ಗಂಗಾವತಿ: ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಂಗಳವಾರವೂ ಗಂಗಾವತಿಯಲ್ಲಿ ಹಲವು ದೇಗುಲಗಳು ಮತ್ತು ರಾಜಕೀಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಕಾಂಗ್ರೆಸ್ ಮುಖಂಡರಿಗೆ ಅಚ್ಚರಿ ಮೂಡಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರೇ ಗಾಲಿಯವರನ್ನು ವಿವಿಧ ದೇವಾಲಯ ಮತ್ತು ರಾಜಕೀಯ ಮುಖಂಡ ಮನೆಗಳಿಗೆ ಕರೆದುಕೊಂಡು ಹೋಗಿ ಪತ್ರಿಕಾ ಮಾಧ್ಯಮದವರನ್ನು ಹೊರಗಿಟ್ಟು ರಹಸ್ಯ ಸಭೆ ನಡೆಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವೊಲಿಕೆ ನಡೆಸಿದ್ದಾರೆನ್ನಲಾಗುತ್ತಿದೆ.
ಸೋಮವಾರ ರಾತ್ರಿ ಪಂಪಾಸರೋವರದಲ್ಲಿ ತಂಗಿದ್ದ ಗಾಲಿ ಜನಾರ್ಧನರಡ್ಡಿ ಮಂಗಳವಾರ ಬೆಳ್ಳಿಗ್ಗೆ ಬಿಜೆಪಿಯ ಹಿರಿಯ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ರಾಘವೇಂದ್ರಶೆಟ್ಟಿ, ಕೆಲೋಜಿ ಸಂತೋಷ, ಮಹಾಲಿಂಗಪ್ಪ ಬನ್ನಿಕೊಪ್ಪ ಹಾಗೂ ಅಕ್ಕಿ ಚಂದ್ರಶೇಖರ, ಮನೋಹರಗೌಡ ಸೇರಿ ತಮ್ಮ ಬೆಂಬಲಿಗರೊಂದಿಗೆ ಹಿರೇಜಂತಗಲ್ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯ, ಪಂಪಾನಗರದ ಪಂಪಾಪತಿ ದೇವಾಲಯ, ಕಲ್ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಲ್ಮಠದ ಡಾ|ಕೊಟ್ಟೂರು ಮಹಾಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಹಿರಿಯ ಮುಖಂಡರಿದ್ದರು. ನಗರಸಭೆ ಮಾಜಿ ಸದಸ್ಯ ಲಾಳಗೊಂಡ ಸಮಾಜದ ಹಿರಿಯ ಮುಖಂಡ ಹೊಸಳ್ಳಿ ಶಂಕ್ರಗೌಡ ಮನೆಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು.
ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೆಡ್ಡಿ ಗಾಳ: ಈ ಮಧ್ಯೆ ಗಂಗಾವತಿಯಿಂದ ವಿಧಾನಸಭೆ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಪಕ್ಷದ 07 ಜನ ನಗರಸಭಾ ಸದಸ್ಯರನ್ನು ತಮ್ಮತ್ತ ಸೆಳೆಯುವ ತಂತ್ರ ಹೂಡಿದ್ದು ನಗರಸಭೆ ಮಾಜಿ ಅಧ್ಯಕ್ಷರೊಬ್ಬರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿದ್ದು ನಗರಸಭೆಯಲ್ಲಿ ಶೀಘ್ರವೇ ಗಾಲಿ ಧ್ವಜ ಹಾರಾಡಲಿದೆ ಎಂದು ಜನಾರ್ಧನ ರೆಡ್ಡಿಯವರ ಆಪ್ತರೊಬ್ಬರು ತಿಳಿಸಿದ್ದಾರೆ. ಕಳೆದ 12 ವರ್ಷಗಳಿಂದ ಗಣಿಹರಣದ ಕುಣಿಕೆಯಿಂದಾಗಿ ರಾಜಕೀಯ ಮಾಡಲು ಆಗದೇ ಬಿಜೆಪಿಯವರ ಸಖ್ಯ ಬಿಡಲೂ ಆಗದೇ ಆಂತರೀಕ ಹಿಂಸೆ ಅನುಭವಿಸುತ್ತಿರುವ ರಡ್ಡಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪಕ್ಷದ ಹಿರಿಯರು ಪ್ರೀಹ್ಯಾಂಡ್ ಕೊಡುವಂತೆ ಸಚಿವ ಬಿ.ಶ್ರೀರಾಮುಲು ಮೂಲಕ ಡಿ.18 ಅಂತಿಮ ಗಡುವು ನೀಡಿ ಮಾತುಕತೆ ನಡೆಸಿದ್ದು ಇದು ಸಾಧ್ಯವಾಗದೇ ಹೋದರೆ ಪಕ್ಷೇತರವಾಗಿ ತಮ್ಮ ಬಲ ಪರೀಕ್ಷೆಗೆ ಸಿದ್ದ ಇರುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಇದರ ಫಲವಾಗಿ ಮೊದಲಿಗೆ ಗಾಲಿಯವರು ಗಂಗಾವತಿ ನಗರಸಭೆಯಲ್ಲಿ ಆಪರೇಶನ ರಡ್ಡಿ ನಡೆಸಲು ತಂತ್ರ ಹೆಣೆದಿದ್ದಾರೆನ್ನಲಾಗುತ್ತಿದೆ. ಈ ಮಧ್ಯೆ ಡಿ.13 ರಂದು ಕನಕಗಿರಿ ರಸ್ತೆಯಲ್ಲಿ ನೂತನವಾಗಿ ಖರೀದಿಸಿದ ಬೃಹತ್ ಬಂಗಲೆಯಲ್ಲಿ ರಡ್ಡಿಗಾರು ಗೃಹ ಪ್ರವೇಶ ಏರ್ಪಡಿಸಿದ್ದಾರೆ.
ಗಾಲಿ ಜನಾರ್ಧನರೆಡ್ಡಿಯವರು ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದು ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪ್ರವೇಶ ನಿರ್ಬಂಧವಾಗಿದೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲು ರಡ್ಡಿಯರ ಶಕ್ತಿ ಪಕ್ಷಕ್ಕೆ ಬೇಕಿದೆ. ಆದ್ದರಿಂದ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ರೆಡ್ಡಿಯವರು ಎಲ್ಲಿಯೂ ನಾನು ಗಂಗಾವತಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ. ಅವರಿಗೆ ಗಂಗಾವತಿ ಅಚ್ಚುಮೆಚ್ಚಿನ ಸ್ಥಳವಾಗಿದ್ದು ಇಲ್ಲಿ ಮನೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿ 150 ಸ್ಥಾನ ಗೆಲ್ಲಲು ನೆರವಾಗಲಿದ್ದಾರೆ. ಸಚಿವ ಬಿ.ಶ್ರೀರಾಮುಲು ಹಾಗೂ ಗಾಲಿ ಜನಾರ್ಧನ ರೆಡ್ಡಿಯವರ ಮಧ್ಯೆ ಯಾವುದೇ ಬಿರುಕು ಇಲ್ಲ. ಇದು ಸೃಷ್ಠಿಯಾಗಿದ್ದು ಜನರು ಇದನ್ನು ನಂಬಲ್ಲ. ಗಾಲಿಯವರ ಜನತೆ ಬಿಜೆಪಿ ನಮ್ಮ ಮುಖಂಡರು ತೆರಳಿದರೆ ತಪ್ಪೇನು ಅವರು ನಮ್ಮ ನಾಯಕರಾಗಿದ್ದಾರೆ.
-ಪರಣ್ಣ ಮುನವಳ್ಳಿ ಶಾಸಕ .
– ಕೆ.ನಿಂಗಜ್ಜ