ಭಾರತೀನಗರ: ಕಳೆದ ಮೂರು ವರ್ಷಗಳಿಂದಲೂ ಕೊರೊನಾದಿಂದಾಗಿ ಕುಂಬಾರರು ತಯಾರಿಸಿದ ಗಣಪತಿ ಮೂರ್ತಿಗಳು ಮಾರಾಟವಾಗದೇ, ಪೆಟ್ಟು ಬಿದ್ದರೆ, ಈಗ, ರಾಜಕೀಯ ಮುಖಂಡರು ಉಚಿತವಾಗಿ ಗಣಪನ ಮೂರ್ತಿಗಳನ್ನು ಹಂಚುತ್ತಿದ್ದು ಸಣ್ಣ ಪ್ರಮಾಣದ ತಯಾರಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಪ್ಲಾಸ್ಟಿಕ್, ಸಿಲ್ವರ್ ಪಾತ್ರೆಗಳಿಂದ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕಡಿಮೆಯಾಗಿದ್ದು ಹಲವರು ಕುಲಕಸುಬಗಳನ್ನೇ ಮರೆಯುತ್ತಿದ್ದಾರೆ. ಇನ್ನು ಗಣಪನ ಹಬ್ಬದಲ್ಲಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳೋಣವೆಂದರೂ ಮೂರ್ತಿಗಳ ಉಚಿತ ವಿತರಣೆ ಪೆಟ್ಟು ನೀಡಿದೆ.
ವ್ಯಾಪಾರವಾಗದೇ ಸಂಕಷ್ಟ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು ಹಲವು ರಾಜಕೀಯ ಮುಖಂ ಡರು ಗಣಪನ ಮೂರ್ತಿಗಳನ್ನು ಕಾರ್ಯಕರ್ತರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಇದರಿಂದಾಗಿ ಸಣ್ಣ ಪ್ರಮಾಣದ ಮೂರ್ತಿ ತಯಾರಕರಿಗೆ ವ್ಯಾಪಾರವಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಪ ಲಾಭ: ಇದಕ್ಕೆ ತಾಜಾ ಉದಾಹರಣೆ ಎಂದರೆ, ಮೆಣಸಗೆರೆ ಗ್ರಾಮದ ವೆಂಕಟೇಶ್‌ಶೆಟ್ಟಿ ಎಂಬವರು ವೃತ್ತಿಯಲ್ಲಿ ಕುಂಬಾರರಾದರೂ ಮಣ್ಣಿನ ಮಡಕೆಗಳನ್ನು ಕೇಳುವವರಿಲ್ಲದೇ, ಗಾರೆ ಕೆಲಸ ಮಾಡುತ್ತಿದ್ದರು. ಗಣಪತಿ ಹಬ್ಬ ಬಂತೆಂದರೆ, ಮೂರ್ತಿಗಳನ್ನು ತಯಾರಿಸುತ್ತಾರೆ. 2 ಅಡಿಯಿಂದ 8 ಅಡಿಯ ಮೂರ್ತಿಗಳನ್ನು ಪತ್ನಿಯೊಂದಿಗೆ ದಿನವಿಡೀ ತಯಾರಿಸುತ್ತಾರೆ. ವರ್ಷಕ್ಕೆ ಇವರು ಸುಮಾರು 100 ರಿಂದ 150 ಗಣಪತಿ ಮೂರ್ತಿಗಳನ್ನು ಮಾತ್ರ ತಯಾರು ಮಾಡುತ್ತಾರೆ. ಇವರು, ತಯಾರಿಸುವ ಗಣಪನ ಮೂರ್ತಿಗಳು ನೈಸರ್ಗಿಕವಾಗಿದ್ದು ಪರಿಸರಕ್ಕೂ ಯಾವುದೇ ಹಾನಿಯಿಲ್ಲ. ನೈಸರ್ಗಿಕ ಗಣಪತಿ ಮೂರ್ತಿಗಳ ಮಾರಾಟದಿಂದಲೇ ಬರುವ ಅಲ್ಪ ಲಾಭದಿಂದ ಬದುಕು ಕಟ್ಟಿಕೊಂಡಿದ್ದಾರೆ. ಮೂರ್ತಿ
ತಯಾರಕರಿಗೆ ಪುಕ್ಕಟ್ಟೆ ವಿತರಣೆ ಪೆಟ್ಟು : ಮುಂದಿನ ಏಳೆಂಟು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕೆಲವು ರಾಜಕಾರಣಿಗಳು, ಮುಖಂಡರು, ಸಮಾಜ ಸೇವಕರು ಕ್ಷೇತ್ರದಲ್ಲಿ ಗಣಪತಿ ಮೂರ್ತಿಗಳನ್ನು ಪುಕ್ಕಟ್ಟೆ ನೀಡಲು ಸಿದ್ಧತೆ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಗ್ರಾಮದವರು ಗಣಪತಿ ಮೂರ್ತಿಯನ್ನು ಕೂರಿಸಲು ಇಚ್ಚೆ ಪಡು ವಂತಹವರು ಹೆಸರು ನೋಂದಾಯಿಸಿ ಗಣಪತಿ ಮೂರ್ತಿಯನ್ನು ಪಡೆಯಬಹುದಾಗಿದೆ. ಒಂದು ಗ್ರಾಮದಲ್ಲಿ ಎಷ್ಟು ಗಣಪತಿಗಳನ್ನಾದರೂ ಕೂರಿಸಬಹುದು. ಜತೆಗೆ ಅರ್ಕೇಸ್ಟ್ರಾ ವ್ಯವಸ್ಥೆ ಮಾಡಿಕೊಡಲು ನಾಯಕರು ಮುಂದಾಗಿದ್ದಾರೆ. ಇಂತಹ ಸಂಸ್ಕೃತಿಗೆ ನಾವು ಜಾರಿಹೋಗುತ್ತಿದ್ದೇ ವೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳಿಂದ ಸಣ್ಣಕಲಾವಿದರಿಗೆ ದೊಡ್ಡಪೆಟ್ಟು ಬಿದ್ದು ವ್ಯಾಪಾರಕ್ಕೂ ಕಂಟಕವಾಗುತ್ತಿರುವುದು ಸುಳ್ಳಲ್ಲ.
ಪರಿಸರ ಸ್ನೇಹಿ ಗಣಪತಿಯನ್ನು ಕಳೆದ 3 ವರ್ಷಗಳಿಂದ ತಯಾರು ಮಾಡಲು ನನ್ನ ಪತ್ನಿಯೊಂದಿಗೆ ಮುಂದಾಗಿದ್ದೇನೆ. ಆದರೆ, ಕ್ಷೇತ್ರದಲ್ಲಿ ಕೆಲವು ನಾಯಕರು ಪ್ರತಿ ಗ್ರಾಮಗಳಿಗೂ ಉಚಿತವಾಗಿ ಗಣಪತಿಮೂರ್ತಿಗಳನ್ನು ನೀಡುತ್ತಿರುವುದರಿಂದ ನಮ್ಮಂತಹ ಸಣ್ಣ ಕಲಾವಿದರಿಗೆ ದೊಡ್ಡ ಪೆಟ್ಟು ಬೀಳುತ್ತಿದೆ.
– ವೆಂಕಟೇಶ್‌ಶೆಟ್ಟಿ, ಮೂರ್ತಿ ತಯಾರಕ
– ಅಣ್ಣೂರು ಸತೀಶ್