ಉಡುಪಿ: ಗಣಪತಿ ಮೂರ್ತಿ ರಚನೆಕಾರ, ಹವ್ಯಾಸಿ ನಾಟಕ ಕಲಾವಿದ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ನಿವಾಸಿ ಶಿರಿಬೀಡು ಸದಾಶಿವ ಆಚಾರ್ಯ (65) ಹೃದಯಾಘಾತದಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಆಗಸ್ಟ್ 3 ರಂದು ನಿಧನಹೊಂದಿದರು.
ಶಿರಿಬೀಡು ಸದಾಶಿವ ಆಚಾರ್ಯ ಅವರು ಗಣಪತಿ ಹಾಗೂ ನವರಾತ್ರಿಯ ದೇವಿಯ ಆವೆ ಮಣ್ಣಿನ ವಿಗ್ರಹವನ್ನು ರಚಿಸುವ ಕಲಾವಿದರಾಗಿದ್ದು, ಉಡುಪಿಯ ಸುತ್ತಮುತ್ತಲಿನ ಕಿನ್ನಿಮೂಲ್ಕಿ, ಮಾರುತಿ ವೀಥಿಕಾ, ಬನ್ನಂಜೆ ಮಹಾಲಿಂಗೇಶ್ವರ, ಪರ್ಕಳ ಸಾರ್ವಜನಿಕ , ರುಕ್ಮಿಣಿ ರೆಸಿಡೆನ್ಸಿ, ಟ್ಯಾಪ್ಮಿ ಮಣಿಪಾಲ ಮೊದಲಾದ ಸಾರ್ವಜನಿಕ ಗಣೇಶೋತ್ಸವಗಳಿಗೆ ಹಾಗೂ ಶಾರದೋತ್ಸವಗಳಿಗೆ ಕಲಾತ್ಮಕ ವಿಗ್ರಹಗಳನ್ನು ಕಳೆದ 45 ವರ್ಷಗಳಿಂದಲೂ ನಿರ್ಮಿಸುತ್ತಿದ್ದರು.
ಇತ್ತೀಚೆಗೆ ಅವರು ಮನೆಯಲ್ಲಿ ಪೂಜಿಸುವ ಭಕ್ತಾದಿಗಳಿಗೆ ಪರಿಸರಸ್ನೇಹಿ, ಬಣ್ಣ ರಹಿತ ಗಣಪತಿ ಮೂರ್ತಿಯನ್ನು ನಿರ್ಮಾಣ ಮಾಡಿಕೊಟ್ಟು ಸೈ ಎನಿಸಿಕೊಂಡಿದ್ದರು.
ಇದಲ್ಲದೆ ಹವ್ಯಾಸಿ ನಾಟಕ ಕಲಾವಿದರಾದ ಸದಾಶಿವ ಆಚಾರ್ಯರು ತುಳು ನಾಟಕಗಳಾದ ಬಯ್ಯ ಮಲ್ಲಿಗೆ, ಎಂಕ್ ಲಾ ಮದಿಮೆ ಆವೋಡು, ಗಂಗೆ ಗೌರಿ ಮೊದಲಾದ ನಾಟಕಗಳಲ್ಲಿ ಸ್ತ್ರೀಪಾತ್ರದಲ್ಲಿ ಮಿಂಚಿದ್ದರು.
ಉಳಿದ ಸಮಯದಲ್ಲಿ ಕಲಾತ್ಮಕ ಕುಸಿರಿ ಚಿನ್ನಾಭರಣಗಳನ್ನು ತಯಾರಿಸುತ್ತಿದ್ಧು, ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ ,ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.