ಗಂಗಾವತಿ: ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಬಿಸಿಎಂ ಇಲಾಖೆಯ ಕಾಲೇಜು ಹಾಸ್ಟೆಲ್ ಅನೈತಿಕತೆಯ ಚಟುವಟಿಕೆಗಳ ತಾಣವಾಗುತ್ತಿದೆ. ನಿರ್ಮಿಸಿ ವರ್ಷ ಕಳೆದರೂ ಉದ್ಘಾಟನೆ ಭಾಗ್ಯವಿಲ್ಲದೇ ಈ ಕಟ್ಟಡ ಹಾಳಾಗುತ್ತಿದೆ .
ಹೊಸಳ್ಳಿ ರಸ್ತೆಯ ಕಲ್ಯಾಣನಗರದ ಲೇಔಟ್ ನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಕಾಲೇಜು ಹಾಸ್ಟೆಲ್ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯವಿಲ್ಲ. ಇಲ್ಲಿ ಕೆಲ ಯುವಕರು, ಪುಡಾರಿಗಳು ರಾತ್ರಿ ಸಂದರ್ಭದಲ್ಲಿ ಮದ್ಯಪಾನ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾಡಿಕೊಂಡಿದ್ದಾರೆ .
ಕಲ್ಯಾಣ ನಗರದ ನಿವಾಸಿಗಳು ಹಲವು ಬಾರಿ ನಗರಸಭೆಯ ಪೌರಾಯುಕ್ತರು ಬಿಸಿಎಂ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪೊಲೀಸ್ ಇಲಾಖೆಯವರಿಗೆ ಇಲ್ಲಿಯ ಅನೈತಿಕ ಚಟುವಟಿಕೆಯ ವಿಷಯವನ್ನು ಗಮನಕ್ಕೆ ತಂದಿದ್ದಾರೆ .ದುಬಾರಿ ಬಾಡಿಗೆಯ ಕಟ್ಟಡದಲ್ಲಿ ಪ್ರಸ್ತುತ ಬಿಸಿಎಂ ಕಾಲೇಜ್ ಹಾಸ್ಟೆಲ್ ಇದ್ದು ಇದನ್ನು ಬಿಸಿಎಂ ಇಲಾಖೆಯ ಸ್ವಂತ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಈಗಾಗಲೇ ಎಸ್ ಎಫ್ಐ ಎಬಿವಿಪಿ ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಮತ್ತು ಕಲ್ಯಾಣ ನಗರದ ನಿವಾಸಿಗಳು ಒತ್ತಾಯಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮವಾಗಿ ನೂತನ ಕಟ್ಟಡ ಅನೈತಿಕ ತಾಣವಾಗಿದೆ ಮತ್ತು ಇಡೀ ಕಟ್ಟಡದ ಕಿಟಕಿ ಬಾಗಿಲು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಪುಡಾರಿಗಳು ನಾಶ ಮಾಡುತ್ತಿದ್ದಾರೆ .
ಇದನ್ನೂ ಓದಿ:ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ:CMಕುರ್ಚಿ ಮೇಲೆ ಪ್ರಬಲಸಮುದಾಯಗಳ ‘ಟವೆಲ್’
ಈ ಕುರಿತು ಮಾಹಿತಿ ಕೇಳಲು ಬಿಸಿಎಂ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಲು ಯತ್ನಿಸಿದರೂ ಅಧಿಕಾರಿಗಳು ಕರೆ ಸ್ವೀಕರಿಸದಿರುವುದು ಇಲಾಖೆಯ ಬೇಜವಾಬ್ದಾರಿತನವನ್ನು ಸೂಚಿಸುತ್ತಿದೆ.
ಸರ್ಕಾರದ ದುಂದುವೆಚ್ಚ ಕಡಿಮೆ ಮಾಡುವ ವಿಷಯಗಳು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಕಟ್ಟಡ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಬಿಸಿಎಂ ಹಾಸ್ಟೆಲ್ ನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದು ಎಷ್ಟು ಸರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ