ಗಂಗಾವತಿ: ಇಡೀ ಏಷ್ಯಾ ಖಂಡಕ್ಕೆ ಸಹಕಾರಿ ಚಳವಳಿ ಮೂಲಕ ಸಹಕಾರಿ ತತ್ವಗಳ ಆಚರಣೆಗೆ ನಾಂದಿ ಹಾಡಿದ ರಾಜ್ಯದಲ್ಲಿ ಈಗ ಕೃಷಿ ಸೇವಾ ಸಹಕಾರಿ ಸಂಘಗಳ ಭವಿಷ್ಯ ತೂಗುಯ್ನಾಲೆಯಲ್ಲಿದೆ. ಕಳೆದೆರಡು ವರ್ಷಗಳಿಂದ ಎಸ್‌ಬಿಐ(ಎಡಿಬಿ) ಬ್ಯಾಂಕ್ ಕೆಲ ನಿಯಮಗಳ ಉಲ್ಲಂಘನೆ ಮತ್ತು ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ರಾಜ್ಯದ ಬಹುತೇಕ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮುಚ್ಚುವ ಭೀತಿ ಎದುರಿಸುತ್ತಿವೆ.
Advertisement
ರಾಜ್ಯದ ರೈತರ ಆರ್ಥಿಕ ಸಂಕಷ್ಟ ದೂರ ಮಾಡಲು ಕೃಷಿಗಾಗಿ ಪ್ರತಿ ವರ್ಷ ವ್ಯವಸಾಯ ಸೇವಾ ಸಹಕಾರಿ ಸಂಘಗಳು ರೈತರಿಗೆ ಬಿತ್ತನೆ ಮತ್ತಿತರ ಕೃಷಿ ಕಾರ್ಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಅಥವಾ ಪ್ರಸ್ತುತ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುತ್ತಿದ್ದು, ಖಾಸಗಿ ವ್ಯಕ್ತಿಗಳ ಬಡ್ಡಿ ವ್ಯವಹಾರಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಆದರೆ ಕೇಂದ್ರ, ರಾಜ್ಯ ಸರಕಾರದ ನಿರ್ಲಕ್ಷ್ಯ ಹಾಗೂ ಎಸ್‌ಬಿಐ (ಎಡಿಬಿ) ಬ್ಯಾಂಕ್‌ನ ಕಮರ್ಷಿಯಲ್ ನಿಯಮಗಳಿಂದ ರಾಜ್ಯದ ಸಾವಿರಾರು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿದ್ದು ರೈತರಿಗೆ ಪುನರ್ ಸಾಲ ಕೊಡಲು ಸಾಧ್ಯವಿಲ್ಲದೇ ಸಂಕಷ್ಟದಲ್ಲಿವೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಕೇಂದ್ರ, ರಾಜ್ಯ ಸಹಕಾರಿ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಶತಮಾನದ ಸಹಕಾರಿ ಚಳವಳಿಗೇ ಮಂಕು ಕವಿದಿದೆ.
ನಿಯಮದಡಿಯಲ್ಲಿ ಸಂಘಗಳಿಗೆ ಸಾಲ ನೀಡಿ ಶೇ.8.70 ದರದಲ್ಲಿ ಬಡ್ಡಿ ಪಡೆಯುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಡ್ಡಿ ನಿಯಮ ಉಲ್ಲಂಘಿಸಿ ಶೇ.2ರಷ್ಟು ಹೆಚ್ಚುವರಿ ಬಡ್ಡಿ ಪಡೆಯುವ ಮೂಲಕ ಸಹಕಾರಿ ಸಂಘಗಳ ಆರ್ಥಿಕ ದುಸ್ಥಿತಿಗೆ ಕಾರಣವಾಗಿದೆ.
Related Articles
ಬರಬೇಕಿರುವ 30 ಕೋಟಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಪುನಶ್ಚೇತನಗೊಳಿಸುವ ಕಾರ್ಯ ಆಗಬೇಕಿದೆ.
Advertisement
ರೈತರಿಗೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಿದೆ. ಸರಕಾರ ಪ್ರೋತ್ಸಾಹಧನ (ಸರಕಾರ ಭರಿಸಬೇಕಿರುವ ಶೂನ್ಯ ಬಡ್ಡಿ ಹಣ) ಕಳೆದೆರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಆದ್ದರಿಂದ ಸಹಕಾರಿ ಸಂಘಗಳು ಕಮರ್ಷಿಯಲ್ ಬ್ಯಾಂಕ್‌ಗಳಿಗೆ ಶೇ.2 ಹೆಚ್ಚುವರಿ ಬಡ್ಡಿ ಪಾವತಿಸಲು ಹೆಣಗಾಡುತ್ತಿದ್ದು ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿವೆ. ಆದ್ದರಿಂದ ರಿಜರ್ವ್ ಬ್ಯಾಂಕ್ ಹಾಗೂ ಕೇಂದ್ರ, ರಾಜ್ಯ ಸರಕಾರ ಸಹಕಾರಿ ಸಂಘಗಳ ನೆರವಿಗೆ ಬರಬೇಕಿದೆ. ಇಲ್ಲದಿದ್ದರೆ ರೈತರಿಗೆ ಸಾಲ ಸೌಲಭ್ಯ ನೀಡಲು ಆಗಲ್ಲ.*ಜಗದೀಶ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ಢಣಾಪೂರ ರಾಜ್ಯ ಸರಕಾರ ನಿಯಮ ಜಾರಿ ಮಾಡಿ ಎಲ್ಲ ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ವ್ಯಾಪ್ತಿಗೆ ತರಬೇಕು. ಇದರಿಂದ ಕಮರ್ಷಿಯಲ್ ಬ್ಯಾಂಕುಗಳ ಹೆಚ್ಚುವರಿ ಬಡ್ಡಿದರದಿಂದ ಸಹಕಾರಿ ಸಂಘಗಳನ್ನು ಸಂರಕ್ಷಣೆ ಮಾಡಲು ಸಾಧ್ಯ. ರಾಯಚೂರು-ಕೊಪ್ಪಳ ಮಧ್ಯವರ್ತಿ ಸಹಕಾರಿ ಬ್ಯಾಂಕ್ ವ್ಯಾಪ್ತಿಗೆ ಶೇ.95 ಸಹಕಾರಿ ಸಂಘಗಳಿದ್ದು ಉಳಿದವು ಎಸ್‌ಬಿಐ (ಎಡಿಬಿ)ಅಥವಾ ಇತರೆ ಕಮರ್ಷಿಯಲ್ ಬ್ಯಾಂಕ್ ಹಿಡಿತದಿಂದ ಸ್ವಯಂ ಆಗಿ ಹೊರಗೆ ಬರಬೇಕು. ರಾಜ್ಯ ಸರಕಾರ ಶೂನ್ಯ ಬಡ್ಡಿ ಯೋಜನೆ ಪ್ರೋತ್ಸಾಹಧನ ಕಾಲಕಾಲಕ್ಕೆ ಸಂಘಗಳಿಗೆ ಬಿಡುಗಡೆ ಮಾಡಬೇಕು.
*ಹಾಲಪ್ಪ ಆಚಾರ, ಸಹಕಾರಿ ಧುರೀಣರು, ಮಾಜಿ ಸಚಿವ ■ ಕೆ.ನಿಂಗಜ್ಜ