Advertisement

ಗಣೇಶ ಹಬ್ಬದಲ್ಲಿ ಮಾರ್ಗಸೂಚಿ ಪಾಲಿಸಿ : ಗಣೇಶೋತ್ಸವ ಸಮಿತಿಗಳ ಆಯೋಜಕರ ಸಭೆಯಲ್ಲಿ ಸಲಹೆ

09:41 AM Aug 27, 2022 | Team Udayavani |

ಮಂಗಳೂರು : ಸರಕಾರ ಹಾಗೂ ರಾಜ್ಯ ಹೈಕೋರ್ಟ್‌ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಈ ಬಾರಿಯ ಗಣೇಶ ಹಬ್ಬವನ್ನು ಸಂಭ್ರಮ ಹಾಗೂ ಸಡಗರಿದಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಜಿಲ್ಲೆಯ ಗಣೇಶೋತ್ಸವ ಸಮಿತಿಗಳ ಮುಖಂಡರಿಗೆ ಸಲಹೆ ನೀಡಿದರು.

Advertisement

ಜಿಲ್ಲಾಧಿಕಾರಿಯವರ ಕಚೇರಿ ಸಭಾಂ ಗಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಸಮಿತಿಗಳು ಆಯಾ ವ್ಯಾಪ್ತಿಯ ಪೊಲೀಸ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ. ಪಂ.ಗಳಲ್ಲಿ ಅನುಮತಿ ಪಡೆಯಬೇಕು, ಈ ಸಂದರ್ಭ ಸೌಹಾರ್ದತೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಬರಹಗಳ ಬ್ಯಾನರ್‌ ಅಥವಾ ಫ್ಲೆಕ್ಸ್‌ಗಳನ್ನು ಅಳವಡಿಸಬಾರದು, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಶುಭ ಕೋರುವ ಬ್ಯಾನರ್‌ ಅಥವಾ ಫ್ಲೆಕ್ಸ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ಮಳೆ ಹಾಗೂ ಗಾಳಿಗೆ ಹಾನಿಯಾಗದಂತಹ ಪೆಂಡಾಲ್‌ಗ‌ಳನ್ನು ಹಾಕಬೇಕು, ವಿದ್ಯುತ್‌ ಅವಘಡಗಳಾಗದಂತೆ ಎಚ್ಚರ ವಹಿಸಬೇಕು, ವಿದ್ಯುತ್‌ ಸಂಪರ್ಕ ಪಡೆಯಲು ತಾತ್ಕಾಲಿಕ ಅನುಮತಿ ಪಡೆಯಬೇಕು, ದೊಡ್ಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಕಡ್ಡಾಯವಾಗಿ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು, ಪೆಂಡಾಲ್‌ಗ‌ಳಲ್ಲಿ ಯಾವುದೇ ರೀತಿಯ ಅವಘಡಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಕೋಮು ಸಾಮರಸ್ಯದ ಮೇಲೆ ಪರಿಣಾಮ : ಮುನವ್ವರ್ ಫಾರೂಕಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

ಧ್ವನಿ ವರ್ಧಕಗಳನ್ನು ಬಳಸುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಮತ್ತು ನ್ಯಾಯಾಲಯದ ಆದೇಶದಂತೆ ರಾತ್ರಿ ಹತ್ತು ಗಂಟೆಯ ಅನಂತರ ಧ್ವನಿ ವರ್ಧಕಗಳನ್ನು ಬಳಸಬಾರದು, ವಿದ್ಯುತ್‌ ಅಲಂಕಾರ, ಬೆಳಕಿನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಆಯೋಜಕರು ಗಮನ ಹರಿಸಬೇಕು. ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್‌ ತಂತಿಗಳು ಅಥವಾ ಕೇಬಲ್‌ಗ‌ಳು ಇರದಿರುವ ಬಗ್ಗೆ ಖಚಿತ ಪಡಿಸಿಕೊಂಡ ಅನಂತರವೇ ಮೆರವಣಿಗೆ ನಡೆಸಬೇಕು ಎಂದು ಮಾಹಿತಿ ನೀಡಿದರು.

Advertisement

ಕೋವಿಡ್‌-19 ಸೋಂಕು ಪ್ರಕರಣಗಳು ಕಡಿಮೆ ಇದ್ದರೂ ಹಬ್ಬದ ಸಂದರ್ಭದಲ್ಲಿ ಎಚ್ಚರ ವಹಿಸಬೇಕು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಸೇರಿದಂತೆ ಪರಿಸರಕ್ಕೆ ಹಾನಿಯಾಗುವಂತಹ ವಿಗ್ರಹಗಳನ್ನು ಬಳಸಬಾರದು, ಶುದ್ಧ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಬಳಸುವಂತೆ ತಿಳಿಸಿದ ಅವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರಕಾರ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವ ಮೂಲಕ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಅವರು ಸಲಹೆ ನೀಡಿದರು.

ಜಿ.ಪಂ.ಸಿಇಒ ಡಾ| ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಭಗವಾನ್‌ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಕ್ಷು ಕುಮಾರ್‌ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಆಯೋಜಕರು ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next