ಬೆಂಗಳೂರು: ನಗರದಲ್ಲಿ ಕಸ ಸಂಗ್ರಹಕ್ಕೆ ಮಾಸಿಕ 200 ರೂ. ಶುಲ್ಕ ಸಂಗ್ರಹ ಸೇರಿದಂತೆ ಕಸ ಉತ್ಪಾದನೆಗೆ ದಂಡ ವಿಧಿಸುವ ಅಂಶಗಳನ್ನು ಒಳಗೊಂಡ “ಘನತ್ಯಾಜ್ಯ ನಿರ್ವಹಣೆ ಉಪ ನಿಯಮಗಳು- 2020”ಅನ್ನು ಜಾರಿ ಮಾಡುವುದಾಗಿ ಬಿಬಿಎಂಪಿ ಪ್ರಕಟಣೆ ಹೊರಡಿಸಿರುವುದು ಸದ್ಯ ಗೊಂದಲಕ್ಕೆ ಕಾರಣವಾಗಿದೆ. ನಗರದಲ್ಲಿನ ಮನೆಗಳಿಂದ ಪ್ರತಿ ತಿಂಗಳು ಕಸ ಸಂಗ್ರಹಕ್ಕೆ ಮಾಸಿಕ 200 ರೂ. ಸಂಗ್ರಹ ಮಾಡುವ ಪ್ರಸ್ತಾವನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನಗರದಲ್ಲಿ ಕಸ ಸಂಗ್ರಹ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಶುಲ್ಕ ಸಂಗ್ರಹ ಮಾಡಬಾರದು. ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಇತ್ತೀಚೆಗೆ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಮೇಯರ್ ಎಂ.ಗೌತಮ್‌ಕುಮಾರ್ ಅವರು, ಈ ನಿಯಮಗಳನ್ನು ಅಳವಡಿಸಿಕೊಳ್ಳಲು 90 ದಿನಗಳ ಕಾಲಾವಕಾಶವಿದ್ದು, ಸಾರ್ವಜನಿಕರಿಗೆ ಹೊರೆಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು.
ಆದರೆ, ಅದರ ಬೆನ್ನಲ್ಲೇ ಬಿಬಿಎಂಪಿಯು ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು 2020ಅನ್ನು ಸೆಕ್ಷನ್ 428ರ ಕೆಎಂಸಿ ಕಾಯ್ದೆ 1976ರ ಪ್ರಕಾರ ಜಾರಿ ಮಾಡಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ. ಘನತ್ಯಾಜ್ಯ ನಿರ್ವಹಣೆ ನಿಯ ಮಾವಳಿಗಳು -2016ರ 15 ಇ ಮತ್ತು ಜಡ್ ಎಫ್ ನ ನಿಯಮಾವಳಿಗಳ ಅನ್ವಯ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ನಿಯಮಾವಳಿಗಳಿಗೆ ಉಪನಿಯಮ ರಚನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ರಚನೆ ಮಾಡಲಾಗಿದ್ದು, ಶೀಘ್ರ ಜಾರಿಗೆ ತರಲಾಗುವುದು.
ಘನತ್ಯಾಜ್ಯ ನಿಯಮಾವಳಿಗಳ ವಿವರ ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಸಂಬಂಧ ಕಿರುಹೊತ್ತಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದು, 200 ರೂ. ನೀಡಿ ಪಾಲಿಕೆಯ ಕೇಂದ್ರ ಕಚೇರಿಯಿಂದ ಆಸಕ್ತರು ಖರೀದಿಸಬಹುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಿಂದ ಗೊಂದಲ ಸೃಷ್ಟಿಯಾಗಿ ದ್ದು, ಪಾಲಿಕೆಯ ನಿಲುವೇ ದ್ವಂದ್ವದಿಂದ ಕೂಡಿರುವ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿದೆ.