ತಿ.ನರಸೀಪುರ: ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ ಸಂಗ್ರಾಮದ ನೇತೃತ್ವವನ್ನು ವಹಿಸಿದ್ದಂತಹ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದೇಶದ ಸಮಸ್ತ ಜನರ ಆಸ್ತಿಯಾಗಿದ್ದು, ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದರು.
ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಚಿನ್ನಂಬಳ್ಳಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿಯಿಂದ ಅಜಯ ಭಾರತ, ಅಟಲ್ ಬಿಜೆಪಿ ಕಾರ್ಯಕ್ರಮದಡಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರಗೊಂಡ ನಂತರ ದೇಶದಲ್ಲಿ ಕುಟುಂಬ ರಾಜಕಾರಣದ ಮೂಲಕ ಅಧಿಕಾರಶಾಗಳಾಗಿದ್ದ ಕಾಂಗ್ರೆಸ್ಸಿಗರು ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಣೆ ಮಾಡುತ್ತಿರುವ ಬಿಜೆಪಿಗೆ ನೈತಿಕತೆ ಪಾಠವನ್ನು ಮಾಡುವ ಯಾವ ಹಕ್ಕೂ ಇಲ್ಲ ಎಂದು ಟಾಂಗ್ ನೀಡಿದರು.
ದೇಶದಲ್ಲಿ ಸ್ವತ್ಛ ಭಾರತ್ ಅಭಿಯಾನವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತ್ಛತೆಗಾಗಿ ಶ್ರಮದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರ 150 ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ 150 ಕಿ.ಮೀ. ಪಾದಯಾತ್ರೆಯ ಮೂಲಕ ಜನರನ್ನು ತಲುಪಲು ಸೂಚನೆ ನೀಡಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಹಳ್ಳಿ ಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೂಮ್ಮೆ ಬಿಜೆಪಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರ ತರಲು ಸಜಾಗುತ್ತೇವೆ ಎಂದು ತಿಳಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸಮಿತಿಗಳ ಸೂಚನೆಯಂತೆ ಮಹಾತ್ಮ ಗಾಂಧಿಜೀ ಅವರ ಒಂದೂವರೆ ಶತಮಾನದ ಜಯಂತ್ಯುತ್ಸವ ಪ್ರಯುಕ್ತ ಕ್ಷೇತ್ರಾದಾದ್ಯಂತ 150 ಕಿ.ಮೀ ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿಯ ವಿಭಾಗೀಯ ಪ್ರಭಾರಿ ಎನ್.ಪಿ.ಫಣೀಶ್, ರಾಜ್ಯ ಉಪಾಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ, ಕಾರ್ಯಕಾರಿಣಿ ಸದಸ್ಯೆ ಆರ್.ಭಾಗ್ಯಶ್ರೀ ಭಟ್, ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಅಶೋಕ, ಜಿಪಂ ಸದಸ್ಯರಾದ ಸದಾನಂದ, ಗುರುಸ್ವಾಮಿ ಸಿದ್ಧಪ್ಪ, ವಕೀಲ ಪರಮೇಶ್, ಕ್ಷೇತ್ರಾಧ್ಯಕ್ಷ ಎ.ಎನ್.ಶಿವಯ್ಯ, ಕಾರ್ಯದರ್ಶಿ ಬಿ.ಮಹೇಶ, ಕೋಟೆ ಪ್ರಕಾಶ್ ಇತರರು ಇದ್ದರು.