ಮಡಿಕೇರಿ: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಕೆ.ಎಂ. ಗಣೇಶ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಜು. 27ರಂದು ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ನಗರಸಭೆಯ ಕಾಂಗ್ರೆಸ್ ಸದಸ್ಯ ರಾದ ಲೀಲಾ ಶೇಷಮ್ಮ ಕೂಡ ಪಕ್ಷಕ್ಕೆ ರಾಜಿನಾಮೆ ನೀಡಿ ಜೆಡಿಎಸ್‌ಸೇರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣೇಶ್, ಕಾಂಗ್ರೆಸ್ ಪಕ್ಷ ದಲ್ಲಿ ಜೀತದಾಳಿನಂತೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ನಾಯಕರ ವರ್ತನೆಯಿಂದ ಬೇಸತ್ತು ಪಕ್ಷಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದರು. 30 ವರ್ಷ ಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ದುಡಿದ ನನ್ನನ್ನು ಪಕ್ಷದ ನಾಯಕರು ಕಡೆಗಣಿಸಿ ದ್ದಾರೆ. ಹೋಗುವವರೆಲ್ಲ ಹೋಗಲಿ ಎಂದು ನಾಯಕರು ಹೇಳಿಕೆ ನೀಡುತ್ತಿದ್ದಾರೆ, ಈ ರೀತಿಯ ಹೇಳಿಕೆ ಗಳಿಂದ ಪಕ್ಷದಲ್ಲಿ ಯಾರೂ ಉಳಿಯುವುದಿಲ್ಲವೆಂದು ಅಭಿಪ್ರಾಯ ಪಟ್ಟ ಕೆ.ಎಂ. ಗಣೇಶ್, ಮತೀಯವಾದ ಮತ್ತು ಕೋಮುವಾದ ದಿಂದ ದೂರ ಉಳಿಯಬೇಕಾಗಿದ್ದ ಕಾಂಗ್ರೆಸ್‌ನಲ್ಲಿ ರಾತ್ರಿ ಒಂದು ಬೆಳವಣಿಗೆಯಾದರೆ, ಹಗಲಿನಲ್ಲೊಂದು ಬೆಳವಣಿಗೆ ಯಾಗುತ್ತಿರುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸಿಗರು ಅನೇಕರು ಬಿಜೆಪಿ ಮಂದಿಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಕೊಡಗು ಜಿಲ್ಲೆಯಲ್ಲಿ ಸರಕಾರದ ಅನುದಾನದಿಂದ ಬಿಜೆಪಿ ಪ್ರತಿನಿಧಿಗಳ ಕ್ಷೇತ್ರ ದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ಗಣೇಶ್ ಆರೋಪಿಸಿದರು.
ಕಾರ್ಯಕರ್ತರ ಮತ್ತು ಪಕ್ಷದ ಹಿತ ಕಾಯದ ನಾಯಕರುಗಳು ಕೇವಲ ಚುನಾವಣೆ ಸಂದರ್ಭ ಟಿಕೆಟ್‌ಗಾಗಿ ಹವಣಿಸುತ್ತಾರೆ. ಎಲ್ಲರೂ ಟಿಕೆಟ್ ಆಕಾಂಕ್ಷಿಗಳಾಗುತ್ತಿರುವುದರಿಂದ ಮತ್ತು ಹತ್ತರಲ್ಲಿ ಒಂಬತ್ತು ಮಂದಿ ಕಾಂಗ್ರೆಸಿಗರು ಕಾಂಗ್ರೆಸಿಗರನ್ನೇ ಸೋಲಿಸಲು ಮುಂದಾಗುತ್ತಿರುವುದರಿಂದ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ತಪ್ಪಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಅವರಿಗೆ ಟಿಕೆಟ್ ನೀಡುವುದಕ್ಕಾಗಿ ಶಿವು ಮಾದಪ್ಪ ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಡಲಾಗಿದೆ ಎಂದು ಕೆ.ಎಂ. ಗಣೇಶ್ ಟೀಕಿಸಿದರು.