Advertisement
ಬೆಂಗಳೂರು: ಅಹಿಂಸಾ ಚಳವಳಿ ಮೂಲಕ ಬ್ರಿಟೀಷರನ್ನು ಭಾರತದಿಂದ ಓಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೂ, ರಾಜಧಾನಿ ಬೆಂಗಳೂರಿಗೂ ಅವಿನಾಭಾವ ನಂಟಿದೆ. ತಮ್ಮ ಹೋರಾಟದ ದಿನಗಳಲ್ಲಿ ಉದ್ಯಾನನಗರಿಗೆ ಐದು ಬಾರಿ ಭೇಟಿ ನೀಡಿದ್ದ ಬಾಪು, ಒಮ್ಮೆ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಖಾದಿ ಉತ್ಸವಕ್ಕೂ ಚಾಲನೆ ನೀಡಿ, ಖಾದಿ ಉಡುಪು ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು.
Related Articles
Advertisement
ಶೇಷಾದ್ರಿ ರಸ್ತೆಯಲ್ಲಿ ಆಗಿನ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ಕೃಷ್ಣಸ್ವಾಮಿ ಅವರು ಕಟ್ಟಿಸಿದ್ದ ಹೊಸ ಮನೆಯಲ್ಲಿ ತಂಗಿದ್ದರು. ಬಳಿಕ ಕಲಾ ಕಾಲೇಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಲಾಲ್‌ಬಾಗ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಿದ್ದರು. ಗಾಂಧೀಜಿ ಭಾಷಣ ಅಂದ್ರೆ ಜನ ಮುಗಿಬೀಳುತ್ತಿದ್ದರು. ದೂರದ ಊರುಗಳಿಂದ ರೈಲಿನಲ್ಲಿ ಬಂದು ಭಾಷಣ ಕೇಳುತ್ತಿದ್ದರು.
ಎರಡನೇ ಭೇಟಿ: ಎರಡನೇ ಬಾರಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದು, ಬ್ರಿಟಿಷರ ದೌರ್ಜನ್ಯದ ವಿರುದ್ಧ ಜನರಿಗೆ ಅರಿವು ಮೂಡಿಸುವ ಸಲುವಾಗಿ. 1920 ಆಗಸ್ಟ್ 21ರಲ್ಲಿ ನಗರಕ್ಕೆ ಆಗಮಿಸಿದ ಗಾಂಧಿ, ಅಸಹಾಕಾರ ಚಳವಳಿ, ಜಲಿಯನ್ ವಲಾಬಾಗ್ ಹತ್ಯಾಕಾಂಡ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದರು.
ಅಂದು ಮಧ್ಯಾಹ್ನ 3 ಗಂಟೆಗೆ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬಂದಿಳಿದ ಗಾಂಧೀಜಿ, ಬೆನ್ಸನ್ ಟೌನ್ ಪ್ರದೇಶದ ಖುದ್ದೂಸ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ನಾಡಿನ ಮೂಲೆ ಮೂಲೆಗಳಿಂದ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆ ಸಭೆಗೆ ಮೈಸೂರಿನಿಂದ ಒಂದು ರೈಲಿನ ತುಂಬ ಜನರು ಆಗಮಿಸಿದ್ದರು.
ಮಳೆ ಬಂದರೂ ಕದಲಲಿಲ್ಲ: “ಗಾಂಧೀಜಿ ಮಾತನಾಡುತ್ತಿದ್ದ ವೇಳೆ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು. ಇಡೀ ಮೈದಾನದ ತುಂಬೆಲ್ಲಾ ನೀರು ತುಂಬಿ ಹೋಯ್ತು. ಆದರೂ, ಮಳೆಯಲ್ಲೇ ಕುಳಿತು ಸಹಸ್ರಾರು ಜನ ಗಾಂಧೀಜಿ ಭಾಷಣ ಆಲಿಸಿದರು. ಗಾಂಧೀಜಿ ಕೂಡ ಮೈಕ್ ಇಲ್ಲದೇ ದೊಡ್ಡ ದ್ವನಿಯಲ್ಲಿ ಮಾತನಾಡಿದರು’ ಎಂದು ಹಿರಿಯ ಇತಿಹಾಸ ತಜ್ಞರಾದ ವೇಮಗಲ್ ಸೋಮಶೇಖರ್ ನೆನಪಿಸಿಕೊಳ್ಳುತ್ತಾರೆ.
ಕುಮಾರ ಕೃಪದಲ್ಲಿ ವಿಶ್ರಾಂತಿ: 1927ರ ಮೇ 6ರಂದು ಗಾಂಧೀಜಿ ಅವರು ಕರ್ನಾಟಕ ಪ್ರವಾಸ ಕೈಗೊಂಡಿದ್ದ. ಬೆಳಗಾವಿ ಪ್ರವಾಸದಲ್ಲಿರುವಾಗ ಗಾಂಧೀಜಿ ಅವರು ಅನಾರೋಗ್ಯಕ್ಕೆ ಒಳಗಾದರು. ಈ ವೇಳೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ ಗಾಂಧೀಜಿ, ಕುಮಾರ ಕೃಪ ಮತ್ತು ನಂದಿ ಬೆಟ್ಟದಲ್ಲಿ ಸುಮಾರು 87 ದಿನಗಳನ್ನು ಕಳೆದಿದ್ದರು. ನಂದಿಬೆಟ್ಟದಲ್ಲಿ 45 ದಿನ ತಂಗಿದ್ದರು. ವಿಶ್ರಾಂತಿಯ ದಿನಗಳಲ್ಲಿ ಸುಮ್ಮನೇ ಕೂರಲು ಬಯಸದ ಗಾಂಧೀಜಿ, ಹೊಸೂರು ರಸ್ತೆಯಲ್ಲಿದ್ದ ಇಂಪೀರಿಯಲ್ ಹಾಲಿನ ಡೇರಿಗೆ ಭೇಟಿ ನೀಡುತ್ತಿದ್ದರು. ಹಾಲಿನ ಡೇರಿ ಗಾಂಧೀಜಿ ಅವರಿಗೆ ಇಷ್ಟವಾದ ಸ್ಥಳವಾಗಿತ್ತು.
ಯಲಹಂಕಕ್ಕೆ ಭೇಟಿ: ವಿಶ್ರಾಂತಿ ಪಡೆಯುತ್ತಲೇ ಗಾಂಧೀಜಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. 1927ರ ಜುಲೈ 2ರಂದು ಯಲಹಂಕದ ಹೆಂಚಿನ ಕಾರ್ಖಾನೆಗೆ ಭೇಟಿ ನೀಡಿದ್ದ ಅವರು, ಕಾರ್ಮಿಕರಿಂದ 500 ರೂ. ನಿಧಿ ಸಂಗ್ರಹಿಸಿದ್ದರು. ಈ ವೇಳೆ ಹೆಂಚಿನ ಕಾರ್ಖಾನೆಯ ಮಾಲೀಕ ವೇಣುಗೋಪಾಲ ಮೊದಲಿಯಾರ್ ಅವರು ಗಾಂಧೀಜಿ ಅವರ ಪ್ರವಾಸಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ, ಕಾರು ನೀಡಲು ಮುಂದಾದರು. ಆದರೆ, ಗಾಂಧೀಜಿ ನಿರಾಕರಿಸಿದ್ದರು.
ಹರಿಜನ ಸಮಾವೇಶ: ಹರಿಜರ ಬಗ್ಗೆ ಅಪಾರ ಒಲವು ಹೊಂದಿದ್ದ ಗಾಂಧೀಜಿ, ಹರಿಜರ ಚಳವಳಿಯಲ್ಲಿ ಭಾಗವಹಿಸಲು 1934ರಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ಕೆಂಗೇರಿಯ ಗುರುಕುಲಾಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಹರಿಜನ ಸಮಾವೇಶದಲ್ಲಿ ಮಾತನಾಡಿದ ಅವರು, ಹರಿಜರ ಉದ್ಧಾರದ ಕುರಿತು ಬೆಳಕು ಚೆಲ್ಲಿದ್ದರು.
ನಂದಿ ಬೆಟ್ಟದಲ್ಲಿ ವಿಶ್ರಾಂತಿ: ಮದ್ರಾಸ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಗಾಂಧೀಜಿ, ಅನಾರೋಗ್ಯಕ್ಕೆ ಒಳಗಾಗಿದ್ದರು. ಇದನ್ನು ಮನಗಂಡು ಆಗಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆಯುವಂತೆ ಕೋರಿಕೊಂಡರು.
ಈ ಆಹ್ವಾನ ಒಪ್ಪಿಕೊಂಡ ಬಾಪು, 1936ರ ಮೇ 11ರಂದು ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು. ರೇಸ್ ಕೋರ್ಸ್ ರಸ್ತೆಯ ಕ್ರೆಸೆಂಟ್ ಹೌಸ್‌ನಲ್ಲೂ (ಈಗಿನ ನ್ಯಾಯಾಂಗ ಅಕಾಡೆಮಿ) ಗಾಂಧೀಜಿ ಕೆಲ ದಿನಗಳ ಕಾಲ ತಂಗಿದ್ದರು ಎಂದು ಹಿರಿಯ ಇತಿಹಾಸ ತಜ್ಞ ವೇಮಗಲ್ ಸೋಮಶೇಖರ್ ಹೇಳುತ್ತಾರೆ.
* ದೇವೇಶ ಸೂರಗುಪ್ಪ