ನಿಡಗುಂದಿ: ಲೋಕಮಾನ್ಯ ತಿಲಕರು ತೀರಿದ ನಂತರ ಸ್ವಾತಂತ್ರ್ಯ ಸಂಗ್ರಾಮದ ಬಾನಂಗಳದಲ್ಲಿ ಕವಿದಿದ್ದ ಕತ್ತಲನ್ನು ಸತ್ಯ-ಅಹಿಂಸೆ ಎಂಬ ಅಸ್ತ್ರ ಹಿಡಿದು ಸ್ವಾತಂತ್ರ್ಯವೆಂಬ ಬೆಳಕಿನ ಆಶಾಕಿರಣ ಮೂಡಿಸಿದವರು ಸ್ವರಾಜ್ಯ ಸೂರ್ಯ ಮಹಾತ್ಮ ಗಾಂಧೀಜಿಯವರು ಎಂದು ಬಿ.ಇಡಿ ಕಾಲೇಜು ಪ್ರಾಂಶುಪಾಲರಾದ ಡಾ| ಸವಿತಾ ದೇಸಾಯಿ ಅಭಿಪ್ರಾಯಪಟ್ಟರು.
ಪಟ್ಟಣದ ಕಮದಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇನಾಳ ಆರ್.ಎಸ್. ಗ್ರಾಮದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ “ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಧೀಜಿಯವರ ಪಾತ್ರ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹಾಗೂ ನಿಡಗುಂದಿ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಕಾಜೂ ವಾಲೀಕಾರ ಬಾಪೂಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರ್‌ಎಂಜಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಪ್ರತಿದಿನ, ಪ್ರತಿಕ್ಷಣ ಬದಲಾಗುತ್ತ ಜಗತ್ತಿಗೆ ತೆರೆದುಕೊಳ್ಳುತ್ತ ಬದುಕನ್ನೇ ಪ್ರಯೋಗ ಶಾಲೆ ಮಾಡಿಕೊಂಡ ಮಹಾತ್ಮನ ಇತಿಹಾಸದ ವಿಸ್ಮಯ ಜಗತ್ತಿನ ಅಚ್ಚರಿ ಎಂದರು.
ಪ್ರಮಾಣಪತ್ರ ವಿತರಣೆ: ಇದೇ ಸಂದರ್ಭದಲ್ಲಿ ಗಾಂಧಿ ಕ್ವಿಜ್ ನಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಾಪೂಜಿ ಪುಸ್ತಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪ್ರದರ್ಶನ: ಬಾಪೂಜಿಯ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟ ಹಾಗೂ ಸಾಧನೆಗಳ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯೋಪಾಧ್ಯಾಯ ಎಸ್.ಎಸ್. ಹೊಸಮನಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಭು ಸಿಂದಗಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅಲಿ ಚಪ್ಪರಬಂದ, ಬಿ.ಬಿ. ಪಾಟೀಲ್, ಜಿ.ವೈ. ಕೆಂಪವಾಡ, ಪಿ.ಎಸ್. ಗುರಡ್ಡಿ, ಎಸ್. ಆರ್. ಬೆಕಿನಾಳ, ಪ್ರಕಾಶ ಕೂಚಬಾಳ, ರಮೇಶ ವಡ್ಡರ ಇದ್ದರು.