಪಿಂಗ್ ಯಾರ್ಡ್ ಮಾದರಿಯಲ್ಲಿ ಬದಲಾವಣೆಯಾಗಿದೆ.