ಗಂಗಾವತಿ: ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಿದ್ದು, ಅಚ್ಚುಕಟ್ಟು ರೈತರು ಭತ್ತ ನಾಟಿ ಮಾಡಲು ಸಿದ್ಧತೆ ನಡೆಸಿದ್ದು, ಈ ಸಂದರ್ಭದಲ್ಲಿ ಶಿವಪೂರ ಬೋರುಕಾ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಆರಂಭಿಸಿದ್ದು, ಹಲವು ಅನುಮಾನಗಳನ್ನು ಹುಟ್ಟಿಸಿದೆ. ಕೂಡಲೇ ಕಾಲುವೆಗೆ ನೀರು ಹರಿಸದಿದ್ದರೆ ರೈತರ ಜತೆಗೂಡಿ ಹೋರಾಟ ನಡೆಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು
ಅವರು ಜು. 27ರ ಗುರುವಾರ ಬೆಳ್ಳಿಗ್ಗೆ ಶಿವಪೂರ ಬೋರುಕಾ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ನೀರಾವರಿ ಸಲಹಾ ಸಮಿತಿ ರಚನೆ ಬಗ್ಗೆ ಸಿಎಂ ಬಳಿ ಮಾತನಾಡುವುದಾಗಿ ಹೇಳಿರುವುದು ಸರಿಯಲ್ಲ. ತುಂಗಭದ್ರಾ ಡ್ಯಾಂ ಬೈಲಾ ಪ್ರಕಾರ ಐಸಿಸಿ ಖಾಯಂ ಆಗಿರುತ್ತದೆ. ಅಚ್ಚುಕಟ್ಟು ಪ್ರದೇಶದ ಶಾಸಕರು, ಎಂಎಲ್ಸಿಗಳು, ಸಂಸದರು, ಕೃಷಿ ಇಲಾಖೆ ಅಯಾ ಜಿಲ್ಲಾಧಿಕಾರಿಗಳು ಐಸಿಸಿ ಸದಸ್ಯರಾಗಿರುತ್ತಾರೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿದ್ದು ಬೇಗನೆ ಕಾಲುವೆಗಳಿಗೆ ನೀರು ಹರಿಸಬೇಕು. ಆಗಷ್ಟ್ ತಿಂಗಳಲ್ಲಿ ಭತ್ತ ನಾಟಿ ಮಾಡಲು ಅನುಕೂಲವಾಗಿದ್ದು ಬೇಗನೆ ನೀರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ತರಾಟೆಗೆ: ಕಾಲುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರಿಂಗ್ ಗೆ ಮೊಬೈಲ್ ಕರೆ ಮಾಡಿ ಕಾಲುವೆಗೆ ನೀರು ಬಿಡುವಾಗ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ತಿ ಮಾಡುತ್ತಿದ್ದು ಇದರಿಂದಾಗಿ ಭತ್ತದ ನಾಟಿ ಮಾಡುವ ಕಾರ್ಯ ವಿಳಂಬವಾಗುವ ಸಾಧ್ಯತೆ ಇದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಕೂಡಲೇ ನೀರು ಬಿಡಲು ಕ್ರಮಕೈಗೊಳ್ಳುವಂತೆ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಕೆ.ಆರ್.ಪಿ. ಪಕ್ಷದ ಜಿಲ್ಲಾಧ್ಯಕ್ಷ ಮನೋಹರ ಗೌಡ, ಯಮನೂರಚೌಡ್ಕಿ, ಹುಸೇನಬಾಷಾ ಸೇರಿ ರೈತ ಮುಖಂಡರಿದ್ದರು.