Advertisement

ಗಣೇಶನ ಬೀಜಮಂತ್ರ

01:52 PM Apr 14, 2020 | |

ಗಣೇಶ ಹುಟ್ಟಿದ್ದು ಮಣ್ಣಿನಿಂದ ಎಂದು ಪುರಾಣದ ಕಥೆಗಳೇ ಹೇಳಿರಬೇಕಾದರೆ…ನೆಲ,ಜಲ,ಗಾಳಿ, ಜಲಚರಗಳನ್ನೇ ನಾಶ ಮಾಡುವ ಇನ್ನಾವುದೋ ಬೇರೆ ರಾಸಾಯನಿಕದಿಂದ ಗಣೇಶನ ಮೂರ್ತಿ ಮಾಡುವುದು ಎಷ್ಟು ಸರಿ ? ಹತ್ತು ವರ್ಷದಿಂದ ಮಹಾರಾಷ್ಟ್ರದ ಪುಣೆಯಿಂದ ಬರೋ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಓಪಿ)ನಿರ್ಮಿತ ಗಣಪತಿಗಳು ಧಾರವಾಡ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿನ ಸೂಕ್ಷ್ಮ ಪರಿಸರವನ್ನೇ ಅಧೋಗತಿಗೆ ತಳ್ಳಿದ್ದು, ಹಳ್ಳ ಕೊಳ್ಳ,ಕೆರೆ ಕಟ್ಟೆ, ಜಲಮೂಲಗಳನ್ನೇ ಸರ್ವನಾಶ ಮಾಡುತ್ತಿವೆ. ಧಾರವಾಡಿಗರು ಈ ವಿಷಯವಾಗಿ ದನಿ ಎತ್ತಿದ್ದಾರೆ.  ಸಂಪೂರ್ಣ ಮಣ್ಣಿನಿಂದ ಮಾಡಿದ ಮತ್ತು ಉದರದಲ್ಲಿ ಸಸ್ಯ ಸಂಕುಲವನ್ನಿಟ್ಟುಕೊಂಡು ಅದನ್ನು ಪಸರಿಸುವ ಬೀಜದುಂಡೆ ಗಣೇಶಮೂರ್ತಿಯನ್ನು, ಪ್ರತಿಷ್ಠಾಪಿಸುವ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

Advertisement

ಶಾಲ್ಮಲಾ ನದಿ ತಟದ ಕೊಳವೆಬಾವಿಗಳಲ್ಲಿ ಕೊಳಚೆ ನೀರು ಬರುತ್ತಿರುವುದು ದೇವರ ದೇವ ಮಹಾದೇವನ ಪುತ್ರ ಗಣಪತಿಯ ಶಾಪದಿಂದ ಎಂಬ ಸತ್ಯ ಧಾರವಾಡದ ಪರಿಸರ ಪ್ರೇಮಿಗಳಿಗೆ ಗೊತ್ತಾಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಧೋ ಎಂದು ಸುರಿಯುವ ಧಾರವಾಡದ ಮಳೆಯ ನೀರು ಅತ್ತಿಕೊಳ್ಳ, ಛೋಟಾ ಮಹಾಬಲೇಶ್ವರ ಬೆಟ್ಟ ಸೇರಿದಂತೆ ಏಳು ಗುಡ್ಡ ಮತ್ತು ಏಳು ಕೆರೆಗಳ ಮಧ್ಯೆ ಸಂಗ್ರಹವಾಗಿ, ಹೆಚ್ಚಾಗಿದ್ದೆಲ್ಲವೂ ಹಳ್ಳಕೊಳ್ಳಗಳಲ್ಲಿ ಸದ್ದು ಮಾಡುತ್ತಲೇ ಜಾರುತ್ತಿದ್ದ ಆ ದಿನಗಳನ್ನು ಇವರೆಲ್ಲರೂ ನೋಡಿದ್ದವರೇ. ಅದಕ್ಕೇ ಇತ್ತೀಚಿನ ವರ್ಷಗಳಲ್ಲಿ ಧಾರವಾಡ ಕಾಂಕ್ರೀಟ್‌ ಕಾಡಾಗುತ್ತಿರುವುದನ್ನು ಇವರ್ಯಾರು ಸಹಿಸಿಕೊಳ್ಳುತ್ತಲೇ ಇಲ್ಲ.

ಒಂದು ಕಾಲದಲ್ಲಿ ಹಚ್ಚ ಹಸುರಿನ ಪ್ರಕೃತಿ, ನೂರಾರು ಕೆರೆ-ಕಟ್ಟೆಗಳಿಂದ ಆವೃತ್ತವಾಗಿ ನಳನಳಿಸುತ್ತಿದ್ದ ಧಾರವಾಡದ ಪ್ರಕೃತಿ ಸೊಬಗು ಎಲ್ಲಿ ಹೋಯಿತು? ಎಂದು ಮಮ್ಮಲ ಮರುಗುವ ನಿವೃತ್ತ ಪ್ರಾಧ್ಯಾಪಕರ ದಂಡೇ ಇಲ್ಲಿದೆ.  ಅವರೆಲ್ಲರೂ ತಾವು ಅಧ್ಯಕ್ಷತೆ ವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಊರಿನ ಪರಿಸರ ಸೌಂದರ್ಯವನ್ನು ಯುವ ಪೀಳಿಗೆಯ ಮುಂದಿಟ್ಟು, ಇದೀಗ ಧಾರವಾಡ ಅಧೋಗತಿಗೆ ಹೋಗಿದ್ದನ್ನು ಪ್ರಸ್ತಾಪಿಸುತ್ತಲೇ ಇದ್ದಾರೆ.

ರಸ್ತೆಯ ಗಾತ್ರ ದೊಡ್ಡದಾಗುತ್ತಿದ್ದಂತೆ ಪಕ್ಕದಲ್ಲಿದ್ದ ದೈತ್ಯ ವೃಕ್ಷಗಳು ಬಲಿ ಬೀಳುತ್ತಿವೆ. ಮಳೆರಾಯನೋ ಬರಗಾಲದ ಸಂಧಿಯಲ್ಲಿ ನುಗ್ಗಿಕೊಂಡು ಇಲ್ಲಿಗೆ ತಲುಪುವಷ್ಟೊತ್ತಿಗೆ ವಾಯುದೇವರ ಅವಕೃಪೆಯಿಂದ ತೂರಿಕೊಂಡು ಸಾಗಿ, ಸವದತ್ತಿಯ ಎಲ್ಲಮ್ಮನ ಗುಡ್ಡದ ತುದಿಗೆ ಕೊಂಚ ಬಡೆದು ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಿಗೆ ಸೇರಿ ಬೇಡುತ್ತಿದೆ. “ಹಿಂಗಾದ್ರ ಹೆಂಗ್ರಿಪಾ…?’ ಈ ಪ್ರಶ್ನೆ ಎಲ್ಲಾ ರೈತರದ್ದಾಗಿದೆ.

ಧಾರವಾಡದ ತಲೆದಿಂಬಿನಂತಿರುವ ಕೆಲ್ಲ ಕಟ್ಟಿದ ಕೆಲಗೇರಿ ಕೆರೆ ಪಕ್ಕದಲ್ಲಿಯೇ ಪಶುಪಾಲನೆ ಮಾಡೋ ಗೌಳಿಗರ ಕಥೆನೂ ಅದೇ. ಅವರದ್ದು ಒಂದೇ ಪ್ರಶ್ನೆ ? ಈ ಗಣಪತಿ ದೇವ್ರ ಕೆಲ್ಸಾ, ನಮ್ಮ ಹಸು ಎಮ್ಮೆ ಸಾಯಿಸೋದಾ ? ನೋಡ್ರಿ,  ಏನಿಲ್ಲಾ ಅಂದ್ರು ಎರಡು ಸಾವಿರ ದೇಸಿ ಹಸುಗಳು, ಸಾವಿರ ಎಮ್ಮೆಗಳು ವರ್ಷಪೂರ್ತಿ ಹೊಟ್ಟೆತುಂಬಾ ಹುಲ್ಲು ಮೇಯ್ದರೂ, ಇನ್ನೂ ಮುಗಿತೀರಲಿಲ್ಲ ಈ ಕೆರೆಯ ಅಂಗಳ ಮತ್ತು ಸುತ್ತಲಿನ ಹುಲ್ಲುಗಾವಲದಲ್ಲಿನ ಮೇವು. ಬಿದ್ದ ಮಳೆ ನೀರು ದೈತ್ಯ ಕೆರೆ ಸೇರಿಕೊಂಡ್ರೆ ವರ್ಷಪೂರ್ತಿ ದನಕರುಗಳಿಗೆ ಕುಡಿಯೋಕ್ಕೆ ಸಾಕಾಗತಿತ್ತು. ಹಿಂತಾ ಒಳ್ಳೆ ಜಾಗಕ್ಕೆ ಬರೋ ಗಣಪತಿ ಮೂರ್ತೀನ ಬ್ಯಾಡ್‌ ಅನ್ನೋದು ಹ್ಯಾಂಗ್‌..ನಿಲ್ಸೊàದು ಹ್ಯಾಂಗ ? ಅಂತಾ ಪ್ರಶ್ನೆ ಮಾಡಿದ್ದು, ಕೆಲಗೇರಿ ನಿವಾಸಿಯಾದ ಮಂಜುನಾಥ ಹಿರೇಮಠ.

Advertisement

ದನಾ ಕಾಯೋ ಕರೆಪ್ಪನಿಗೆ ಸಿಟ್ಟಿನಿಂದ ಹೇಳುತ್ತಾನೆ;  ಹತ್ತು ವರ್ಷಗಳಿಂದ ಈ ಕೆಲಗೇರಿ ಕೆರೆಗೆ ಗಣೇಶಪ್ಪಗಳು ಹಿಂಡು ಹಿಂಡಾಗಿ ಬಂದು ಬೀಳ್ತಾವರೀ. “ಬಿದ್ದರೆ ಬೀಳಲಿ ಪಾ… ಇವರೆಲ್ಲ ನಮ್ಮೂರಿನ ಗಣಪ್ಪಗಳಂಗ ನೀರಿನ ಜೊತಿ ಕರಗಿ ಹೋಗೋದೇ ಇಲ್ಲ. ಅಲ್ಲೇ ನೋಡ್ರಿ, ಮೂರು ವರ್ಷದ ಹಿಂದ ಬಿದ್ದ ಗಣಪತಿಗಳು ಇನ್ನೂ ಹಂಗೇ ಆದಾವು. ವರ್ಷಾಂಗಟಲಿ ಅವರು ನೀರನ್ಯಾಗ ನೆನೆಯೋದೇ ಇಲ್ಲ. ಸಾಲದ್ದಕ್ಕ ಅವರು ತಮ್ಮ ಮೈ ಕೈಗೆ ಮೆತ್ತಿಕೊಂಡ ಬಣ್ಣ, ಮಿಂಚು, ಎಲ್ಲನೂ ಆ ಕೆರೆ ನೀರಾಗ ಬಿಟ್ಟು ಬಿಡ್ತಾರ’.

“ನೋಡ್ರಿ… ನಿಮಗ ಬೇಕಾದ್ರ ಲೆಕ್ಕಾ ಕೋಡ್ತೇನೆ. ಹತ್ತ ವರ್ಷದಾಗ ಹನ್ನೆರಡು ಆಕಳಾ ಸತ್ತು ಹೋಗ್ಯಾವ. ಹಸುಗೂಸಿನಂತಾ ಕರುಗಳು ಚೆಂಗ್‌ ಅಂತಾ ನೆಗೆದಾಡಿದ್ದವು. ಈ ನೀರ ಕುಡಿದು ಬ್ಯಾ..ಗೊಟಕ್‌.. ಅಂದಾವು. ಮೀನು, ಮೊಸಳಿಮರೀ, ಹಾವು, ಏಡಿ, ಪಕ್ಷಿ ಎಲ್ಲಾನು ಸತ್ತ ಬಿದ್ದಿದ್ದು ನಾನ ಕಣ್ಣಾರೇ ನೋಡೇನಿ. ಇಂತಾ ಶ್ಯಾಪಾ ಕೊಡೋ ಆ ಗಣಪತಿ ನಮ್ಮೂರಿಗೆ ಯಾಕ ಬೇಕು ? ನಮ್ಮೂರಾಗ ಕಂಬಾರು,ಬಡಗ್ಯಾರು ಮಾಡೋ ಮಣ್ಣಿನ ಗಣಪತಿ ಇಟ್ರ ಇವ್ರಿಗೇನು ಗಣಪತಿ ಅಪ್ಪಾ ಶಿವಾ ಬ್ಯಾಡ್‌ ಅಂತಾನು ?’ ಅನ್ನೋದು ಕರೆಪ್ಪನ ಬಂಡಾಯದ ಪ್ರಶ್ನೆ.

ಈ ಎಲ್ಲರ ಇಂತಹ ಹತ್ತಾರು ತೊಂದರೆಗಳಿಗೆ ಕೊಂಚನಾದ್ರು ಪರಿಹಾರವೇ ಇಲ್ಲವೆ ಎಂದು ಯೋಚಿಸಿದಾಗ ಧಾರವಾಡದ ಪರಿಸರ ಪ್ರಿಯ ಜನರಿಗೆ ಹೊಳೆದದ್ದಿಷ್ಟು; ಗಣೇಶನ ಹೊಟ್ಟೆಗೆ ಮೋದಕ ಹಾಕುವ ಬದಲು ಬೀಜದ ಉಂಡೆ ಹಾಕುವುದು!  ಅಂದ್ರೆ ಗಣೇಶ ಹುಟ್ಟುವಾಗಲೇ ಆತನ ಹೊಟ್ಟೆಯಲ್ಲಿ ಬೀಜದುಂಡೆ ಇಟ್ಟು. ಆತನ ವಿಸರ್ಜನೆಯಿಂದ ಎಲ್ಲೆಂದರಲ್ಲಿ ಬೀಜಗಳು ಹರಿದು ಹೋಗಿ ಗಿಡ, ಹೂವು..ಬಳ್ಳಿ ಹುಟ್ಟಿ, ಒಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವುದಕ್ಕೆ ಈ ವ್ಯವಸ್ಥೆ ಮಾಡಿಕೊಳ್ಳುವುದು. ಇದರ ನೇತೃತ್ವದ ವಹಿಸಿದ್ದು ಪರಿಸರ ಸ್ನೇಹಿ ಗಣೇಶ
ಮೂರ್ತಿ ನಿರ್ಮಿಸುವ ಕೆಲಗೇರಿ ನಿವಾಸಿ ಮಂಜುನಾಥ ಹಿರೇಮಠ.

ಹುಬ್ಬಳ್ಳಿ-ಧಾರವಾಡದಲ್ಲಿ ಸಾರ್ವಜನಿಕ ಗಣೇಶೋತ್ಸವ ಶತಮಾನಗಳಿಂದ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನಡೆದುಕೊಂಡು ಬಂದಿದೆ. ಮನೆ ಮನೆಯಲ್ಲಿ ಮಾತ್ರವಲ್ಲ, ಗಲ್ಲಿ ಗಲ್ಲಿಯಲ್ಲಿ ಪರಸ್ಪರ ಜಿದ್ದಿಗೆ ಬಿದ್ದು ಯುವಕ ಸಂಘಟನೆಗಳು !ಗಜಾನನೋತ್ಸವ ಸಮಿತಿಗಳು ಗಣೇಶನ ಹಬ್ಬ ಮಾಡುತ್ತಿವೆ. ಹುಬ್ಬಳ್ಳಿ-ಧಾರವಾಡದಲ್ಲಿಯೇ ಅಂದಾಜು ಸಾವಿರಕ್ಕೂ ಅಧಿಕ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗುತ್ತಿವೆ.

ಈ ಪೈಕಿ ಶೇ.70ರಷ್ಟು ಗಣೇಶ ಮೂರ್ತಿಗಳು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ (ಪಿಓಪಿ) ನಿರ್ಮಿಸಿದ್ದು. ಪ್ರತಿ ವರ್ಷ ಅಂದಾಜು 55 ಟನ್‌ನಷ್ಟು ಪಿಓಪಿ ಅವಳಿ ನಗರದ ಸುತ್ತಲಿನ ಕೆರೆಕಟ್ಟೆ, ಜಲಮೂಲಗಳಲ್ಲಿ ಸೇರಿಕೊಳ್ಳುತ್ತಿದೆ.

ಇದರ ದುಷ್ಪರಿಣಾಮದಿಂದ ಕೆರೆಕಟ್ಟೆಗಳು, ಸಣ್ಣ ಸಣ್ಣ ಜಲಮೂಲಗಳು ಸಂಪೂರ್ಣ ಕಲ್ಮಶಗೊಂಡಿವೆ. ಗಣೇಶನ ಹಬ್ಬ ಇದೀಗ ಪರಿಸರದ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವ ಹಂತಕ್ಕೆ ಬಂದಿದೆ. ಇದು ಪಿಓಪಿ ಕಥೆಯಾದರೆ, ಈ ವರ್ಷ ಮಣ್ಣಿನಂತೆಯೇ ಕಾಣುವ ರಾಸಾಯನಿಕ ಬಳಕೆ ಮಾಡಿದ ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ, ವಿವಿಧ

ಭಾಗಗಳಿಂದ ರೆಡ್‌, ಗ್ರೀನ್‌, ವೈಟ್‌ ಮತ್ತು ಬ್ಲಾಕ್‌ ಆಕ್ಸೆಡ್‌ ಬಳಸಿ ತಯಾರಿಸಿದ, ಮಣ್ಣಿನ ಗಣಪತಿಗಳು ಮಾರುಕಟ್ಟೆಗೆ ಬರುತ್ತಿವೆ. ಇದನ್ನರಿತ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ, ಪಿಓಪಿ ಗಣೇಶನಿಗೆ ಈ ಬಾರಿ ಅವಕಾಶ ನೀಡಿಲ್ಲ. ಆದರೂ ಶೇ.60 ರಷ್ಟು ಮಣ್ಣು ಮತ್ತು ಶೇ.40 ರಷ್ಟು ಪಿಓಪಿ ಬಳಸಿ ವಿವಿಧ ಆಕ್ಸೈಡ್‌ಗಳನ್ನು ಹಾಕಿ ಮಣ್ಣಿನ ಗಣೇಶ ಎಂದು ಬಿಂಬಿಸುವ ಯತ್ನವನ್ನು ಪಿಓಪಿ ಮಾಫಿಯಾ ಮಾಡುತ್ತಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಡಿದ ಅಂದಾಜಿನಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 890 ಸಾರ್ವಜನಿಕ ಗಣೇಶಮೂರ್ತಿಗಳು ಪ್ರತಿಷ್ಠಾಪನೆಗೊಂಡರೆ, ಜಿಲ್ಲೆಯ ಗ್ರಾಮೀಣ ಪ್ರದೇಶಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಹಾಗೂ ಜಿಲ್ಲೆಯ ಮನೆಗಳಲ್ಲಿ  2 ಲಕ್ಷದಷ್ಟು ಮನೆ ಗಣೇಶಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿವೆ. ಇದು ಕೋಟ್ಯಂತರ ರೂ.ವಾಣಿಜ್ಯ ವಹಿವಾಟು ಆದರೂ ಕೂಡ, ಕಳೆದ ಒಂದು ದಶಕದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಪರಿಸರದ ಮೇಲೆ ಮಾಡಿರುವ ಹಾನಿಯನ್ನು ಸರಿಪಡಿಸುವುದಕ್ಕೆ ದಶಕಗಳೇ ಬೇಕಾಗಬಹುದು.

ಕೆಲಗೇರಿ ಕೆರೆಯ ಪಕ್ಕದಲ್ಲೇ ವಿಸರ್ಜನಾ ವೇದಿಕೆ 
ಕೆಲಗೇರಿಯ ಗಣೇಶೋತ್ಸವ ಮಹಾಮಂಡಳದ ಪದಾಧಿ ಕಾರಿಗಳ ಸಹಯೋಗದಲ್ಲಿ, ಕೆರೆ ಪಕ್ಕದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಟಾರ್ಪಾಲಿನ್‌ ಹೊದಿಕೆ ಹಾಸಿ, ನೀರು ಬಿಟ್ಟು, ಅಕ್ಕ-ಪಕ್ಕದ ಸುಮಾರು 5 ಸಾರ್ವಜನಿಕ ಗಣಪತಿಗಳು ಹಾಗೂ 500ಕ್ಕೂ ಹೆಚ್ಚು ಮನೆಗಳಲ್ಲಿ ಪ್ರತಿಷ್ಟಾಪಿಸಲಾದ ಗಣೇಶ ಮೂರ್ತಿಗಳ ಪರಿಸರ ಸ್ನೇಹಿ ವಿಸರ್ಜನೆಗೆ ಯೋಜಿಸಲಾಗಿದೆ. ಪಕ್ಕದ ಕೆರೆಯಲ್ಲಿ ಈ ಬಾರಿ ಯಾರೂ ವಿಸರ್ಜಿಸುವಂತಿಲ್ಲ. 2-3 ದಿನಗಳಲ್ಲಿ ಮೂರ್ತಿಗಳು ಸಂಪೂರ್ಣ ಕರಗುವುದರಿಂದ, ಆ ಫಲವತ್ತಾದ ಮಣ್ಣನ್ನು ಮನೆಗಳಿಗೆ ಕೊಂಡೊಯ್ದು ಗಿಡಗಳಿಗೆ ಹಾಕಿಕೊಳ್ಳಲು, ಉಳಿದ ಮಣ್ಣು ಹೊಲಕ್ಕೆ ಹೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಪೂಜೆಗೆ ಬಳಸಿದ ಹೂವು, ಮಾಲೆ, ಪತ್ರಿ, ಹಣ್ಣು ಜಲ ಕೂಡ ಸಮರ್ಪಕ ವಿಸರ್ಜನೆಗೆ ಪಕ್ಕದಲ್ಲಿಯೇ ಪ್ರತ್ಯೇಕ ಸಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮನೆ-ಮನೆಗಳಲ್ಲಿ ಬಕೆಟ್‌ನಲ್ಲಿ ನೀರು ತುಂಬಿಸಿ, ಪ್ರಾಣ ಪ್ರತಿಷ್ಟಾಪನೆ ಮಾಡಿ, ಪೂಜೆಗೈದ ಮೂರ್ತಿಗಳನ್ನು ವಿಸರ್ಜಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಹಾಗೆಯೇ, ಆ ಮಣ್ಣನ್ನು ಮನೆ ಅಂಗಳದ ತೆಂಗಿನ ಮರ ಅಥವಾ ಹೂ ಕುಂಡಗಳಿಗೂ ಹಾಕಿಕೊಳ್ಳಬಹುದು ಎನ್ನುತ್ತಾರೆ ಮಂಜುನಾಥ ಹಿರೇಮಠ. “ಧಾರವಾಡ ದಾರಿ ತೋರಿಸ್ತು…. ಎಂಬ ಮಾತಿದೆ. ಪರಿಸರ ಸ್ನೇಹಿಯಾಗಿ, ಪಟಾಕಿ ಮತ್ತು ಡಾಲ್ಬಿ ಸೌಂಡ್‌ ಸಿಸ್ಟಮ್‌ ಅಬ್ಬರವಿಲ್ಲದೇ, ತಾಳಿಕೆ ಮತ್ತು ಬಾಳಿಕೆ ಬರುವಂತೆ ಪೂಜಿತ ಮಣ್ಣಿನ ಮೂರ್ತಿಗಳ ಪರಿಸರ ಸ್ನೇಹಿ ವಿಸರ್ಜನೆಗೆ ಇಲ್ಲಿನ ಕೆಲ ಸುಮನಸ್ಸುಗಳು ಮುಂದಾಗಿವೆ. ಬೀಜ ಗಣೇಶ ಅರಿವಿನ ಸಸಿ ಆಚರಕರಲ್ಲಿ ಮೊಳಕೆಯೊಡೆಸಿದರೆ ಆಚರಣೆಗೂ ಒಂದರ್ಥ ಬಂದೀತು. ನಾಡವ್ಯಾಪಿಯಾಗಿ ಪಸರಿಸೀತು ಎಂಬ ಸದಾಶಯ.

ನೇಚರ್‌ ರಿಸರ್ಚ್‌ ಸೆಂಟರ್‌ನ ಎಂ.ಜಿ.ಹಿರೇಮಠ, ವನ್ಯಜೀವಿ ಗೌರವ ಕ್ಷೇಮ ಪಾಲಕ ಸಂಸ್ಥೆಯ ಪ್ರೊ|ಗಂಗಾಧರ ಕಲ್ಲೂರ, ಕ್ರೀಯಾಶೀಲ ಗೆಳೆಯರ ಬಳಗದ ಮುಕುಂದ ಮೈಗೂರ,ಗ್ರೀನ್‌ ಆರ್ಮಿ ಸಂಸ್ಥೆಯ ಪ್ರಕಾಶ ಗೌಡರ ಮತ್ತು ಹರ್ಷವರ್ಧನ ಶೀಲವಂತರ  ಅವರುಗಳು ಈ ಪರಿಸರ ಕಾಳಜಿಯ ವಿಚಾರವನ್ನು ಬೆಂಬಲಸಿ ಧಾರವಾಡ ಜಿಲ್ಲೆಯಲ್ಲಿ ಮಣ್ಣಿನ ಮತ್ತು ಬೀಜ ಗಣೇಶೋತ್ಸವ ಆಚರಣೆಗೆ ಜಾಗೃತಿ ಮಾಡುತ್ತಿದ್ದಾರೆ. ಎಲ್ಲವೂ ಅಧೋಗತಿಗೆ ಇಳಿದಾಗ, ಮತ್ತೆ ಉತ್ತಮವಾದದನ್ನು ಸ್ಥಾಪಿಸಲು ಒಂದು ಹಣತೆ ಸಿದ್ಧವಾಗುವಂತೆ ಧಾರವಾಡದ ಪರಿಸರ ಪ್ರೇಮಿಗಳು ಇದೀಗ ಪರಿಸರ ಸ್ನೇಹಿ ಗಣೇಶೋತ್ಸವದೊಂದಿಗೆ ಸಸಿನೆಟ್ಟು ಪೋಷಿಸುವ ಆಧಾರ ಲಿಂಕ್‌ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಮಣ್ಣು ಮತ್ತು ಬೀಜ ಗಣೇಶ 

ಬೀಜ ಗಣಿತ ಎಂದರೆ ಎಲ್ಲರಿಗೂ ಗೊತ್ತು, ಈ ಬೀಜ ಗಣಪತಿ ಅಂದ್ರೇ ಏನು ? ಎಂಬ ಪ್ರಶ್ನೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸುವ ಪ್ರಸಿದ್ಧ ಕಲಾವಿದ ಕೆಲಗೇರಿಯ ಮಂಜುನಾಥ ಹಿರೇಮಠ ಹೊಸ ಅರ್ಥ ಕೊಟ್ಟಿದ್ದಾರೆ. ಅವರು ಈ ಮೊದಲು ಸಸ್ಯ ಸಂಕುಲವನ್ನು ಹೆಚ್ಚಿಸಲು ನೇಚರ್‌ ರಿಸರ್ಚ್‌ ಸೆಂಟರ್‌ ಸೇರಿದಂತೆ ಕೆಲವು ಪರಿಸರ ಸ್ನೇಹಿ ಸಂಘಟನೆಗಳ ಜೊತೆಗೆ ಮಣ್ಣಿನಿಂದ ಸಿದ್ಧಗೊಳಿಸಿದ ಬೀಜದ ಉಂಡೆಗಳನ್ನು ಮಾಡಿ ಅವುಗಳನ್ನು ಜಲಮೂಲ ಪ್ರದೇಶಗಳಲ್ಲಿ, ಹಳ್ಳ ಕೊಳ್ಳದ ಅಂಚಿನಲ್ಲಿ ಎಸೆದು ಬಂದಿದ್ದರು.

ಇದೀಗ ಗಣೇಶನಲ್ಲೂ ಒಂದಿಷ್ಟು ಬೀಜ ಹಾಕಿಟ್ಟು ಅದನ್ನು ಸಾರ್ವಜನಿಕವಾಗಿಯೇ ಉದ್ಯಾನವನ, ಮನೆಯಂಗಳದಲ್ಲಿಯೇ ವಿಸರ್ಜಿಸಿ ಆ ಮಣ್ಣನ್ನು ಉದ್ಯಾನಕ್ಕೆ ಹಾಕಿ ಬಿಟ್ಟರೆ ಆಯಿತು. ಅಲ್ಲಿ ಆ ಬೀಜಗಳು ಬೆಳೆಯುತ್ತವೆ ಎಂಬುದು ಅವರ ಕಲ್ಪನೆ. ಬೀಜದುಂಡೆ ಪ್ರಯೋಗದ ಮುಂದುವರೆದ ಭಾಗವಾಗಿ, ಈ ಬಾರಿಯ ಗಣೇಶೋತ್ಸವದಲ್ಲಿ “ಬೀಜ ಗಣಪತಿ ಪ್ರತಿಷ್ಟಾಪನೆ (ಸೀಡ್‌ ಐಡೋಲ್‌) ಆಂದೋಲನಕ್ಕೆ ಮುನ್ನುಡಿ ಬರೆದಿದ್ದಾರೆ. ಅಂದರೆ, ತಮ್ಮ ಮನೆಯ ದೇವರಾಗಿದ್ದ ಗಣೇಶನ ಹೊಟ್ಟೆಯಿಂದ ಬಂದ ಒಂದು ಸಸಿಯನ್ನು ಎಲ್ಲರೂ ಭಕ್ತಿಯಿಂದ ತಮ್ಮ ಮನೆಯಂಗಳದಲ್ಲೋ, ಹಿತ್ತಲಲ್ಲೊ ನೆಟ್ಟರೆ, ಪರಿಸರ ರಕ್ಷಣೆ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಎನ್ನುವುದು ಮಂಜುನಾಥ ಹಿರೇಮಠರ ಪರಿಕಲ್ಪನೆ.

ಇದಕ್ಕೆ ಕಳೆದ ವರ್ಷ ಧಾರವಾಡದ ಸುಭಾಷ ರಸ್ತೆಯ ಗಣೇಶ ಮಂಡಳಿ ಇವರಿಗೆ ಸಾಥ್‌ ನೀಡಿ, ಮಾರುಕಟ್ಟೆಯಲ್ಲಿಯೇ ದೊಡ್ಡ ನೀರಿನ ಕೊಪ್ಪರಿಗೆಯನ್ನು ಇರಿಸಿ ಸಾರ್ವಜನಿಕವಾಗಿಯೇ ಮಣ್ಣಿನಿಂದ ನಿರ್ಮಿಸಿದ್ದ ಗಣೇಶನನ್ನ ವಿಸರ್ಜಿಸುವ ಪ್ರಯೋಗ ಮಾಡಿ ಅದರಲ್ಲಿ ಯಶಸ್ವಿಯಾಗಿದೆ. ಇದರಿಂದ ಮಂಡಳಿಗೆ 1.5 ಲಕ್ಷ ರೂ. ಹಣ ಕೂಡ ಉಳಿದಿದೆ. ಇದೀಗ ಈ ವರ್ಷ 108 ಇಂತಹ ಸಾರ್ವಜನಿಕ ಗಣೇಶಮೂರ್ತಿಯನ್ನ ಅಪ್ಪಟ ಮಣ್ಣಿನಿಂದ ನಿರ್ಮಿಸಿರುವ ಅವರು, ಇವರು ಈ ಗಣೇಶನಲ್ಲಿ ಬೀಜದುಂಡೆ ಇಡುತ್ತಿದ್ದಾರೆ. ಆ ಮಣ್ಣನ್ನು ಗಣೇಶ ಹಬ್ಬಕ್ಕೆ ಚಂದಾ ಕೊಟ್ಟವರ ಮನೆಗೆ ಮರಳಿಸಿ, ಅದರಲ್ಲಿ ಒಂದಿಷ್ಟು ಬೀಜ ಇರಿಸುವ ಹೊಸ ಕಲ್ಪನೆಯನ್ನ ಮಾಡಿದ್ದಾರೆ.

ಬಸವರಾಜ್‌ ಹೊಂಗಲ್‌ 

Advertisement

Udayavani is now on Telegram. Click here to join our channel and stay updated with the latest news.

Next