Advertisement
ಗ್ರಾ.ಪಂ.ಗಳ ಆರ್ಥಿಕ ಮತ್ತು ಆಡಳಿತಾತ್ಮಕ ಸಾಧನೆಯನ್ನು ಆಧರಿಸಿ ಅವುಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತೀ ತಾಲೂಕಿನ ಒಂದು ಗ್ರಾ.ಪಂ.ಗೆ ಮಹಾತ್ಮಾ ಗಾಂಧೀಜಿ ಜಯಂತಿ ಯಾದ ಅ. 2ರಂದು ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಆದರೆ 2019-20 ಮತ್ತು 2020-21 ಸಾಲಿನಲ್ಲಿ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿದ್ದರೂ ಕೊರೊನಾ ಕಾರಣದಿಂದ ಪುರಸ್ಕಾರ ನೀಡಲಾಗಿರಲಿಲ್ಲ. ಈ ವರ್ಷ ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಗಾಂಧಿ ಜಯಂತಿಗೆ 21 ದಿನಗಳಷ್ಟೇ ಬಾಕಿ ಇದೆ.
ಅಧಿಕಾರ ವಿಕೇಂದ್ರೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಗ್ರಾ.ಪಂ.ಗಳು 24ಕ್ಕೂ ಹೆಚ್ಚು ಇಲಾಖೆಗಳ 29 ಅಭಿವೃದ್ಧಿ ವಿಷಯಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತವೆ. ಜತೆಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ, ಪೌರ ಸೇವೆಗಳ ಜವಾಬ್ದಾರಿ ಅವುಗಳ ಮೇಲಿದೆ. ಪಂಚಾಯತ್‌ಗಳಿಗೆ ಹೆಚ್ಚು ಪ್ರೋತ್ಸಾಹ, ನೆರವು ಸಿಕ್ಕಿದರೆ ಇನ್ನಷ್ಟು ಚೆನ್ನಾಗಿ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಇದೇ ಉದ್ದೇಶಕ್ಕಾಗಿ ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯತ್‌ಗಳಿಂದ ಬೇರೆ ಪಂಚಾಯತ್‌ಗಳಿಗೆ ಪ್ರೇರಣೆ ಸಿಗಲಿದೆ. ಆದರೆ ಎರಡು ವರ್ಷಗಳ ಪುರಸ್ಕಾರ ಸಿಕ್ಕಿಲ್ಲ. ಈ ವರ್ಷ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯತ್‌ಗಳು ಬೇಸರ ವ್ಯಕ್ತಪಡಿಸಿವೆ.
Related Articles
ಸ್ಥಳೀಯ ಸರಕಾರಗಳಾದ ಗ್ರಾ.ಪಂ.ಗಳನ್ನು ಸದೃಢಗೊಳಿಸುವ ಹಾಗೂ ಉತ್ತಮ ಆಡಳಿತ ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದ ಗಾಂಧಿ ಗ್ರಾಮ ಪುರಸ್ಕಾರ ವಿತರಣೆಯನ್ನು ಸರಕಾರ ಮುಂದುವರಿಸ ಬೇಕು. ಈ ಹಿಂದೆ ಆಯ್ಕೆ ಮಾಡಿರುವ ಗ್ರಾ.ಪಂ.ಗಳಿಗೆ ಪುರಸ್ಕಾರಗಳನ್ನು ನೀಡಬೇಕು ಮತ್ತು ಪುರಸ್ಕಾರದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
Advertisement
ಎರಡು ವರ್ಷಗಳಿಂದ ಗಾಂಧಿಗ್ರಾಮ ಪುರಸ್ಕಾರ ನೀಡಿಲ್ಲ. ಈ ವರ್ಷ ಇಲ್ಲಿಯ ವರೆಗೆ ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿಲ್ಲ. ಇದಕ್ಕೆ ಪಂಚಾಯತ್‌ಗಳಿಂದ ಬೇಸರ ವ್ಯಕ್ತವಾಗುತ್ತಿದೆ. ಆದ್ದರಿಂದ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.
-ಕಾಡಶೆಟ್ಟಿಹಳ್ಳಿ ಸತೀಶ್,
ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ
ಮಹಾ ಒಕ್ಕೂಟ