Advertisement
ಗಣರಾಜ ಕುಂಬ್ಳೆ ಕನ್ನಡ ಪಂಡಿತರಾಗಿದ್ದ ಕೆ. ತಿರುಮಲೇಶ್ವರ ಭಟ್ ಮತ್ತು ಶಾರದಾ ದಂಪತಿಯ ಪುತ್ರನಾಗಿ ಕುಂಬ್ಳೆಯಲ್ಲಿ ಜನಿಸಿದ ಗಣರಾಜರಿಗೆ ಯಕ್ಷಗಾನದ ದಟ್ಟ ಹಿನ್ನೆಲೆಯಿದೆ. ವೇಷಧಾರಿ ಕೆ.ವಿ.ಸುಬ್ರಾಯ, ಅರ್ಥದಾರಿ ಅಧ್ಯಾಪಕ ಕೆ.ವಿ.ಗಣಪಯ್ಯ , ವೇಷಧಾರಿ ಮತ್ತು ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಸ್ತ್ರೀ ವೇಷಧಾರಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಇವರ ಸೋದರ ಮಾವಂದಿರು. ಉಪ್ಪಳ ಕೃಷ್ಣ ಮಾಸ್ತರ್ ನಾಟ್ಯಗುರು .
Related Articles
Advertisement
ಕುಂಬ್ಳೆ ಸುಂದರರಾಯರ ಬಗ್ಗೆ ಇವರು ಬರೆದಿರುವ “ಮಿಂಚುಮಾತಿನ ಯಕ್ಷ ‘ ಕೃತಿಯು ಕಾಂತಾವರ ಕನ್ನಡ ಸಂಘದಿಂದ ಪ್ರಕಟಗೊಂಡಿದೆ. ಜನಪದ ಹಾಡುಗಳ ಸಂಕಲನ “ಹಾಡುಗಳ ಮಣಿಸರ’ ಅರಳು ಮತ್ತು ಬಿರಿವ ಮೊಗ್ಗು ಕವನ ಸಂಕಲನ , ಪುಣ್ಯಕೋಟಿ ಸಾಮಾಜಿಕ ನಾಟಕ , ಮರಳು ಬಿಂದಿಗೆ ಪೌರಾಣಿಕ ನಾಟಕ , ಕಗ್ಗದೊಳಗಿನ ಸಗ್ಗ ಅಂಕಣ ಬರಹಗಳ ಸಂಕಲನ ಪ್ರಕಟಗೊಂಡಿದೆ .
ಪಾತಾಳ ವೆಂಕಟರಮಣ ಭಟ್ತೆಂಕು ಮತ್ತು ಬಡಗು ತಿಟ್ಟಿನ ಸ್ತ್ರೀ ವೇಷಧಾರಿಯಾಗಿ ಮೂರು ದಶಕಗಳ ಕಾಲ ರಂಗದಲ್ಲಿ ಮೆರೆದವರು ಪಾತಾಳ ವೆಂಕಟರಮಣ ಭಟ್ಟರು.ಕಬಕದ ಬೈಪದವಿನ ರಾಮಭಟ್ಟ ಮತ್ತು ಹೇಮಾವತಿ ದಂಪತಿಯ ಪುತ್ರರಾಗಿ 1933ರಲ್ಲಿ ಜನಿಸಿದ ಇವರು ಉಪ್ಪಿನಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಾಲ್ಯದ ಹಲವು ಸ್ಥಿತ್ಯಂತರಗಳ ನಡುವೆ ಕಲಾವಿದ ಮಾಣಂಗಾಯಿ ಕೃಷ್ಣ ಭಟ್ಟರ ಮೂಲಕ ಕಾಂಚನದಲ್ಲಿ ಸಂಗೀತ ಕಲಿಯಲು ಸೇರಿದರು. ಅದನ್ನು ಪೂರ್ಣಗೊಳಿಸದೆ 1955ರಲ್ಲಿ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಯಕ್ಷಗಾನ ನಾಟಕ ಸಭಾದಲ್ಲಿ ಸೂಪಜ್ಞನ ಕಾರ್ಯದೊಂದಿಗೆ ಸಣ್ಣ ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶ. ಆ ಮೇಳವು ಸ್ಥಗಿತಗೊಂಡಾಗ ಬಡಗಿನ ಸೌಕೂರು ಮೇಳಕ್ಕೆ ಸೇರಿ ಅಡುಗೆಯ ಕೆಲಸದೊಂದಿಗೆ ಪ್ರತಿದಿನದ ಪಾತ್ರಕ್ಕೆ ನಾಟ್ಯ, ಸಂಭಾಷಣೆ ಆಭ್ಯಾಸ ಮಾಡಿ ರಂಗದಲ್ಲಿ ಮೋಡಿ ಮಾಡಿದರು. ಇವರ ವೇಷದ ಸೊಬಗನ್ನು ಕಂಡ ಪೆರುವಡಿ ನಾರಾಯಣ ಭಟ್ಟರು 1957ರಲ್ಲಿ ಮೂಲ್ಕಿ ಮೇಳಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾಸ್ಟರ್ ವಿಠಲರ ಶಿಷ್ಯರಾಗಿ ಭರತನಾಟ್ಯ, ಶಿವ ತಾಂಡವ ನೃತ್ಯ, ಭಸ್ಮಾಸುರ ಮೋಹಿನಿ ನೃತ್ಯಗಳ ಪದಗತಿಯ ಅಭ್ಯಾಸ ಮಾಡಿದರು. ಇದರಿಂದ ಪಾತಾಳರ ಸ್ತ್ರೀ ಪಾತ್ರದ ನಿರ್ವಹಣೆಯಲ್ಲಿ ಹೊಸತನ ಪ್ರಾಪ್ತವಾಯಿತು. 1962ರಲ್ಲಿ ಸುರತ್ಕಲ್ ಮೇಳದಲ್ಲಿ ದೊಡ್ಡ ಸಾಮಗರ ಸಹಚರ್ಯ ಇವರ ಪಾತ್ರಗಳಿಗೆ ಇನ್ನಷ್ಟು ಮೆರುಗನ್ನು ನೀಡಿತು. 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಯಾಗಿ 18 ವರ್ಷಗಳ ತಿರುಗಾಟದಲ್ಲಿ ಶೇಣಿ, ಕುಂಬ್ಳೆ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡತೋಕ, ಚಿಪ್ಪಾರು ಇವರೊಂದಿಗೆ ಯಶಸ್ವಿಯಾಗಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಪಾತಾಳರದ್ದು. ಪ್ರಯೋಗ-ಆವಿಷ್ಕಾರ : ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ಪ್ರಯೋಗವು ಇವರಲ್ಲಿ ಯಕ್ಷಗಾನದ ಸ್ತ್ರೀ ವೇಷದ ಪರಿಷ್ಕಾರಕ್ಕೆ ಚಿಂತನೆಯನ್ನು ಮೂಡಿಸಿತ್ತು. ಡಿ.ವಿ.ಜಿ.ಯವರ ಅಂತಪುರ ಗೀತೆಯ ಓದಿನಿಂದ ಬೇಲೂರು ಶಿಲಾಬಾಲಿಕೆಯರ ಶಿಲ್ಪದಲ್ಲಿ ಮೂಡಿದ ಭಾವ-ಭಂಗಿ, ಮುದ್ರೆಗಳ ಬಗ್ಗೆ ಆಸಕ್ತಿ ಮೂಡಿ ಲಕ್ಷ್ಮಣ ಆಚಾರ್ಯರ ಸಹಕಾರದಿಂದ ಕ್ಷೇತ್ರ ಅಧ್ಯಯನ ನಡೆಸಿ ಬೇಕಾದ ಅಭರಣ, ವೇಷಭೂಷಣ, ಶಿರೋಭೂಷಣಗಳ ರೂಪುರೇಷೆ ಸಿದ್ಧಪಡಿಸಿಕೊಂಡರು. 1967-68ರ ಅವಧಿಯಲ್ಲಿ ಧರ್ಮಸ್ಥಳ ಮೇಳವು ಹೊಸತನದ ವ್ಯವಸ್ಥೆಗೆ ತೆರೆದುಕೊಂಡಾಗ ಇವರ ಕಲ್ಪನೆಗಳು ಸಾಕಾರಗೊಂಡವು. ವಿವಿಧ ಸ್ತ್ರೀ ಪಾತ್ರಗಳಿಗೆ ಬೇಕಾಗುವ ಆಹಾರ್ಯಗಳನ್ನು ಸಿದ್ಧಪಡಿಸಿ ಪರಂಪರೆಗೆ ತೊಡಕಾಗದೆ ರಂಗದಲ್ಲಿ ಪ್ರಯೋಗಿಸುವ ಮೂಲಕ ಸ್ತ್ರೀ ಪಾತ್ರಗಳ ಚಿತ್ರಣದಲ್ಲಿ ನೂತನ ಆಯಾಮವನ್ನು ತಂದರು. ಇವರ ಪುತ್ರ ಅಂಬಾ ಪ್ರಸಾದರು ಸ್ತ್ರೀ ವೇಷಾಧಾರಿಯಾಗಿ ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಉಪ್ಪಿನಂಗಡಿಯ ಪಾತಾಳದಲ್ಲಿ ಕೃಷಿ-ಆಧ್ಯಾತ್ಮಿಕ ಚಿಂತನೆಯಲಿ ತೊಡಗಿರುವ ವೆಂಕಟರಮಣ ಭಟ್ಟರು ನಿವೃತ್ತಿಯ ನಂತರ ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ತನ್ನ ಅನುಭವವನ್ನು ದಾಖಲಿಸಿದ್ದಾರೆ. 85ರ ಹರೆಯದ ಪಾತಾಳರು ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳಲ್ಲಿ ಈಗಲೂ ಉತ್ಸಾಹದಿಂದ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಆಕಾಡೆಮಿಯ ಜ್ಞಾನ-ವಿಜ್ಞಾನ ಪ್ರಶಸ್ತಿ, ಕರಾವಳಿ ಯಕ್ಷಗಾನ ಸಮ್ಮೇಳನದ ಗೌರವ ಪ್ರಶಸ್ತಿ, ಕ.ಸಾ.ಪ ಬೆಂಗಳೂರು ವತಿಯಿಂದ ಕರ್ನಾಟಕ ಶ್ರೀ ಪ್ರಶಸ್ತಿ, ಮಾಜಿ ರಾಷ್ಟ್ರಪತಿ ಆರ್.ವೆಂಕಟ್ರಾಮನ್‌ರಿಂದ ಮಣಿವಿಳಾ ಬಿರುದು ಇವರಿಗೆ ಸಂದಿದೆ. “ಯಕ್ಷಶಾಂತಲಾ’ ಅಭಿನಂದನಾ ಗ್ರಂಥ ಕಲಾಭಿಮಾನಿಗಳಿಂದ ಸಮರ್ಪಣೆಯಾಗಿದೆ. ಯಕ್ಷಗಾನದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರನ್ನು ವಾರ್ಷಿಕವಾಗಿ “ಪಾತಾಳ ಪ್ರಶಸ್ತಿ’ ನೀಡಿ ಗೌರವಿಸುವ ಪರಿಪಾಠವನ್ನು ನಡೆಸುತ್ತಿದ್ದಾರೆ. ದಿವಾಕರ ಆಚಾರ್ಯ