Advertisement

Ganesh Chathurthi; ಗಣೇಶ ಚತುರ್ಥಿಯೆಂಬ ಸಂಭ್ರಮ

03:55 PM Sep 17, 2023 | Team Udayavani |

ಭಾದ್ರಪದ ಶುಕ್ಲ ಪಕ್ಷ ಚೌತಿಯ ಸಡಗರಕ್ಕೆ ಊರೇ ವೇದಿಕೆಯಾಗಿತ್ತು. ಹೌದು ಗಣೇಶ ಚತುರ್ಥಿ ಬಂತೆಂದರೆ ಸಾಕು. ಕೆಲಸದ ನಿಮಿತ್ತ ದೂರ ಹೋದ ಅಣ್ಣಂದಿರು ಮರಳಿ ಊರಿಗೆ ಬಂದು ಹಬ್ಬವನ್ನು ಜತೆ ಜತೆಯಲ್ಲಿ ಆಚರಿಸು ವಾಗ ಆ ಆಚರಣೆಗೆ ಇನಷ್ಟು ಮೆರಗು ಸಿಗುತ್ತಿತ್ತು. ಮೋದಕ ಪ್ರಿಯ, ಮುದ್ದು ವಿನಾಯಕ, ಜಗದ ನಾಯಕನನ್ನು ಇಷ್ಟಾರ್ಥ ಸಿದ್ಧಿಗಾಗಿ ಜಪಿಸುವುದು. ಕೊನೆಗೆ ಭಕ್ತಿಯ ಭಾವದಿ, ಶಕ್ತಿಯ ಮೂಲದ, ಯುಕ್ತಿಯ ಕರುಣಿಸೋ ಮುಕ್ತಿ ದೇವನನ್ನು ಮೆರವಣಿಗೆಯ ಮೂಲಕ ಹತ್ತೂರ ಸುತ್ತಿಸಿ ಕೊನೆಗೆ ಜಲ ಸ್ತಂಭನ ಮಾಡುವ ತನಕ ಆದಿ ದೇವನನ್ನು ಕೊಂಡಾಡಿ ಮುಂದಿನ ವರ್ಷ ಇನ್ನಷ್ಟು ಹರುಷ ತರುವ ಹಬ್ಬ ಬರಲೆಂದು ಆಸೆಯ ಭಾವ ಕಿರಣವನ್ನು ಹೊತ್ತ ಕಣ್ಣುಗಳಿಂದ ಮನೆಗೆ ಹಿಂತಿರುಗುವುದು.

Advertisement

ಪ್ರತೀ ಹಬ್ಬ ಬಂದಾಗಲೂ ಒಂದೊಂದು ಹಳೆ  ನೆನಪುಗಳು  ಹೆಜ್ಜೆ ಹಾಕಲು ತೊಡಗುತ್ತದೆ. ಹಬ್ಬ ಇನ್ನೇನು ಸಮೀಪಿಸುತ್ತಿದ್ದಂತೆ ಚಕ್ಕುಲಿಯ ಘಮ ಮನೆ ತುಂಬಾ ಘಮಘಮಿಸುತ್ತಿತ್ತು. ಚೌತಿಯ ದಿನ ಮನೆಯಲ್ಲಿ ಮಾಡುವ ಹಲಸಿನ ಎಲೆಯ ಕೊಟ್ಟಿಗೆ ಬಾಯಲ್ಲಿ ನೀರೂರಿಸುತ್ತಿತ್ತು. ಬಗೆ ಬಗೆಯ  ಪದಾರ್ಥಗಳು ಕೂಡ ಈ ಸಾಲಿನಲ್ಲಿದೆ. ಔತಣ ಕೂಟವ ಸವಿಯುವ ಭಾಗ್ಯದ ಜತೆಗೆ ಹಬ್ಬದ ಹಿನ್ನಲೆಯನ್ನು ಅಜ್ಜಿಯಿಂದ ಕೇಳುವ ಸೌಭಾಗ್ಯ ನನ್ನದು.

ಈ ಶಿವ ತನಯನನ್ನು ನಾನಾ ದಿನಗಳಲ್ಲಿ ನಾವುಗಳೆಲ್ಲವೂ ಕೊಂಡಾಡುತ್ತೇವೆ. ಅದರಲ್ಲೂ ಚತುರ್ಥಿ ದಿನ ಮುದ್ದು ಗಣಪನನ್ನು ಊರ ದೇವಾಲಯದಲ್ಲಿ ಪ್ರತಿಷ್ಠಿಸಿ, ಅವನ ಸ್ತುತಿಸಿ, ಜಪಿಸಿ, ಮಾಡಿದ ಪಾಪವ ಕಳೆದು ಅವನ ಶರಣಾಗಲು  ಭಕ್ತರ ದಂಡೇ ಹರಿದು ಬರುತ್ತದೆ.

ಚೌತಿಯ ಮರುದಿನ ಗಣಪನನ್ನು ವಿಸರ್ಜನೆ ಮಾಡುವುದು ವಾಡಿಕೆ. ಈ ಸಮಯದಲ್ಲಿ ಅಯ್ಯೋ ಗಣೇಶ ಮೂರ್ತಿ ಇನ್ನೆರಡು ದಿನ ಇದ್ದರೆ ಒಳಿತಿತ್ತು. ಹೊಟ್ಟೆ ತುಂಬಾ ಅಪ್ಪಕಜ್ಜಾಯ, ಚಕ್ಕುಲಿ, ಮೋದಕಕ್ಕೆ ಇನ್ನೂ ಒಂದು ವರ್ಷ ಕಾಯಬೇಕೆನ್ನುವ ಚಿಂತೆಯ ಜತೆ ನಿನ್ನ ಮಣ್ಣಿನ ಮೂರ್ತಿ ಪ್ರತ್ಯಕ್ಷವಾಗಿ ಕಾಣುವ ಭಾಗ್ಯ ಇಲ್ಲವಲ್ಲ ಎಂಬ ಬೇಸರ ಒಂದೆಡೆ.

ಬಾಲ್ಯದಿಂದಲೂ  ನಿನ್ನ  ವೈಭೋಗವನ್ನು ಕಂಡ ಸೌಭಾಗ್ಯ ನನ್ನದು. ಗಣಪತಿ ಬಪ್ಪ  ಮೋರೆಯ, ಮಂಗಳಮೂರ್ತಿ ಮೋರೆಯ, ಮೋರೆಯಾರೆ ಬಪ್ಪ ಮೋರೆಯಾರೇ ಪದವ ಪಠಿಸಿ, ಅಲ್ಲಿ ನೋಡು ಗಣೇಶ ಇಲ್ಲಿ ನೋಡು ಗಣೇಶ ಎನ್ನುವ ಗಣಪನ ಸ್ತುತಿಸಿ ಅವನನ್ನು ಬೀಳ್ಕೊಡುತ್ತಿದ್ದೆವು. ನಮ್ಮೂರ ವಿನಾಯಕನ ಮೂರ್ತಿಯನ್ನು ಹತ್ತಿರದ ಚಿತ್ತಾರಿ ನದಿಯಲ್ಲಿ ವಿಸರ್ಜಿಸುತ್ತಿದ್ದೆವು. ದಾರಿ ಉದ್ದಕ್ಕೂ ಮಂಗಳವಾದ್ಯ, ನಾಸಿಕ್‌ ಬ್ಯಾಂಡ್‌ ಸದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿ, ಕುಣಿದು ಕುಪ್ಪಳಿಸಿ ಅವನನ್ನು ಬೀಳ್ಕೊಡುತ್ತಿದ್ದೆವು.

Advertisement

ಗಣೇಶನ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವಾಗ ಏನೋ ಒಂಥಾರ ಖುಷಿ. ಮನದಲ್ಲಿ ಭಕ್ತಿಯ ಸಾರ ಮೂಡುತ್ತೆ. ಏ ಗಣಪ  ನಿನ್ನ ಗುಣಗಾನ ಎಲ್ಲೆಡೆ ಮೊಳಗಲು ಕ್ಷಣಗಣನೆ ಆರಂಭವಾಗಿದೆ.

-ಗಿರೀಶ್‌ ಪಿ.ಎಂ.

ವಿ.ವಿ. ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next