ಧಾರವಾಡ: ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವತ್ತ ಹೆಚ್ಚು ಗಮನ ಹರಿಸುವ ಬದಲು ನಿಜ ಅರ್ಥ ತಿಳಿದು ಗಣೇಶ ಪ್ರತಿಷ್ಠಾಪನೆಗೆ ಎಲ್ಲರೂ ಮುಂದಾಗಬೇಕಿದೆ ಎಂದು ಪರಿಸರವಾದಿ ಮುಕುಂದ ಮೈಗೂರ ಹೇಳಿದರು.
ನಗರದ ಕವಿಸಂನಲ್ಲಿ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಹತ್ವ ಹಾಗೂ ಚಿಂತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಂಚಭೂತಗಳಿಂದ ಕೂಡಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕಿದೆ. ಗರಿಕೆ, ಬಿಲ್ವ, ದಾಸವಾಳ ಹೂ ಇವುಗಳು ನೀರು ಸ್ವತ್ಛ ಮಾಡುವ ಗುಣ ಹೊಂದಿದೆ. ಇದನ್ನು ಬಿಟ್ಟು ಪ್ಲಾಸ್ಟಿಕ್‌ದಿಂದ ತಯಾರಿಸಿದ ವಸ್ತುಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದರ ಬದಲಿಗೆ ನೈಸರ್ಗಿಕ ವಸ್ತುಗಳ ಅಲಂಕಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಗಣಪತಿಗೆ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಮೂರ್ತಿ ತಯಾರಿಸುವ ಸುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರು ಪೋಲಿಯೋ, ಕಣ್ಣು ಉರಿ, ಚರ್ಮ ರೋಗ, ಕ್ಯಾನ್ಸರ್, ಹೃದಯ ರೋಗ ಸಂಬಂ ಧಿಸಿದ ಕಾಯಿಲೆಗಳಿಗೆ ತುತ್ತಾಗಬಹುದು. ಪಿಒಪಿಯಿಂದ ತಯಾರಿಸಿದ ಗಣಪತಿ ಬದಲು ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು.
ಮೂರ್ತಿ ತಯಾರಕರೂ ಪರಿಸರ ಪೂರಕ ಮೂರ್ತಿ ತಯಾರಿಸಬೇಕು ಎಂದರು. ಉಪ ಪರಿಸರ ಅಧಿಕಾರಿ ಶೋಭಾ ಗಜಕೋಶ ಮಾತನಾಡಿ, ಇಂತಹ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಹತ್ವ ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.
ಇಂದಿನ ಮಕ್ಕಳಿಂದ ಗಣೇಶ ಚರ್ತುಥಿ ಆಚರಣೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದರು. ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿ, ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಸಾಗಲಿ ಸೇರಿದಂತೆ ಇತರೆ ಭಾಗಗಳಿಂದ ಮಣ್ಣಿನ ಗಣಪತಿ ಎಂದು ಬಿಂಬಿಸಿ ಶೇ. 60ರಷ್ಟು ಮಣ್ಣು ಮತ್ತು ಶೇ. 40ರಷ್ಟು ಪಿಒಪಿ ಬಳಸಿ ಮಾಡಿದ ಗಣೇಶ ಮೂರ್ತಿಗಳನ್ನು ಮಾರುವ ಪ್ರಯತ್ನ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಲಾಯಿತು. ಡಾ| ಹರ್ಷವರ್ಧನ ಶೀಲವಂತ, ವಿಶ್ವನಾಥ ಬಂಡಿಗೇರ, ಕಲಾವತಿ ಜಿ, ಪ್ರಕಾಶ ಕಲಹಾಳ, ಸಂತೋಷ ಪೂಜಾರ, ಮೇಘಾ ಗಿರಿಸಾಗರ, ಮಾಲತಿ ಮೈಗೂರ, ಆಶಾ ರಂಗಣ್ಣನವರ ಇದ್ದರು.